ಪ್ರಾಮಾಣಿಕನ ಸಂಕಷ್ಟದ ಸುಳಿಯ ಕೋಟಿ (ಚಿತ್ರವಿಮರ್ಶೆ-ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ಕೋಟಿ
ನಿರ್ದೇಶಕ : ಪರಮ್
ನಿರ್ಮಾಪಕರು : ಜ್ಯೋತಿ ದೇಶಪಾಂಡೆ
ಸಂಗೀತ : ವಾಸುಕಿ ವೈಭವ್
ಛಾಯಾಗ್ರಹಣ : ಅರುಣ್
ತಾರಾಗಣ :
ಡಾಲಿ ಧನಂಜಯ, ಮೋಕ್ಷಾ ಕುಶಾಲ್ , ರಮೇಶ್ ಇಂದಿರಾ, ರಂಗಾಯಣ ರಘು , ತಾರಾ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್ ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರು ನೆಮ್ಮದಿಯಾಗಿ ಸುಖ ಶಾಂತಿಯಿಂದ ಬದುಕಲು ಆಸೆ ಪಡುವುದು ಸರ್ವೇ ಸಾಮಾನ್ಯ. ಆದರೆ ವಿಧಿಯ ಆಟದಂತೆ ಎಲ್ಲರೂ ಸಾಗಬೇಕು ಅನ್ನೋದು ಸತ್ಯ. ತಾನು , ತನ್ನ ಕುಟುಂಬವನ್ನು ಸುಖವಾಗಿ ಸಾಕಲು ಪ್ರಾಮಾಣಿಕವಾಗಿ ದುಡಿದು ಒಂದು ಕೋಟಿ ಹಣ ಸಂಪಾದನೆ ಮಾಡಬೇಕೆಂಬ ಯುವಕನ ಬದುಕಿನಲ್ಲಿ ಎದುರಾಗುವ ಸಮಸ್ಯೆಯ ಸುರಿಮಳೆಗಳ ಸುತ್ತ ಬೆಸೆದುಕೊಂಡಿರುವ ರೋಚಕ ಘಟನೆಗಳ ಕಥಾನಕವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೋಟಿ”.
ಕಷ್ಟಪಟ್ಟು ದುಡಿದ ಹಣವನ್ನು ಬಿಟ್ಟು ಬೇರೆ ಹಣದ ಕಡೆ ಗಮನಹರಿಸಿದಂತ ಪ್ರಾಮಾಣಿಕ ವ್ಯಕ್ತಿ ಕೋಟಿ (ಧನಂಜಯ). ತನ್ನ ತಾಯಿ , ತಮ್ಮ , ತಂಗಿ ಜೊತೆ ವಾಸಿಸುತ್ತಾ ಬದುಕಿಗಾಗಿ ಟ್ರಕ್ ಚಾಲಕನಾಗಿ ಮನೆಯ ವಸ್ತು ಶಿಫ್ಟಿಂಗ್ ಕೆಲಸ ಮಾಡುತ್ತಾ ಸಂಪಾದನೆಯಲ್ಲಿ ಪ್ರತಿದಿನ ಎರಡು ಸಾವಿರ ಹಣವನ್ನು ದೀನು ಸಾಹುಕಾರ್ ( ರಮೇಶ್ ಇಂದಿರಾ) ನೀಡುತ್ತಾ ಬದುಕುತ್ತಿರುತ್ತಾನೆ.
ಹಾಳಾಗಿ ನಿಂತು ಹೋದ ಚಿತ್ರಮಂದಿರವನ್ನೇ ತನ್ನ ಅಡ್ಡವಾಗಿ ಮಾಡಿಕೊಂಡು, ತನ್ನ ಪಡೆಗಳ ಗ್ಯಾಂಗ್ ಮೂಲಕ ಬಡ್ಡಿ ವ್ಯವಹಾರ ನಡೆಸಿಕೊಂಡು ಹವಾ ಮೈಂಟೆನ್ ಮಾಡುತ್ತಿರುತ್ತಾನೆ. ಇದರ ನಡುವೆ ದೀನು ಸಾಹುಕಾರ್ ಗೆ ಒಂದು ಡೀಲ್ ಸಿಗುತ್ತದೆ. ಇದಕ್ಕೆ ಸಾಹುಕಾರ್ ಶಿಷ್ಯನನ್ನ ನೇಮಿಸಿದರೂ ನಂಬಿಕೆ ವ್ಯಕ್ತಿಗಾಗಿ ಯೋಚಿಸಿ , ಆ ಸುಪಾರಿ ಕೆಲಸವನ್ನ ಕೋಟಿ ಗೆ ನೀಡಲು ನಿರ್ಧಾರ ಮಾಡುತ್ತಾನೆ.
ಇದರ ನಡುವೆ ಕೋಟಿ ಒಂದು ಸ್ವಂತ ಕಾರ್ ಪಡೆಯವ ಸಾಲವಾಗಿ ಸಾಹುಕಾರ್ ಬಳಿ ಹಣವನ್ನು ಪಡೆಯುತ್ತಾನೆ. ತನ್ನ ಸ್ವಂತ ಶಕ್ತಿಯಿಂದ ದುಡಿದು ಬೆಳೆಯಬೇಕೆಂಬ ಮಹಾದಾಸೆ ಕೋಟಿಯದು. ಇನ್ನು ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾ ತನಗೆ ಬೇಕಾದ ಸಮಯಕ್ಕೆ ಕ್ಯಾಬ್ ಬುಕ್ ಮಾಡಿಕೊಳ್ಳುವ ನವಮಿ(ಮೋಕ್ಷ ಕುಶಾಲ್)ಗೆ ಕೋಟಿ ನೇ ರೆಗ್ಯುಲರ್ ಡ್ರೈವರ್. ಆದರೆ ಈಕೆಗೂ ಒಂದು ಕಾಯಿಲೆ , ಅದುವೇ ಬೀಕ್ಕಳುವಿಕೆ ಬಂದಾಗ ಕಳ್ಳತನ ಮಾಡುವ ಖಯಾಲಿ.
ಇದರ ನಡುವೆಯೇ ತನ್ನ ಪ್ರಿಯಕರನ ಜೊತೆ ಮದುವೆಗೆ ಸಿದ್ದಳಾಗಿರುತ್ತಾಳೆ. ಇದೆಲ್ಲದರ ಹೊರತಾಗಿ ಸಾಹುಕಾರ್ ಗುರಿಯಂತೆ ಈ ಸುಫಾರಿ ಪಡೆದು ಸಾಲ ಮನ್ನಾ ಹಾಗೂ ಇನ್ನಷ್ಟು ಹಣ ಪಡೆಯುವಂತೆ ಆಮಿಷ ಒಡ್ಡಿದರು ಒಪ್ಪದ ಕೋಟಿ ಪ್ರಾಮಾಣಿಕವಾಗಿ ಬದುಕಲು ನಿರ್ಧರಿಸುತ್ತಾನೆ. ಆದರೆ ಅವನ ಹಿಂದೆ ನಡೆಯುವ ಮಸಲತ್ತು , ಎಡವಟ್ಟುಗಳು , ಕುಟುಂಬಕ್ಕೆ ಒದಗುವ ಸಂಕಷ್ಟ ಎಲ್ಲವೂ ಕೋಟಿಯನ್ನು ಕಟ್ಟಿ ಹಾಕುವಂತೆ ಮಾಡುತ್ತದೆ. ಮುಂದೆ ಎದುರಾಗುವ ಸಮಸ್ಯೆಗಳು ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.
ಕೋಟಿಗೆ ಎದುರಾಗುವ ಸಂಕಷ್ಟ ಏನು…
ನವಮಿಗೆ ಮದುವೆ ಆಗುತ್ತಾ… ಕೋಟಿ ಹಣ ಕೈಗುಡುತ್ತಾ… ಕ್ಲೈಮ್ಯಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ಉತ್ತರ ಬೇಕಿದ್ದರೆ ಕೋಟಿ ಚಿತ್ರ ನೋಡಬೇಕು.
ಇನ್ನು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಪ್ರಥಮ ಪ್ರಯತ್ನದಲ್ಲಿ ಮಧ್ಯಮ ವರ್ಗದ ಕುಟುಂಬದ ಬದುಕು ಬವಣೆಯನ್ನ ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ತಾಯಿ ಮಗನ ಬಾಂಧವ್ಯ ಮನ ಸೆಳೆದಿದ್ದು , ಪ್ರಾಮಾಣಿಕತೆಗೆ ಬೆಲೆ ಎಲ್ಲಿ ಎನ್ನುವ ಪ್ರಶ್ನೆ ಕಾಡುವಂತಿದೆ.
ಪಾತ್ರವರ್ಗ ಹಾಗೂ ತಾಂತ್ರಿಕ ತಂಡ ಬಳಗ ಶ್ರಮಪಟ್ಟಿದ್ದು, ಚಿತ್ರದ ಓಟ ವಾಹನ ಓಡಿದಷ್ಟು ವೇಗವಾದರೂ ಸಾಗಬೇಕಿತ್ತು ಅನಿಸುತ್ತದೆ. ಇನ್ನು ಇನ್ಸ್ಪೆಕ್ಟರ್ ಗಳು ಹಾಕಿರುವ ಬಟ್ಟೆ ನಮ್ಮ ರಾಜ್ಯದವರ ಅನಿಸುತ್ತದೆ. ಇನ್ನು ಜಿಯೋ ಸ್ಟುಡಿಯೋಸ್ ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ಮಾಣ ಮಾಡಿರುವುದು ಮೆಚ್ಚಲೇಬೇಕು. ಇನ್ನು ಈ ಚಿತ್ರದ ಸಂಗೀತ ಓಟಕ್ಕೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಾಹಕರ ಕೈ ಚಳಕವು ಕೂಡ ಸೊಗಸಾಗಿ ಮೂಡಿಬಂದಿದೆ.
ಇನ್ನು ನಾಯಕನಾಗಿ ಅಭಿನಯಿಸಿರುವ ಡಾಲಿ ಧನಂಜಯ ಬಹಳ ನೈಜ್ಯವಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ತಮ್ಮ ಹಾವ ಭಾವ ಮೂಲಕ ಮನ ಸೆಳೆಯುತ್ತಾರೆ. ಆದರೆ ಕಪಾಳಕ್ಕೆ ಹೊಡೆದವರು , ಹೊಡೆಸಿಕೊಂಡವರ ಲೆಕ್ಕ ಸಿಗದಂತಿತ್ತು. ಇನ್ನು ನಾಯಕಿಯಾಗಿ ಅಭಿನಯಿಸಿರುವ ಮೋಕ್ಷ ಕುಶಾಲ್ ಕೂಡ ಪರದೆ ಮೇಲೆ ಮುದ್ದಾಗಿ ಕಾಣಿಸಿಕೊಂಡು , ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ.
ಇನ್ನು ಇಡೀ ಚಿತ್ರದ ಹೈಲೈಟ್ ರಮೇಶ್ ಇಂದಿರಾ ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ. ಮಾತಿನ ಗತ್ತು , ವರ್ಚಸ್ಸು ಅಬ್ಬರಿಸಿದೆ. ಅದೇ ರೀತಿ ತಾಯಿಯ ಪಾತ್ರದಲ್ಲಿ ತಾರಾ ಅಭಿನಯ ಅದ್ಭುತವಾಗಿದೆ. ಇನ್ನು ರಂಗಾಯಣ ರಘು, ಪೃಥ್ವಿ ಶಾಮನೂರು , ತನುಜಾ ವೆಂಕಟೇಶ್ , ಅಭಿಷೇಕ್ ಶ್ರೀಕಾಂತ್ , ಸರ್ದಾರ್ ಸತ್ಯ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಸಾಗಿದೆ. ಒಟ್ಟಾರೆ ಕುಟುಂಬ ಸಮೇತ ನೋಡುವಂತ ಚಿತ್ರ ಇದಾಗಿದೆ