ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಉಡುಗೊರೆ ‘ರಾನಿ’ ಹಾಡು ಬಿಡುಗಡೆ
ಚಂದನವನದಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳು ಸಾಲುಸಲಾಗಿ ಬರ್ತಿವೆ. ವಿಶೇಷವಾಗಿ ಚಿತ್ರತಂಡ ನಟ ಕಿರಣ್ ರಾಜ್ ಹುಟ್ಟುಹಬ್ಬದ ಸಂಭ್ರಮದ ಕೊಡುಗೆಯಾಗಿ ಹಾಡುನ್ನ ಬಿಡುಗಡೆ ಮಾಡುವ ಮೂಲಕ ಉಡುಗೊರೆಯನ್ನು ನೀಡಿದೆ. ಆರಂಭದಿಂದಲೂ ಕುತೂಹಲವನ್ನು ಮೂಡಿಸುತ್ತಾ ಸಾಗಿ ಬಂದ ಚಿತ್ರ “ರಾನಿ”. ಸರಿಸುಮಾರು ಎರಡು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಸಿದ್ಧವಾಗಿದ್ದು, ಈ ಚಿತ್ರ ಆಗಸ್ಟ್ 30 ರಂದು ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇದೊಂದು ರೋಡಿಸಂ ಚಿತ್ರವಾಗಿದ್ದು, ಒಬ್ಬ ರೌಡಿಯ ಕುಟುಂಬದ ಕಥೆ ಒಳಗೊಂಡಿದೆಯಂತೆ. ಈಗಾಗಲೇ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ‘ಹವಮಾನವೆ ಸುಂದರ ಸುಂದರ’… ಎಂಬ ಹಾಡು ಬಿಡುಗಡೆಯಾಗಿದೆ.
ಬರ್ತಡೇ ಬಾಯ್ ನಟ ಕಿರಣ್ ರಾಜ್ ಮಾತನಾಡುತ್ತಾ , ನನ್ನ ಹುಟ್ಟುಹಬ್ಬಕ್ಕೆ ಈ ಹಾಡನ್ನು ನೀಡಿರುವ ಇಡೀ ನಮ್ಮ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ನಾನು ಈ ಹಿಂದೆ ಮಾಡಿದಂತಹ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿರಲಿಲ್ಲ , ಆಗ ನಾನು ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡ್ತಿತ್ತು. ಆ ಸಮಯದಲ್ಲಿ ನನಗೆ “ರಾನಿ” ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು.
ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ. ಇದೊಂದು ಹೈ ಬಜೆಟ್ ಚಿತ್ರ. ಒಂದಷ್ಟು ಮಂದಿ ಈ ಹೀರೋ ಮೇಲೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ ಎಂದು ನಿರ್ಮಾಪಕರನ್ನು ಕೇಳಿದ್ದಾರೆ. ಆಗ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂದು ನನ್ನ ಮೇಲೆ ನಂಬಿಕೆ ಇಟ್ಟು ಈ ಸಿನಿಮಾಗೆ ಹಣವನ್ನ ಹಾಕಿದ್ದಾರೆ. ನಾನು ಕೂಡ ಅಷ್ಟೇ ಶ್ರಮವಹಿಸಿ ಈ ಸಿನಿಮಾವನ್ನು ಮಾಡಿದ್ದೇನೆ ಖಂಡಿತ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ನಿಮ್ಮೆಲ್ಲರ ಪ್ರೀತಿ, ಸಹಕಾರ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.
ಇನ್ನು ಚಿತ್ರದ ನಿರ್ದೇಶಕ ಗುರುತೇಜ್ ಶೆಟ್ಟಿ ಮಾತನಾಡುತ್ತಾ ಇದು ಆ್ಯಕ್ಷನ್ ಚಿತ್ರವಾದರೂ , ರೌಡಿ ಒಬ್ಬನ ಕುಟುಂಬದ ಹಿನ್ನೆಲೆ ಕಥೆಯನ್ನು ಒಳಗೊಂಡಿದ್ದು ,ಪಕ್ಕಾ ಕೌಟುಂಬಿಕ ಚಿತ್ರ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು “ರಾನಿ” ಚಿತ್ರದಲ್ಲಿ ನೋಡಬಹುದು. ಇದರಲ್ಲಿ ಆಕ್ಷನ್, ಲವ್ , ಸೆಂಟಿಮೆಂಟ್ ಎಲ್ಲವೂ ಒಳಗೊಂಡಿದೆ. ಮನಮುಟ್ಟುವ ಕತೆಯ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇವೆ. ನಾವು ಆರಂಭದಿಂದಲೂ “ರಾನಿ” ಚಿತ್ರದ ಬಗ್ಗೆ ಒಂದೊಂದು ರೀತಿಯ ಸದ್ದು ಮಾಡುತ್ತಾ ಬಂದಿದ್ದೇವೆ. ಈ “ರಾನಿ” ಚಿತ್ರವನ್ನು ಆಗಸ್ಟ್ 30ಕ್ಕೆ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.
ಹಾಗಯೇ ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಪ್ರಕಾರ ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವ ಆಸೆಯಿಂದ ಈ ಚಿತ್ರವನ್ನು ಮಾಡಿದ್ದು , ಈ ಚಿತ್ರ ಕೂಡ ತುಂಬಾ ಚೆನ್ನಾಗಿ ಬಂದಿದೆ. ಎಲ್ಲರೂ ನೋಡಿ ಗೆಲ್ಲಿಸಿ ಎಂದು ಕೇಳಿಕೊಂಡರು.
ಇನ್ನು ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮಾತನಾಡುತ್ತಾ ಕನಕಪುರದ ರೆಸಾರ್ಟ್ ಒಂದರಲ್ಲಿ ಈ”ಹವಮಾನ”ದ ಹಾಡು ಹುಟ್ಟಿದ ಬಗ್ಗೆ ಹೇಳಿದರು. ಸಂಗೀತ ನಿರ್ದೇಶಕ ಮಣಿಕಂತ್ ಕದ್ರಿ, ನಟಿಯರಾದ ಸಮೀಕ್ಷಾ, ರಾಧ್ಯ ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕರಾಗಿದ್ದ ರಾಘವೇಂದ್ರ .ಬಿ .ಕೋಲಾರ ಈ ಚಿತ್ರದ ಮೂಲಕ ಛಾಯಾಗ್ರಾಹಕ ಆಗುವ ಅವಕಾಶ ಸಿಕ್ಕಿರುವ ಬಗ್ಗೆ ಹಾಗೂ ಅವರ ಜರ್ನಿಯ ಕುರಿತು ಸುದೀರ್ಘವಾಗಿ ಮಾತನಾಡಿದರು. ಉಳಿದಂತೆ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲರೂ ಮಾತನಾಡಿದರು. ಈಗಾಗಲೇ ವಿತರಕರ ಜೊತೆ ಮಾತನಾಡಿದ್ದು, ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ.