Cini NewsSandalwood

“ಕೃಷ್ಣಂ ಪ್ರಣಯ ಸಖಿ” ಚಿತ್ರದ ‘ಚಿನ್ನಮ್ಮ’…ಹಾಡು ರೀಲಿಸ್ ಮಾಡಿದ ಸುಪ್ರೀಂ ಹೀರೋ ಶಶಿಕುಮಾರ್

ಸ್ಯಾಂಡಲ್ವುಡ್ ನ ಮತ್ತೊಂದು ಬಹು ನಿರೀಕ್ಷೆಯ ಚಿತ್ರ “ಕೃಷ್ಣಂ ಪ್ರಣಯ ಸಖಿ”. ಬಿಡುಗಡೆಗೆ ಸಿದ್ಧವಿರುವ ಈ ಚಿತ್ರ ಒಂದೊಂದು ಹಾಡನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುವುದರ ಜೊತೆಗೆ ಪ್ರಚಾರದ ಕಾರ್ಯವನ್ನು ಕೂಡ ಆರಂಭಿಸಿದೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು‌ ಇತ್ತೀಚಿಗೆ ಮಂತ್ರಿ‌ ಮಾಲ್ ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.

ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್‌ 15 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸುಪ್ರೀಂ ಹೀರೋ ಶಶಿಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.‌ ಈ ಚಿತ್ರದ ಪ್ರಮುಖಪಾತ್ರದಲ್ಲಿ ಶಶಿಕುಮಾರ್ ಅಭಿನಯಿಸಿದ್ದಾರೆ. ಆನಂದ್ ಆಡಯೋ ಯೂಟ್ಯೂಬ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಒಟ್ಟು ಏಳು ಹಾಡುಗಳಿದೆ. ಆ ಪೈಕಿ ಎರಡನೇ ಹಾಡು ಇಂದು ಬಿಡುಗಡೆಯಾಗಿದೆ‌. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ “ಚಿನ್ನಮ್ಮ” ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದರು.

ನಾನು ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ಅವರು ಬರೆದಿರುವ “ಚಿನ್ನಮ್ಮ” ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಅವರ ಗಾಯನ ಮತ್ತು ಶೇಖರ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ.

ಈ ಹಾಡು ಚಿತ್ರೀಕರಣವಾದ ಜಾಗ ಕೂಡ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
ಚಿತ್ರತಂಡದ ಸದಸ್ಯರ ಸಹಕಾರದಿಂದ ನಮ್ಮ‌ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ತಿಳಿಸಿದರು.

ಹಾಡು ಬರೆದಿರುವ ಕವಿರಾಜ್, ನಟಿ ಶರಣ್ಯ ಶೆಟ್ಟಿ, ನಟ ಶಿವಧ್ವಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ

error: Content is protected !!