ಸೌಂಡ್ ಮಾಡಿದವನಿಗೆ ಸಿಕ್ಕ ಉತ್ತರ ಸೋಮು ಸೌಂಡ್ ಇಂಜಿನಿಯರ್ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸೋಮು ಸೌಂಡ್ ಇಂಜಿನಿಯರ್
ನಿರ್ದೇಶಕ : ಅಭಿ ಬಸವರಾಜ್
ನಿರ್ಮಾಪಕ :ಕ್ರಿಸ್ಟೋಫರ್ ಕಿಣಿ
ಸಂಗೀತ : ಚರಣ್ ರಾಜ್
ಛಾಯಾಗ್ರಹಕ :ಶಿವಸೇನಾ
ತಾರಾಗಣ : ಶ್ರೇಷ್ಠ ಬಸವರಾಜ್ , ನಿವಿಷ್ಕ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ , ಅಪೂರ್ವ, ಯಶ್ ಶೆಟ್ಟಿ , ಮಲ್ಲ ರಾಮಣ್ಣ ಹಾಗೂ ಮುಂತಾದವರು…
ಜೀವನದಲ್ಲಿ ಇರುವಷ್ಟು ದಿನ ಪ್ರೀತಿ , ಸ್ನೇಹ , ವಿಶ್ವಾಸ ದೊಂದಿಗೆ ಬದುಕುವುದು ಬಹಳ ಮುಖ್ಯ. ಮಾನವನ ಜನ್ಮ ಸಿಗುವುದು ಅಪರೂಪ ಅಂತಾರೆ. ಅಂತಹ ಜೀವನ ಬಿಟ್ಟು ದುರಹಂಕಾರದಿಂದ ತನ್ನಿಷ್ಟದಂತೆ ಮೆರೆಯುವ ಹುಡುಗನ ಲೈಫ್ ನಲ್ಲಿ ಎದುರಾಗುವ ಒಂದಷ್ಟು ಸಂದರ್ಭಗಳು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಸೋಮು ಸೌಂಡ್ ಇಂಜಿನಿಯರ್”.
ಯಾವುದೇ ವಿಚಾರಕ್ಕೂ ಕೇರ್ ಮಾಡದೆ ನೇರ ನೇರ ಎಂಬಂತೆ ಮಾತನಾಡುವ ಸೋಮು ( ಶ್ರೇಷ್ಠ ಬಸವರಾಜ್) ಊರ ಜನರ ಮಾತಿಗೆ ಆಗಾಗ ಸಿಕ್ಕಿಕೊಳ್ಳುತ್ತಾ ವಾದ , ಹೊಡೆದಾಟದಲ್ಲಿ ಸದಾ ನೀರ್ತರಾಗಿರುತ್ತಾನೆ. ಆದರೆ ತಂದೆಗೆ ಮಗನ ಮೇಲೆ ಅಪಾರ ಪ್ರೀತಿ. ತಾಯಿ ತಂಗಿಯ ಜೊತೆ ಆಗಾಗ ಅಬ್ಬರಿಸುವ ಸೋಮು ಗೆಳೆಯರೊಟ್ಟಿಗೆ ಓಡಾಡಿಕೊಂಡು ತರ್ಲೆ ತುಂಟಾಟದ ನಡುವೆಯೇ ವಿರೋಧಿ ಗೆಳೆಯರ ಜೊತೆಗೆ ಕ್ರಿಕೆಟ್ ಆಡುತ್ತಾ ವೈಶಮ್ಯ ಬೆಳೆಸಿಕೊಂಡಿರುತ್ತಾನೆ. ಇದರ ನಡುವೆ ಸೋಮನಾ ಪ್ರೀತಿಯ ಗೆಳತಿ ಸೌಮ್ಯ (ನಿವಿಷ್ಕಾ ಪಾಟೀಲ್) ಮಾಮನನ ಮದುವೆಯಾಗಲು ತುದಿಗಾಳಲ್ಲಿ ನಿಂತಿರುತ್ತಾಳೆ.
ಅದಕ್ಕೆ ಎರಡು ಕುಟುಂಬದ ಒಪ್ಪಿಗೆ ಇರುತ್ತದೆ. ಹಾಗೆಯೇ ಸೋಮನ ಅಕ್ಕನಿಗೂ ಮದುವೆ ನಿಶ್ಚಯ ಆಗಿರುತ್ತದೆ. ಸೋಮನ ತಂದೆ ಕಲ್ಕ್ವಾರಿಯಲ್ಲಿ ಕ್ಯಾಶಿಯರ್ ಕೆಲಸ ಮಾಡುತ್ತಾ ಜನರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದು , ಎಲ್ಲರೂ ಗೌರವಿಸುವಂತೆ ಬದುಕುತ್ತಿರುತ್ತಾರೆ. ಆದರೆ ಮಗನ ದರ್ಪ , ದೌಲೊತ್ತಿಗೆ ಕೋಪಗೊಳ್ಳುತ್ತಿರುತ್ತಾರೆ. ಆದರೆ ವಿಧಿಯ ಆಟವೇ ಬೇರೆಯಾಗಿದ್ದು, ಆಕ್ಸಿಡೆಂಟ್ ನಲ್ಲಿ ತಂದೆ ಸಾಯುತ್ತಾನೆ, ಮಗ ಕಿವಿ ಕೇಳಿಸಿದಂತಾಗುತ್ತದೆ. ಮುಂದೆ ಎದುರಾಗುವ ಹಲವು ರೋಚಕ ತಿರುವುಗಳು ಸೋಮನ ಬದುಕಿಗೆ ನಿರೀಕ್ಷೆಗೂ ಮೀರಿದ ಘಟನೆಗಳು ಎದುರಾಗುತ್ತದೆ. ಅದು ಏನು ಎಂಬುವುದನ್ನು ತಿಳಿಯಬೇಕಾದರೆ ಸೋಮು ಸೌಂಡ್ ಇಂಜಿನಿಯರ್ ಚಿತ್ರ ನೋಡಬೇಕು.
ಈ ಚಿತ್ರದ ನಿರ್ದೇಶಕ ಅಭಿ ಬಸವರಾಜ್ ಆಯ್ಕೆ ಮಾಡಿಕೊಂಡಿರುವ ಕಥೆ ಬಹಳ ಸೂಕ್ಷ್ಮ ಗಟ್ಟಿತನ ಒಳಗೊಂಡಿದೆ.ಇದ್ದಂತೆ ಬದುಕು , ಪ್ರಾಮಾಣಿಕವಾಗಿ ಜೀವಿಸುವ ಎಂಬ ನಾಯಕನ ಸುತ್ತ ಕೌಟುಂಬಿಕ ಮೌಲ್ಯ , ಸ್ನೇಹಿತರ ಒಡನಾಟ , ಪ್ರೀತಿಯ ತಳಮಳ , ಕಾಲೆಳೆಯುವ ವ್ಯಕ್ತಿಗಳು, ನೋವು ನಲಿವಿನ ಸುತ್ತ ದುರಹಂಕಾರದಿಂದ ಮೆರೆದರೆ ಸಿಗುವ ಉತ್ತರವನ್ನು ಬಹಳ ನೈಜಕ್ಕೆ ಹತ್ತಿರ ಎನ್ನುವಂತೆ ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಮೊದಲ ಭಾಗಕ್ಕಿಂತ ಎರಡನೇ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಚಿತ್ರದ ಓಟ ವೇಗ ಮಾಡಬಹುದಿತ್ತು. ಇಡೀ ಚಿತ್ರದ ಹೈಲೈಟ್ ನಲ್ಲಿ ಚರಣ್ ರಾಜ್ ಸಂಗೀತ ಹಾಗೆಯೇ ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿದೆ. ಇನ್ನು ಛಾಯಾಗ್ರಾಹಕ ಶಿವಸೇನಾ ಕೈಚಳಕ ಕೂಡ ಉತ್ತಮವಾಗಿದೆ. ಅದೇ ರೀತಿ ಸಂದರ್ಭಕ್ಕೆ ತಕ್ಕ ಹಾಗೆ ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ಇನ್ನು ನಾಯಕನಾಗಿ ಅಭಿನಯಿಸಿರುವ
ಶ್ರೇಷ್ಠ ಬಸವರಾಜ್ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬುವುದಕ್ಕೆ ಬಹಳಷ್ಟು ಶ್ರಮಪಟ್ಟಿದ್ದು, ಸೆಂಟಿಮೆಂಟ್ , ಸಾಹಸ ದೃಶ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿಯಾಗಿ ಶೃತಿ ಪಾಟೀಲ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಇಡೀ ಚಿತ್ರದಲ್ಲಿ ತನ್ನ ಮಾತಿನ ವರ್ಸೆಯಲ್ಲೇ ಜಹಾಂಗೀರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನಾಯಕನ ತಾಯಿಯಾಗಿ ಅಪೂರ್ವ, ತಂದೆಯಾಗಿ ಗಿರೀಶ್ ಜಟ್ಟಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಯಶ್ ಶೆಟ್ಟಿ ಬರೆಯದೆ ರೂಪದಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಈ ಚಿತ್ರದ ಕ್ಲೈಮಾಕ್ಸ್ ಮನ ಮುಟ್ಟುವಂತಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.