“ರಣಹದ್ದು” ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ
ಕಳೆದ ನಲವತ್ತು ವರ್ಷಗಳಿಂದ ಪೋಷಕ ಕಲಾವಿದನಾಗಿ ಪ್ರಸನ್ನಕುಮಾರ್(ಜಂಗ್ಲಿ ಪ್ರಸನ್ನ) ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ನೂರಾರು ಚಿತ್ರಗಳಲ್ಲಿ ನಟಿಸಿ ನಟನಾಗಿ ಜನಪ್ರಿಯರಾಗಿರುವ ಪ್ರಸನ್ನ ಕುಮಾರ್ “ರಣಹದ್ದು” ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.ಇವರೆ ಚಿತ್ರದ ನಿರ್ಮಾಪಕರು ಕೂಡ. ಪ್ರಸನ್ನಕುಮಾರ್ ಅವರ ಮಕ್ಕಳಾದ ಶಶಾಂಕ್ ಹಾಗೂ ಸೂರಜ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.
ಇತ್ತೀಚಿಗೆ ಈ ಚಿತ್ರದ ಹಾಡುಗಳು ಹಾಗು ಟೀಸರ್ ಸಿರಿಮ್ಯೂಸಿಕ್ ಮೂಲಕ ಬಿಡುಗಡೆಯಾಯಿತು. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಎಸ್ ಎ ಗೋವಿಂದರಾಜು, ಎಸ್ ಎ ಶ್ರೀನಿವಾಸ್ ಅವರು ಟೀಸರ್ ಅನಾವರಣಗೊಳಿಸಿದರು. ಖ್ಯಾತ ನಟ ಶರಣ್ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಪ್ರಸನ್ನ ಕುಮಾರ್(ಜಂಗ್ಲಿ ಪ್ರಸನ್ನ) ಅವರ ಒಡನಾಟವನ್ನು ನೆನಪಿಸಿಕೊಂಡು ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಮೊದಲು ಮಾತನಾಡಿದ ನಿರ್ಮಾಪಕ, ನಿರ್ದೇಶಕ ಪ್ರಸನ್ನಕುಮಾರ್, ಕಳೆದ ನಲವತ್ತು ವರ್ಷಗಳಿಂದ ಕನ್ನಡ ಚಿತ್ರರಂಗ ನನಗೆ ಅನ್ನ ಹಾಕುತ್ತಿದೆ. ಅದಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಆ ಸಮಯದಲ್ಲಿ ತುಂಬಾ ಯೋಚನೆ ಮಾಡುತ್ತಿದೆ. ಸ್ವಲ್ಪ ದಿನಗಳ ನಂತರ ಚಿತ್ರವೊಂದನ್ನು ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕೆಂದು ಆಸೆಯಾಯಿತು.
ಆ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡೆ. ನನ್ನ ಆಸೆಗೆ ಮಕ್ಕಳು ಆಸರೆಯಾದರು. ಈ ಚಿತ್ರದಲ್ಲಿ ನಟಿಸುವ ಮೂಲಕ ನನ್ನ ಇಬ್ಬರು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ. ಅನೇಕ ಜನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಣವಿಲ್ಲದ ಮನುಷ್ಯನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೆ ಚಿತ್ರದ ಕಥಾ ಸಾರಾಂಶ. ಅಷ್ಟೇ ಅಲ್ಲದೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ.
ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತದಲ್ಲಿದೆ. ಇಂದಿನ ಸಮಾರಂಭಕ್ಕೆ ನಮ್ಮ ಆಹ್ವಾನವನ್ನು ಮನಿಸಿ ಬಂದಿರುವ ಎಲ್ಲಾ ಗಣ್ಯರಿಗೂ ತುಂಬು ಹೃದಯದ ಧನ್ಯವಾದ ಎಂದರು. ತಮ್ಮ ಪಾತ್ರದ ಬಗ್ಗೆ ಶಶಾಂಕ್, ಸೂರಜ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸಿಂಗರ್ ಶ್ರೀನಿವಾಸ್ ತಿಳಿಸಿದರು.