ಮನುಷ್ಯತ್ವಕ್ಕಾಗಿ ಪ್ರೇಮಿಗಳ ಕೂಗು..ಕಾಗದ (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕಾಗದ
ನಿರ್ದೇಶಕ : ರಂಜಿತ್
ನಿರ್ಮಾಪಕ : ಅರುಣ್ ಕುಮಾರ್
ಸಂಗೀತ : ಪ್ರದೀಪ್ ವರ್ಮ
ಛಾಯಾಗ್ರಹಣ : ವೀನಸ್ ನಾಗರಾಜ್ ಮೂರ್ತಿ
ತಾರಾಗಣ : ಆದಿತ್ಯ ,ಅಂಕಿತ ಜಯರಾಂ, ನೇಹಾ ಪಾಟೀಲ್, ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಹಾಗೂ ಮುಂತಾದವರು…
ಸಾಮಾನ್ಯವಾಗಿ ಪ್ರೇಮಿಗಳ ಒಂದು ನುಡಿ ಮುತ್ತಿನಂತೆ ಪ್ರೀತಿ ಅಜರಾಮರ , ಪ್ರೀತಿಗೆ ಸಾವಿಲ್ಲ ಅನ್ನೋ ಮಾತು ನಾವು ಕೇಳಿದ್ದೇವೆ. ಹಾಗೆಯೇ ಎಲ್ಲೇ ಇರು.. ಹೇಗೆ ಇರು.. ಮನುಷ್ಯತ್ವಕ್ಕೆ ಬೆಲೆ ಕೊಡು ಎಂಬುವ ವಿಚಾರವೂ ಸೇರಿದಂತೆ ಸ್ನೇಹ , ಪ್ರೀತಿ , ವಿದ್ಯಾರ್ಥಿಗಳ ಒಡನಾಟ, ಹಳ್ಳಿಗಳ ಜನರ ಬದುಕು ಬವಣೆ , ಹಿಂದೂ ಹಾಗೂ ಮುಸ್ಲಿಮರ ವೈಶಮ್ಯ , ಮುಗ್ದ ಪ್ರೇಮಿಗಳ ಪ್ರೀತಿಯ ಕಲರವ , ನೋವು ನಲಿವಿನ ಸುತ್ತ ಹೀಗೆ ಹಲವಾರು ಅಂಶಗಳನ್ನು ಬೆಸೆದುಕೊಂಡು ಈ ವಾರ ಬೆಳ್ಳಿ ಪರದೆ ಮೇಲೆ ಮೂಡಿರುವಂತಹ ಚಿತ್ರವೇ “ಕಾಗದ”.
ಸುಂದರ ಪರಿಸರದ ನಡುವೆ ಭೈರವಕೋಟೆ ಹಾಗೂ ಕೆಂಪ್ನಳ್ಳಿ ಎಂಬ ಎರಡು ಊರು. ಆಟ ಹಾಗೂ ಪಾಠದಲ್ಲಿ ಸದಾ ಮುಂದಿರುವ ಶಿವು( ಆದಿತ್ಯ) ಗೆಳೆಯರೊಂದಿಗೆ ಕ್ರಿಕೆಟ್, ಕಬ್ಬಡಿಯಲ್ಲೂ ಸೈ. ತಂದೆ ತಾಯಿಯ ಮುದ್ದಿನ ಮಗನಾಗಿ ಊರು ಹಾಗೂ ಶಾಲೆಯ ನೆಚ್ಚಿನ ವಿದ್ಯಾರ್ಥಿಯಾಗಿರುತ್ತಾನೆ. ಅದೇ ಊರಿನ ಟೀಚರ್ ಸಲ್ಮಾ (ನೇಹ ಪಾಟೀಲ್) ಚಿಕ್ಕಮ್ಮನ ಮೂಲಕ ಕಾಲೇಜಿಗೆ ಸೇರುವ ಆಯೇಷಾ( ಅಂಕಿತ ಜಯರಾಂ).ಇಡೀ ಊರಿಗೆ ಒಂದೇ ಮುಸಲ್ಮಾನ್ ಕುಟುಂಬ.
ಇದರ ನಡುವೆ ಕಾಲೇಜು ವಿದ್ಯಾರ್ಥಿಗಳ ಆಟ ಆಟ , ಪಾಠ , ತುಂಟಾಟ , ತರ್ಲೆ ನಿರಂತರ. ಇದರ ನಡುವೆ ಶಿವು ಹಾಗೂ ಆಯೇಷಾ ಬೇಟಿ , ಮಾತುಕತೆ , ನೋಟ , ಪ್ರೇಮದತ್ತ ತಿರುಗುತ್ತದೆ. ಮತ್ತೊಂದೆಡೆ ಊರಿನಲ್ಲಿ ಪೂಜೆ , ಪುನಸ್ಕಾರ , ಜಾತ್ರೆಯ ಬಗ್ಗೆ ಚರ್ಚೆ. ಬೇರೆ ಊರಿನ ಮೌಳಿಗೆ ಕೆಂಪ್ನಳ್ಳಿಯಲ್ಲಿ ನಮಾಜ್ ಗೆ ಒಂದು ಗೋರಿ ಕಟ್ಟುವ ಹುನ್ನಾರ.
ಈ ವಿಚಾರವಾಗಿ ಊರ ಗೌಡ , ಮುಖಂಡರು ಹಾಗೂ ಮೌಲಿ ಜೊತೆ ಮಾತುಕತೆಯು ನಡೆಯುತ್ತದೆ. ಆದರೆ ಮುಸ್ಲಿಂ ಕುಟುಂಬವು ಊರ ಗೌಡರ ಮಾತಿಗೆ ಸೈ ಎನ್ನುವಂತಿರುತ್ತಾರೆ. ಇನ್ನೂ ಮುಗ್ಧ ಪ್ರೇಮಿಗಳ ಪ್ರೀತಿ , ಸಲ್ಲಾಪ ಕಾಗದ ರೂಪದಲ್ಲೂ ಇನ್ನು ಹತ್ತಿರವಾಗಿಸುತ್ತದೆ. ಜಾತಿ ಬೇರೆಯಾದರೂ ನಾವು ಒಂದೇ , ಮನುಷ್ಯತ್ವ ಮುಖ್ಯ ಎನ್ನುವ ಪ್ರೇಮಿಗಳು. ಭಗವದ್ಗೀತೆ ಹಾಗೂ ಕುರಾನ್ ಬಗ್ಗೆ ನಂಬಿಕೆ ಇರುವ ಜೋಡಿಗಳ ಎದುರು ಜಾತಿ , ಧರ್ಮದ ವಿಚಾರ ಸಂಚಲನ ಮೂಡಿಸುತ್ತಾ ರೋಚಕ ಹಂತಕ್ಕೆ ತಂದು ನಿಲ್ಲುತ್ತದೆ.
ಪ್ರೇಮಿಗಳು ಒಂದಾಗುತ್ತಾರಾ..
ಧರ್ಮ , ಜಾತಿ ಸಂಘರ್ಷನಾ…
ಊರ ಜಾತ್ರೆ ನಡೆಯುತ್ತಾ…
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲ ವಿಚಾರಕ್ಕಾಗಿ ನೀವು ಕಾಗದ ಚಿತ್ರ ನೋಡಬೇಕು.
ಈ ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸಿರುವ ಆದಿತ್ಯ ಪಾತ್ರಕ್ಕೆ ಸೂಕ್ತ ಪ್ರತಿಭೆಯಾಗಿ ಕಾಣಿಸಿಕೊಂಡು ಪ್ರಥಮ ಚಿತ್ರದಲ್ಲೇ ಮುಗ್ಧ ಹುಡುಗನ ಆಸೆ , ಆಕಾಂಕ್ಷೆ , ಪ್ರೀತಿಯ ತಳಮಳಕ್ಕೆ ಜೀವ ತುಂಬಿಸಲು ಶ್ರಮ ಪಟ್ಟಿದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಅಂಕಿತ ಜಯರಾಂ ಕೂಡ ಬಹಳ ಮುದ್ದಾಗಿ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಸೂಕ್ತ ಎನಿಸುವಂತೆ ಹವಾ ಭಾವಗಳಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದಾಳೆ.
ಮುಂದೆ ಉತ್ತಮ ಭವಿಷ್ಯವಿರುವ ನಾಯಕಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತದೆ. ಇನ್ನು ಇವರೊಟ್ಟಿಗೆ ಗೆಳೆಯ ಗೆಳತಿಯರಾಗಿ ಅಭಿನಯಿಸಿರುವ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಇನ್ನು ಗೌಡನ ಪಾತ್ರದಲ್ಲಿ ಬಲ ರಾಜ್ವಾಡಿ , ನಾಯಕಿಯ ಚಿಕ್ಕಮ್ಮನಾಗಿ ನೇಹಾ ಪಾಟೀಲ್ , ಊರ ಹಿರಿಯರಾಗಿ ಮಠ ಕೊಪ್ಪಳ , ಮುಸ್ಲಿಂ ಪಾತ್ರದಲ್ಲಿ ನೀನಾಸಂ ಅಶ್ವಥ್, ಮೌಲಿ ಪಾತ್ರದಲ್ಲಿ ಶಿವಮಂಜು , ನಾಯಕಿಯ ತಂದೆಯಾಗಿ ಗೌತಮ್ ರಾಜ್ ಸೇರಿದಂತೆ ಹಲವಾರು ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನಿರ್ಮಾಪಕ ಅರುಣ್ ಕುಮಾರ್ ಈ ಕತೆಯನ್ನು ಒದಗಿಸುವ ಮೂಲಕ ಒಂದು ಸಂದೇಶವಿರುವ ಚಿತ್ರವನ್ನು ಜನರ ಮುಂದೆ ತಂದಿರುವುದು ವಿಶೇಷ. ಹಾಗೆ ಮಗನನ್ನ ಬೆಳ್ಳಿ ಪರದೆಗೂ ಪರಿಚಯಿಸಿದ್ದಾರೆ.
ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವ ರಂಜಿತ್ ಕುಮಾರ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು, ಯುವ ಮನಸುಗಳ ತುಂಟಾಟ , ತರ್ಲೆ, ಆಟ, ಪಾಠದ ಜೊತೆಗೆ ಜಾತಿಯ ಸಂಘರ್ಷದ ನಡುವೆ ಮನುಷ್ಯತ್ವದ ಬೆಲೆಯನ್ನು ತೋರುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರದ ಓಟ ನಿಧಾನ ಗತಿಯಲ್ಲಿ ಸಾಗಿ ಆಯಾಸವೆನಿಸುತ್ತದೆ. ಸಂಭಾಷಣೆ ಗಮನ ಸೆಳೆಯುತ್ತದೆ. ಕ್ಲೈಮಾಕ್ಸ್ ಸೇರಿದಂತೆ ಕೆಲವೊಂದು ಸನ್ನಿವೇಶಗಳು ಮನಸಲ್ಲಿ ಕಾಡುತ್ತದೆ.
ಇನ್ನು ಈ ಚಿತ್ರದ ಹೈಲೈಟ್ ಎಂದರೆ ಛಾಯಾಗ್ರಹಕರ ವೀನಸ್ ನಾಗರಾಜ್ ಮೂರ್ತಿ ಕೈಚಳಕ ಸೊಗಸಾಗಿ ಮೂಡಿದೆ. ಅದೇ ರೀತಿ ಹಾಡುಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಒಟ್ಟಾರೆ ಯುವಕ ಯುವತಿಯರಿಗೆ ಬಹಳ ಬೇಗ ಇಷ್ಟವಾಗುವ ಈ ಚಿತ್ರವು ಎಲ್ಲರೂ ಒಮ್ಮೆ ನೋಡುವಂತಿದೆ