ಜೀವ ಹಾಗೂ ಜೀವನದ ಆಕ್ಸಿಜನ್ : 02 ಚಿತ್ರವಿಮರ್ಶೆ(ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : 02
ನಿರ್ದೇಶಕರು : ರಾಘವ್ , ಪ್ರಶಾಂತ್ ರಾಜೇಂದ್ರ
ನಿರ್ಮಾಪಕಿ : ಅಶ್ವಿನಿ ಪುನೀತ್ ರಾಜ್ ಕುಮಾರ್
ಸಂಗೀತ : ವಿವನ್ ರಾಧಾಕೃಷ್ಣ
ಛಾಯಾಗ್ರಹಕ : ನವೀನ್ ಕುಮಾರ್
ತಾರಾಗಣ : ಆಶಿಕಾ ರಂಗನಾಥ್ , ಪ್ರವೀಣ್ ತೇಜ್ , ರಾಘವ್ ನಾಯಕ್ , ಸಿರಿ ರವಿಕುಮಾರ್ , ಪ್ರಕಾಶ್ ಬೆಳವಾಡಿ , ಕೆ. ಎಸ್. ಶ್ರೀಧರ್ , ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಮುಂತಾದವರು…
ಜಗತ್ತಿನ ಪ್ರತಿಯೊಂದು ಆವಿಷ್ಕಾರಕ್ಕೂ ಅದರದೇ ಆದ ಪೂರ್ವ ತಯಾರಿ, ಅವಿರತ ಶ್ರಮ, ಅದಕ್ಕೆ ಬೇಕಾದ ಸಹಕಾರ ಸಿಕ್ಕಿದಾಗಲೇ ಅದಕ್ಕೊಂದು ಬೆಲೆ ಹಾಗೂ ಅದನ್ನು ನೋಡುವ , ಬಳಸುವ ಪರಿ ಶುರುವಾಗೋದು. ಅದರಲ್ಲೂ ಮಾನವನ ಜೀವ ಉಳಿಸುವ ವೈದ್ಯಕೀಯ ಕ್ಷೇತ್ರದಲ್ಲೇ ಒಂದು ಸಂಚಲನ ಮೂಡಿಸುವ ಔಷಧಿ ಸಿಗುವ ಸಮಯ ಬಂದಿದ್ದು , ಅದು ಈಗಾಗಲೇ ವಿದೇಶದಲ್ಲಿ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸನ್ನು ಕೂಡ ಕಂಡಿದ್ದಾರಂತೆ. ಮನುಷ್ಯ ಸತ್ತ ಕೆಲವೇ ಗಂಟೆಗಳಲ್ಲಿ ಔಷಧಿಯನ್ನ ಪ್ರಯೋಗ ಮಾಡಿದರೆ ಮತ್ತೆ ಜೀವ ಬರುವ ಸಾಧ್ಯತೆ ಇದೆ ಎಂಬ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಜೀವ , ಜೀವನ , ಪ್ರೀತಿಯ ಸುತ್ತ ಬೆಸೆದು ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “O2”.
ಬಾಲ್ಯದಿಂದಲೂ ಜೀವನದ ನೋವು , ನಲಿವುಗಳನ್ನು ಕಂಡು , ಬೆಳೆದಂಥ ಹುಡುಗಿ ಶ್ರದ್ಧಾ ನಾಯಕ್(ಆಶಿಕಾ ರಂಗನಾಥ್). ಈಕೆಯ ತಂದೆ ಯಕ್ಷಗಾನ ಕಲಾವಿದ. ಹೃದಯಾಘಾತದಿಂದ ಸತ್ತ ತಂದೆಯ ನೆನಪು ಸದಾ ಕಾಡುತ್ತಲೇ ಬೆಳೆಯುವ ಶ್ರದ್ದಾ ಹೃದ್ರೋಗ ವೈದ್ಯೆಯಾಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಸೇವೆ ಸಲ್ಲಿಸುತ್ತಿರುತ್ತಾಳೆ.
ತನ್ನ ವೃತ್ತಿಯಲ್ಲಿ ಹೊಸ ಆವಿಷ್ಕಾರಕ್ಕೆ ಮುಂದಾಗುತ್ತಾಳೆ. ಜೀವನ್ಮರಣ ಹೋರಾಟ , ಕೋಮ , ಪ್ರಾಣ ಕಳೆದುಕೊಂಡಂತಹ ವ್ಯಕ್ತಿಗಳ ದೇಹಕ್ಕೆ O2 (ಲಿಕ್ವಿಡ್ ಆಕ್ಸಿಜನ್ ) ಮೂಲಕ ಮತ್ತೆ ಜೀವ ತರುವ ಶಕ್ತಿಯನ್ನು ನೀಡುವ ನಿಟ್ಟಿನಲ್ಲಿ ಶ್ರಮ ಪಡುವ ಈ ಡಾಕ್ಟರನ ಬುದ್ಧಿವಂತಿಕೆಗೆ ತನ್ನ ಹಾಸ್ಪಿಟಲ್ ನ ಉಸ್ತುವಾರಿ ಡಾಕ್ಟರ್ ರಾಯ್ ಕೆಲವು ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಾರೆ.
ಈ ಪ್ರಯತ್ನಕ್ಕೆ ದೊಡ್ಡ ಬಿಜಿನೆಸ್ ಮ್ಯಾನ್ ಮುಜುಂದರ್ ಹಣದ ವಿಚಾರ ಸೇರಿದಂತೆ ಪ್ರತಿಯೊಂದಕ್ಕೂ ಸಹಾಯ ನೀಡಲು ಮುಂದಾಗುತ್ತಾರೆ. ಈಕೆಯ ಪ್ರಯತ್ನಕ್ಕೆ ಮತ್ತೆ ಮೂವರು ಸ್ಪೆಷಲಿಸ್ಟ್ ಡಾಕ್ಟರ್ಸ್ ಸೃಷ್ಟಿ , ದೇವ್ , ವೆಂಕಿ ಸೇರಿಕೊಳ್ಳುತ್ತಾರೆ. ಇದನ್ನೆಲ್ಲಾ ಗಮನಿಸುವ ಮತ್ತೊಬ್ಬ ಹಿರಿಯ ಡಾ. ಮೃತ್ಯುಂಜಯ ಜೀವದ ಜೊತೆ ಆಟ ಆಡುವುದು ಬೇಡ , ಪ್ರತಿಯೊಂದುಕ್ಕೂ ಪ್ರೋಟಕಾಲ್ , ರೂಲ್ಸ್ , ರೆಗುಲೇಷನ್ ಜೊತೆಗೆ ಡಾಕ್ಟರ್ ಗಳು ಫಾಲೋ ಮಾಡುವುದು ಅಗತ್ಯ ಎಂದು ತಿಳಿ ಹೇಳುತ್ತಾನೆ. ಆದರೆ ಅದಕ್ಕೆ ವಿರುದ್ಧವಾಗಿ ಉಳಿದವರು ಸಾಗುತ್ತಾರೆ.
ಮೊದಲಿನಿಂದಲೂ ಡಾಕ್ಟರ್ ಶ್ರದ್ಧಾ ಗೆ ಎಫೆಮ್ ಕೇಳುವ ಹವ್ಯಾಸ. ಆರ್ ಜೆ ಓಶೋ(ರಾಘವ್ ನಾಯಕ್) ತನ್ನ ಮಾತಿನ ಚಮತ್ಕಾರದಲ್ಲೇ ಜೀವನ , ಆಸೆ , ಪ್ರೀತಿಯ ಸುಳಿಯಲ್ಲಿ ಗೆಳತಿ ಶ್ರದ್ಧಾಳ ಮನಸು ಗೆಲ್ಲುತ್ತಾನೆ. ಜೀವನದಲ್ಲಿ ವಿದೇಶಕ್ಕೆ ಹೋಗಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಎಂಬ ಕನಸು ಇದರ ನಡುವೆ ಪ್ರೀತಿಯ ತಳಮಳ.
ಒಂದು ಕಡೆ ಶ್ರದ್ಧಾ ಗೆ ತಂದೆಯ ನೆನಪು , ಮತ್ತೊಂದೆಡೆ ತನ್ನ ಗೆಳೆಯನ ಪ್ರೀತಿಯ ಸುಳಿ ಆಗಾಗ ನೆನಪಿಸುತ್ತಿರುತ್ತದೆ. ಡಾಕ್ಟರ್ ಶ್ರದ್ಧಾ ಅಂಡ್ ಟೀಮ್ ತಮ್ಮ ಟ್ರಯಲ್ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ಕೆಲಸಕ್ಕೆ ಒಬ್ಬ ಸತ್ತ ವ್ಯಕ್ತಿಯ ದೇಹವನ್ನು ಬಳಸುವಷ್ಟರಲ್ಲಿ ಅಗ್ನಿ ಅವಗಡ ಸಂಭವಿಸಿ ದೊಡ್ಡ ಅನಾಹುತ ಎದುರಾಗುತ್ತದೆ. ಅದು ಡಾಕ್ಟರ್ಸ್ಗಳ ಜೀವನಕ್ಕೆ ದೊಡ್ಡ ಸಮಸ್ಯೆಯಾಗಿ ಹಲವು ಏರುಪೇರುಗಳ ನಡುವೆ ಕೊನೆ ಹಂತಕ್ಕೆ ಬಂದು ನಿಲ್ಲುತ್ತದೆ.
O2 ಪ್ರಯೋಗ ಆಗುತ್ತಾ…
ಸತ್ತ ವ್ಯಕ್ತಿ ಯಾರು…
ಡಾ. ಶ್ರದ್ಧಾ ಪ್ರೀತಿ ಏನಾಗುತ್ತೆ…
ಕ್ಲೈಮಾಕ್ಸ್ ಉತ್ತರ ಏನು… ಇದೆಲ್ಲದರ ಮಾಹಿತಿಗಾಗಿ ನೀವು O2 ಚಿತ್ರ ನೋಡಬೇಕು.
ಪಿ.ಆರ್. ಕೆ. ಪ್ರೊಡಕ್ಷನ್ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಿಸಿರುವ ಈ ಚಿತ್ರದ ಕಥೆಯನ್ನು ಪುನೀತ್ ರಾಜ್ ಕುಮಾರ್ ಒಪ್ಪಿಕೊಂಡಿದ್ದ ಮೇಲೆ ಶುರುವಾಗಿದ್ದಂತೆ. ಈ ವಿಭಿನ್ನ ಪ್ರಯೋಗಾತ್ಮಕ ಔಷಧಿ ಬಹಳ ವರ್ಷಗಳ ಹಿಂದೆ ಯಶಸ್ಸು ಕಂಡಿದ್ದರೆ ಪುನೀತ್ ಬದುಕಿಗೂ ದಿವ್ಯ ಔಷಧಿ ಸಿಕ್ಕಂತ ಆಗುತ್ತಿತ್ತು. ಮೆಡಿಕಲ್ ರಿಸರ್ಚ್ ನಲ್ಲಿ ಈ ವಿಚಾರವಾಗಿ ಒಂದಷ್ಟು ಗೊಂದಲಗಳು ಇನ್ನು ಮುಂದುವರಿಯುತ್ತಾ ಸಾಗಿರಬಹುದು.
ಪ್ರಾಣಿಗಳ ಮೇಲೆ ಈ ಪ್ರಯೋಗ ಯಶಸ್ಸು ಕಂಡಿದ್ದರು , ಮನುಷ್ಯರ ಮೇಲೆ ಪ್ರಯೋಗಕ್ಕೆ ಅಡ್ಡಿ , ಆತಂಕಗಳು ಕಂಡಿದೆ. ಈ ವಿಚಾರವಾಗಿ ಯುವ ನಿರ್ದೇಶಕರಾದ ರಾಘವ್ ಹಾಗೂ ಪ್ರಶಾಂತ್ ರಾಜೇಂದ್ರ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ಬಹಳ ಕುತೂಹಲಕಾರಿಯಾಗಿದೆ. ಹೊಸ ವಿಚಾರ , ವೈದ್ಯಕೀಯ ಕ್ಷೇತ್ರದ ಸವಾಲು ಹಾಗೂ ಸಮಸ್ಯೆ , ಅದರಲ್ಲೊಂದು ಪ್ರೀತಿಯ ಸೆಳೆತ , ತಳಮಳ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆಯುತ್ತಾ ಸಾಗಿದರು ಕೆಲವು ಸನ್ನಿವೇಶಗಳು ಗೊಂದಲ ಮೂಡಿಸುವಂತೆ ಸಾಗಿದೆ. ಇನ್ನು ಈ ಚಿತ್ರದ ಸಂಗೀತ , ಛಾಯಾಗ್ರಹಣ ಹಾಗೂ ತಾಂತ್ರಿಕ ಕೆಲಸವು ಅಷ್ಟೇ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಇನ್ನು ಡಾಕ್ಟರ್ಸ್ ಪಾತ್ರಗಳಲ್ಲಿ ಅಭಿನಯಿಸಿರುವ ಆಶಿಕಾ ರಂಗನಾಥ್ ಬಹಳ ನ್ಯಾಚುರಲ್ ಆಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಪ್ರವೀಣ್ ತೇಜ್ , ರಾಘವ ನಾಯಕ್ , ಸಿರಿ ರವಿಕುಮಾರ್ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ವಿಶೇಷವಾಗಿ ಪ್ರಕಾಶ್ ಬೆಳವಾಡಿ ತಮ್ಮ ಗತ್ತು ಮಾತಿನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಕೆ. ಎಸ್. ಶ್ರೀಧರ್ , ಗೋಪಾಲಕೃಷ್ಣ ದೇಶಪಾಂಡೆ , ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ವೈದ್ಯಕೀಯ ಕ್ಷೇತ್ರದ ಥ್ರಿಲ್ಲರ್ ಕಂಟೆಂಟ್ ಜೊತೆಗೆ ಪ್ರೀತಿ , ಆತ್ಮದ ಸುಳಿವು ಹೊರ ಹಾಕಿರುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.