ಲೀಗಲ್, ಥ್ರಿಲ್ಲರ್ ಚಿತ್ರ ʼದ ಜಡ್ಜ್‌ಮೆಂಟ್ʼ ನಟ ದಿಗಂತ್ ಮಾತು
ಚಂದನವನದ ಮುದ್ದಾದ ನಟ ದೂದ್ ಪೇಡ ದಿಗಂತ್ ಬಹುತೇಕ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದರು. ಈ ಬಾರಿ ಲೀಗಲ್ ಹಾಗೂ ಥ್ರಿಲ್ಲರ್ ಶೈಲಿಯ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈಗಾಗಲೇ ʼದ ಜಡ್ಜ್‌ಮೆಂಟ್ʼ ಚಿತ್ರದ ಪೋಸ್ಟರ್, ಫಸ್ಟ್‌ಲುಕ್ ಮತ್ತು ಟೀಸರ್‌ಗಳು ಪ್ರೇಕ್ಷಕರ ಗಮನವನ್ನು ಸೆಳೆದು , ಬಾರಿ ವೈರಲ್ ಆಗಿದೆ. ವಿಶೇಷ ಎಂದರೆ ನಟ ದಿಗಂತ್ ಪಾತ್ರ ಯಾವ ರೀತಿ ಎಂಬ ಕುತೂಹಲ ಹೆಚ್ಚಿಸಿದೆ.
ಬಹಳಷ್ಟು ಕುತೂಹಲಕಾರಿ ಯಾಗಿ ಮೂಡಿ ಬಂದಿರುವ ಈ ಚಿತ್ರದ ಕುರಿತು ನಟ ದಿಗಂತ್ ಮಾತನಾಡುತ್ತಾ ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿದೆ. ಇಂದಿನ ಜನರೇಶನ್‌ನ ಯುವಕರನ್ನು ಪ್ರತಿನಿಧಿಸುವಂತೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು, ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರ ಸಾಗುತ್ತದೆ.
ನನ್ನ ಪ್ರಕಾರ, ʼದ ಜಡ್ಜ್‌ಮೆಂಟ್ʼ ಒಂದು ಕೋರ್ಟ್ ರೂಂ ಡ್ರಾಮಾ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ.
ಈ ಚಿತ್ರದ ಮತ್ತೊಂದು ವಿಶೇಷ ಏನೆಂದರೆ ನಾನು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಂಥ ದೊಡ್ಡ ನಟರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನಗೆ ಬಹಳ ಸಂತೋಷವಾಗಿದೆ. ನಾನು ಅವರ ಸಿನಿಮಾ ನೋಡಿಕೊಂಡು ಬೆಳೆದವನು , ಇಂದು ನಾನು ಅವರಟ್ಟಿಗೆ ಅಭಿನಯಿಸುವುದರ ಜೊತೆಗೆ ಬಹಳಷ್ಟು ಕಲ್ತಿದ್ದೇನೆ. ನಾವೆಲ್ಲ ಸಿನಿಮಾವನ್ನು ಆಡಿಯನ್ಸ್ ಆಗಿ ಅಥವಾ ಕಲಾವಿದರಾಗಿ ನೋಡಿದರೆ, ರವಿ ಸರ್ ಸಿನಿಮಾವನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರು ಆಡಿಯನ್, ಆರ್ಟಿಸ್ಟ್, ಟೆಕ್ನೀಶಿಯನ್, ಮೇಕರ್ ಎಲ್ಲವೂ ಆಗಿರುವುದರಿಂದ, ಸಿನಿಮಾವನ್ನು ಅವರು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಸಿನಿಮಾ ವಿಷಯದಲ್ಲಿ ಅವರ ಜ್ಞಾನ ತುಂಬ ಅಪಾರ ಎಂದರು.
ಹಾಗೆಯೇ ನಿರ್ದೇಶಕ ಗುರುರಾಜ್ ಕುಲಕರ್ಣಿ ಕೂಡ ವೃತ್ತಿಪರವಾಗಿರುವ ತಂತ್ರಜ್ಞರು. ಇದೊಂದು ಪ್ಯಾಶನೇಟ್ ಆಗಿರುವ ತಂಡ. ನಿರ್ದೇಶಕ ಗುರುರಾಜ್ ಮೂಲತಃ ಸಾಫ್ಟ್‌ವೇರ್ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ.
ಸಾಮಾನ್ಯವಾಗಿ ಪ್ರತಿ ಸಿನಿಮಾದ ಪಾತ್ರಗಳಿಗೂ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಆದರೆ ನಿಜ ಹೇಳಬೇಕೆಂದರೆ, ಈ ಸಿನಿಮಾಕ್ಕೆ ನಾನು ಅಷ್ಟೊಂದು ತಯಾರಿ ಮಾಡಿಕೊಂಡಿರಲಿಲ್ಲ. ಅದಕ್ಕೆ ಕಾರಣ ನಿರ್ದೇಶಕ ಗುರುರಾಜ್. ಈ ಸಿನಿಮಾದ ಪ್ರತಿ ಒಂದು ಪಾತ್ರಗಳು, ಸನ್ನಿವೇಶಗಳು ಹೇಗೆ ಬರಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿತ್ತು. ಪ್ರತಿಯೊಂದನ್ನೂ ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ತೆಗೆಸುತ್ತಿದ್ದರು. ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಧನ್ಯಾ ರಾಮ್ ಕುಮಾರ್ ಜೋಡಿಯಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರದ್ದೂ, ಇಂದಿನ ಜನರೇಶನ್ ಯುವ ಜೋಡಿಯನ್ನು ಪ್ರತಿನಿಧಿಸುವಂಥ ಪಾತ್ರ. ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿದೆ.
ನನ್ನ ಪ್ರಕಾರ ಈ ಚಿತ್ರವು ಬಿಗ್ ಕಾಸ್ಟಿಂಗ್, ಬಿಗ್ ಬಜೆಟ್ ಇಟ್ಟುಕೊಂಡು ಅಂದುಕೊಂಡಂತೆ, ಪ್ಲಾನ್ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ʼದ ಜಡ್ಜ್‌ಮೆಂಟ್ʼ ಮಾಮೂಲಿ ಎಂಟರ್‌ಟೈನ್ಮೆಂಟ್ ಸಿನಿಮಾಗಳ ಸಾಲಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಬಂದಿದೆ.
ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ಹೇಳಿದ್ದಾರೆ. ಆಡಿಯನ್ಸ್‌ಗೆ ಖಂಡಿತವಾಗಿಯೂ ʼದ ಜಡ್ಜ್‌ಮೆಂಟ್ʼ ಒಂದು ಒಳ್ಳೆಯ ಅನುಭವ ಕೊಟ್ಟು ಇಷ್ಟವಾಗಲಿದೆ. ಈಗಾಗಲೇ ಅದ್ದೂರಿ ಪ್ರಚಾರ ಮಾಡಿದ್ದು , ಎಲ್ಲರ ಗಮನ ಸೆಳೆಯುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಸಿಗುವ ವಿಶ್ವಾಸ ನನಗಿದೆ ಎಂದರು.