Cini NewsSandalwood

ಸೂರಜ್ ಪ್ರೊಡಕ್ಷನ್ಸ್ ರವರ “45” ಚಿತ್ರದ ಚಿತ್ರೀಕರಣ ಮುಕ್ತಾಯ.

ಕರುನಾಡ ‌ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ.

ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಪತ್ರಿಕಾಗೋಷ್ಠಿಗೂ ಮುನ್ನ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ನಿರ್ಮಾಪಕ ರಮೇಶ್ ರೆಡ್ಡಿ ಅವರು ಸನ್ಮಾನಿಸಿದರು.

ಮೊದಲು ಮಾತನಾಡಿದ ಶಿವರಾಜಕುಮಾರ್ ಅವರು, “45” ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದಲ್ಲಿ ನಾವು ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ದ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ.

ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲಿಕ್ಕೆ ಆಗಲ್ಲ. ಅಷ್ಟು ಅದ್ಭುತ ನಿರ್ದೇಶನ ಅವರದು. ಅಷ್ಟೇ ಅದ್ದೂರಿಯಾಗಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಹಸ ಸನ್ನಿವೇಶಗಳು ಸೂಪರ್. “45” ಇಡೀ ಭಾರತೀಯರೆ ಮೆಚ್ಚುವಂತಹ ಆಕ್ಷನ್ ಚಿತ್ರವಾಗಲಿದೆ ಎಂದರು.

ಕಥೆಯನ್ನು ಅನಿಮೇಷನ್‌ ಮೂಲಕ ಹೇಳಿದ್ದನ್ನು ನಾನು ಹಾಲಿವುಡ್ ನಲ್ಲಿ ಕೇಳಿದ್ದೆ. ಆದರೆ ಅರ್ಜುನ್ ಜನ್ಯ ಅವರು ಕನ್ನಡದಲ್ಲೇ ಅದನ್ನು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಅನಿಮೇಷನ್‌ ಮೂಲಕ ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನೂ ಮಾಡಿದ್ದಾರೆ. ಅರ್ಜುನ್ ಜನ್ಯ ಅವರು ಅಂದುಕೊಂಡಂತೆ ಚಿತ್ರ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ಸಾಥ್ ನೀಡಿದ್ದಾರೆ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಅಭಿನಯಿಸಿದ್ದು ಸಂತಸವಾಗಿದೆ ಎಂದು ತಿಳಿಸಿದ ನಟ ಉಪೇಂದ್ರ, ಚಿತ್ರೀಕರಣ ಮುಗಿದಿದೆ. ಚಿತ್ರವನ್ನು ಅದಷ್ಟು ಬೇಗ ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು.

ಶಿವಣ್ಣ ಅವರ ಚಿತ್ರಗಳನ್ನು ನೋಡುತ್ತಾ ವಿಷಲ್ ಹೊಡೆಯುತ್ತಿದ್ದೆ. ಉಪೇಂದ್ರ ಅವರ “A” ಚಿತ್ರದ ಪೋಸ್ಟರನ್ನು ಬೆರಗಾಗಿ ನೋಡುತ್ತಿದ್ದೆ. ಅವರಿಬ್ಬರ ಅಭಿಮಾನಿ ನಾನು. ಇಂದು ಅವರ ಜೊತೆಗೆ ನಟಿಸಿರುವುದು ನನ್ನ ಭಾಗ್ಯ. ಇನ್ನು “45”, ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಅಂತ ಕನ್ನಡಿಗನಾಗಿ ಹೇಳುತ್ತೇನೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ ಎಂದರು ರಾಜ್ ಬಿ ಶೆಟ್ಟಿ.

“45” ಚಿತ್ರವನ್ನು ದೇವಸ್ಥಾನವೆಂದು ಮಾತು ಆರಂಭಿಸಿದ ನಿರ್ದೇಶಕ ಅರ್ಜುನ್ ಜನ್ಯ, ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ. ರಮೇಶ್ ರೆಡ್ಡಿ ಅವರು ಈ ದೇವಸ್ಥಾನ ಕಟ್ಟಿದವರು. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಪುರೋಹಿತರು. ಹೀಗೆ ಇವರೆಲ್ಲರ ಸಹಕಾರದಿಂದ 106 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಮುಂದೆ ಸಿಜಿ ವರ್ಕ್ ಆರಂಭವಾಗಲಿದೆ ಎಂದರು.

ಅರ್ಜುನ್ ಜನ್ಯ ಅವರು ಕಥೆ ಹೇಳಿದರು. ಆನಂತರ ಈ ಕಥೆಯನ್ನು ಅನಿಮೇಷನ್‌ ನಲ್ಲಿ ಚಿತ್ರ ಮಾಡಿಕೊಂಡು ಬಂದು ತೋರಿಸುತ್ತೇನೆ ಎಂದರು. ಅನಿಮೇಷನ್‌ ನಲ್ಲಿ ಈ ಚಿತ್ರ ನೋಡಿದಾಗ ತುಂಬಾ ಇಷ್ಟವಾಯಿತು. ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶಕರಾಗಿ ಗೆದ್ದಿದ್ದಾರೆ. ನಿರ್ದೇಶಕರಾಗಿ ಮೊದಲ ಚಿತ್ರ ಹೇಗೆ ಮಾಡುತ್ತಾರೆ? ಎಂದು ಸಾಕಷ್ಟು ಜನ ಕೇಳಿದರು.

ನನಗೂ ಆತಂಕ ಇತ್ತು. ಆದರೆ ಚಿತ್ರೀಕರಣ ಶುರುವಾದ ಮೇಲೆ ಅವರು ಪ್ರತಿಯೊಂದು ಸನ್ನಿವೇಶಗಳನ್ನು ನನಗೆ ಕಳುಹಿಸುತ್ತಿದ್ದರು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಇನ್ನೂ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮೂರು ಜನರು ನನ್ನ ಚಿತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಚಿತ್ರ ಬರೀ ಕರ್ನಾಟಕದಲ್ಲಷ್ಟೇ ಅಲ್ಲ. ಇಡೀ ಭಾರತದಲ್ಲೇ ಹೆಸರು ಮಾಡುವ ನಂಬಿಕೆಯಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದರು. ಛಾಯಾಗ್ರಾಹಕ ಸತ್ಯ ಹೆಗಡೆ “45” ಚಿತ್ರದ ಬಗ್ಗೆ ಮಾತನಾಡಿದರು.

error: Content is protected !!