ಸರಿ ದಾರಿ ತೋರುವ “3ದೇವಿ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : 3ದೇವಿ”
ನಿರ್ದೇಶಕ : ಅಶ್ವಿನ್ ಮ್ಯಾಥ್ಯೂ
ನಿರ್ಮಾಪಕ : ಅಶ್ವಿನ್
ಸಂಗೀತ : ಡಾಸ್ ಮೋಡ್
ಛಾಯಾಗ್ರಹಣ : ಕುಂಜುನ್ನಿ
ಸಂಕಲನ: ಸುನ್ನೀ ಸೌರವ್
ತಾರಾಗಣ : ಶುಭಾ ಪೂಂಜಾ, ಜ್ಯೋತ್ಸ್ನಾ ರಾವ್ , ಸಂಧ್ಯಾ , ಅಶ್ವಿನ್ ಮ್ಯಾಥ್ಯೂ, ಜಯದೇವ್ , ಅಶ್ವಿನ್ ಕಕುಮಾನ್, ಅಶೋಕ್ ಮಂದಣ್ಣ, ಪಿ.ಡಿ. ಸತೀಶ್ ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರಿಗೂ ಸರಿಯಾದ ಸಮಯಕ್ಕೆ ಕಾಲ ಪಾಠ ಕಲಿಸುತ್ತದೆ ಅನ್ನೋ ಮಾತಿದೆ. ಅದು ಯಾವ ರೀತಿ , ಹೇಗೆ ಅನ್ನುವುದೇ ನಿಗೂಢ. ಮಾಸ್ತವನ ದೇವಿ ನೆಲೆಯ ದಟ್ಟ ಅರಣ್ಯದ ನಡುವೆ ಒಬ್ಬ ಕಾಡು ಮನುಷ್ಯ ಹೇಳುವ ಹೆಣ್ಣು ಹುಲಿ ಬೇಟೆ ಆಡಲು ಬಂದವನ ಪರಿಸ್ಥಿತಿಯ , ಶಕ್ತಿ ದೇವಿಯು ತೋರುವ ದಾರಿ , ಕಾಡು , ನಾಡು , ಪ್ರಾಣಿ , ಪರಿಸರದ ಜೊತೆಗೆ ಮನುಷ್ಯನ ಮನಸ್ಥಿತಿ ಬಣ್ಣದ ಬದುಕಿನ ಎರಡು ಮುಖಗಳ ದರ್ಶನ ಮಾಡಿಸುತ್ತಾ ಮೂರು ದಾರಿ ಒಂದೆಡೆ ಕೊಡುವಂತೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “3ದೇವಿ”.
ಸ್ಟಾರ್ ನಟಿ ವಿಜಯಲಕ್ಷ್ಮಿ (ಶುಭಾಪೂಂಜಾ) ಶಕ್ತಿ ದೇವಿ ಪಾತ್ರದಲ್ಲಿ ಚಿತ್ರೀಕರಣದ ಸ್ಥಳದಲ್ಲಿ ಬಿಸಿ ಇದ್ದರೂ ತನ್ನ ಗೆಳತಿ ಮರಿಯಾ ( ಸಂಧ್ಯಾ) ಮದುವೆಗೆ ಹೋಗಲು ನಿರ್ದೇಶಕರ ಬಳಿ ಅನುಮತಿ ಕೇಳಿದರು ಸಿಗುವುದಿಲ್ಲ , ಈ ಗೊಂದಲದ ನಡುವೆ ಆಕೆಯ ಸಹಾಯಕಿ ಶರಣ್ಯ ( ಜ್ಯೋತ್ಸ್ನಾ ) ಸಹಾಯದ ಮೂಲಕ ಕಾರಿನಲ್ಲಿ ಎಸ್ಕೇಪ್ ಆಗಿ ಚರ್ಚ್ ಬಳಿ ಬರುತ್ತಿದ್ದಂತೆ, ನಾನಾ ಕಾರಣಕ್ಕೆ ನೊಂದ ಮರಿಯಾ ತನ್ನ ಪ್ರೇಮಿಯನ್ನು ಬಿಟ್ಟು ಹೊರಬಂದು ಗೆಳತಿಯರ ಜೊತೆ ಹೊರಡುತ್ತಾಳೆ.
ಇನ್ನು ಚಿತ್ರೀಕರಣದ ಸ್ಥಳಕ್ಕೆ ಬರುವ ನಿರ್ಮಾಪಕ (ಜಯದೇವ್) ಹಾಗೂ ಅವನ ಬಂಟನಿಗೆ ಶೂಟಿಂಗ್ ಸ್ಪಾಟ್ ನಲ್ಲಿ ನಡೆದ ಘಟನೆಗಳು ತಿಳಿದು ನಟಿಯನ್ನ ಹುಡುಕುತ್ತಾ ಹೊರಡುತ್ತಾನೆ. ಮತ್ತೊಂದೆಡೆ ತನ್ನದೇ ಒಂದು ಗುರಿ ಇಟ್ಟುಕೊಂಡು ಹೆಂಡತಿಯ ಮಾತನ್ನು ಲೆಕ್ಕಿಸದೆ ಅರಣ್ಯದಲ್ಲಿ ಬೇಟೆಗಾಗಿ ಸಾಗುವ ವ್ಯಕ್ತಿ ( ಅಶ್ವಿನ್ ಮ್ಯಾಥ್ಯೂ). ಈ ಮೂವರ ಪಯಣದ ಆಲೋಚನೆ ಬೇರೆ ಬೇರೆಯಾದರು ಸರಿ ದಾರಿ ಕಾಣುವ ಸತ್ಯ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ.
ಯಾವ ದಾರಿ…
ಈ ಮೂವರ ಆಲೋಚನೆ ಏನು…
3ದೇವಿ ಯಾಕೆ…
ಅರಣ್ಯದಲ್ಲಿ ಏನಾಗುತ್ತೆ…
ಕ್ಲೈಮಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ನೀವು ಈ ಚಿತ್ರವನ್ನು ನೋಡಲೇಬೇಕು.
ಈ ಚಿತ್ರದ ಕಥಾ lವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಅಶ್ವಿನ್ ಮ್ಯಾಥ್ಯೂ ಆಲೋಚನೆ ಬಹಳ ವಿಭಿನ್ನವಾಗಿದೆ. ಚಿತ್ರರಂಗದ ಕೆಲವೊಂದು ಸ್ಥಿತಿಗತಿ , ನಟಿಯರು ಎದುರಿಸುವ ಸಮಸ್ಯೆ , ನಿರ್ಮಾಪಕರ ಆತಂಕ , ನಿರ್ದೇಶಕರ ಮನಸ್ಥಿತಿಯ ಕೆಲವೊಂದಷ್ಟು ಘಟನೆಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಂತಿದೆ.
ನಮ್ಮ ಸ್ಥಳಕ್ಕೆ ಪ್ರಾಣಿಗಳು , ಪ್ರಾಣಿಗಳ ಸ್ಥಳಕ್ಕೆ ನಾವು ಹೋಗಬಾರದೆಂಬ ವಿಚಾರದ ಜೊತೆಗೆ ಅರಣ್ಯ ಸಂರಕ್ಷಣೆಯು ಮುಖ್ಯ ಎಂಬಂತಿದೆ. ಮನುಷ್ಯನ ದುರಾಸೆ ತಕ್ಕ ಉತ್ತರವು ಸಿಕ್ಕಂತಿದೆ. ಹಲವು ಸೂಕ್ಷ್ಮಗಳು ಕಂಡರು , ಚಿತ್ರದ ಓಟ ನಿಧಾನಗತಿಯಾಗಿದ್ದು ನೋಡಲು ಕೊಂಚ ಆಯಾಸವೆನಿಸುತ್ತದೆ. ಆಕ್ಷನ್ , ಥ್ರಿಲ್ಲಿಂಗ್ ಮೂಲಕ ಸರಿ ದಾರಿಯಲ್ಲಿ ಗಮನ ಸೆಳೆಯುವಂತೆ ಕಂಡಿದೆ. ಇನ್ನು ಛಾಯಾಗ್ರಹಕ , ಸಂಕಲನ ಕೆಲಸ ಉತ್ತಮವಾಗಿದ್ದು , ಸಂಗೀತ ಸುಮಧುರವಾಗಿ ಹಾಡುಗಳು ಗುನುಗುವಂತಿದ್ದು , ಹಿನ್ನಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ.
ಒಬ್ಬ ಸಿನಿಮಾ ನಟಿಯ ಪಾತ್ರದಲ್ಲೇ ನಟಿ ಶುಭಾ ಪೂಂಜಾ ಬಹಳ ನೈಜ್ಯವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದು, ದೇವಿಯಾಗಿ ದರ್ಶನ ಕೊಟ್ಟರು , ಬೋಲ್ಡ್ ಅಂಡ್ ಬ್ಯೂಟಿಫುಲ್ ಎನ್ನುವಂತೆ ನೇರ ಮಾತುಗಳಲ್ಲಿ ಗಮನ ಸೆಳೆದು, ಆಕ್ಷನ್ ಗೆ ಸೈ ಎನ್ನುವಂತೆ ಹೊಡೆದಾಡಿ , ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕಿಯಾಗಿ ಕೂಡ ಕೆಲಸ ಮಾಡಿರುವುದು ವಿಶೇಷ.
ಹಾಗೆ ನಟಿಯರಾದ ಸಂಧ್ಯಾ ಹಾಗೂ ಜ್ಯೋತ್ಸ್ನಾ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಭರ್ಜರಿ ಆಕ್ಷನ್ ಮೂಲಕ ಮಿಂಚಿದ್ದಾರೆ.
ನಿರ್ದೇಶಕ ಅಶ್ವಿನಿ ಮ್ಯಾಥ್ಯೂ ಕೂಡ ಒಬ್ಬ ಬೇಟೆಗಾರನಾಗಿ ಸೈಲೆಂಟ್ ಲುಕ್ ನಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಟ್ರ್ಯಾಕ್ ಎಂದರೆ ನಿರ್ಮಾಪಕನ ಪಾತ್ರ ಮಾಡಿರುವ ಜೈದೇವ್ ಪ್ರಸ್ತುತ ಕೆಲವು ನಿರ್ಮಾಪಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿರುವ ರೀತಿ ಅದ್ಭುತವಾಗಿದೆ. ಅದೇ ರೀತಿ ಹಿಂದಿ ಮಾತನಾಡುವ ಮುದ್ದಾದ ಬೆಡಗಿ ಫ್ರೇಯ ಕೊಠಾರಿ ಗಮನ ಸೆಳೆದಿದ್ದಾರೆ. ಉಳಿದಂತೆ ಅಭಿನಯಿಸಿರುವ ನಂದಗೋಪಾಲ್ , ತಿಲಕ್ ರಾಜ್ , ನಿಖಿಲ್ , ಪಿ.ಡಿ. ಸತೀಶ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರಕ್ಕೆ ಪೂರಕವಾಗಿ ಸಾಗಿದೆ. ಒಟ್ಟಾರೆ ಅಡ್ವೆಂಚರ್ , ಆಕ್ಷನ್ , ಥ್ರಿಲ್ಲರ್ ಪ್ರಿಯರಿಗೆ ಬೇಗ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.