ಇದೇ 19ರಂದು “ನಾಟ್ ಔಟ್” ತೀರ್ಮಾನ ಪ್ರಕಟ
ಜೀವನವೇ ಒಂದು ಚದುರಂಗ ಅದರಲ್ಲಿ ಯಾರು… ಯಾವಾಗ… ಹೇಗೆ ತಮ್ಮ ಬದುಕನ್ನು ನಡೆಸುತ್ತಾರೆ ಎಂಬುದೇ ಕುತೂಹಲ. ಬಹುತೇಕರಿಗೆ ತಿಳಿದಿರುವ ಹಾಗೆ ಹುಲಿ.. ಕುರಿ.. ಆಟದ ಚಾಣಾಕ್ಷತನ ನೋಡಿರಬಹುದು. ಆ ಹಾದಿಯಲ್ಲೇ ನಡೆಯುವ ಒಂದು ಡಾರ್ಕ್ ಹ್ಯೂಮರ್ ಎನ್ನುವಂತಹ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬರುತ್ತಿರುವ ಚಿತ್ರವೇ “ನಾಟ್ ಔಟ್”. ಈ ಕಥೆಗೆ ಪೂರಕವಾಗಿ ಬೆಸೆದುಕೊಂಡಿರುವ ಕರೋನಾ ಮಹಾಮಾರಿಯ ಸಂದರ್ಭದ ಎಳೆಯ ಜೊತೆಗೆ ಸ್ನೇಹ , ಪ್ರೀತಿ, ಆತಂಕ , ಕಳ್ಳ ಪೋಲಿಸ್ ಆಟ , ರೋಡಿಗಳ ಅಟ್ಟಹಾಸ , ನಗೆಯ ಹೊಳೆಯ ಮೂಲಕ ಒಂದಷ್ಟು ಸೂಕ್ಷ್ಮ ವಿಚಾರವನ್ನು ತೆರೆದಿಡುವ ಪ್ರಯತ್ನವಾಗಿ ಮೂಡಿ ಬಂದಿರುವ ಚಿತ್ರ ಇದಾಗಿದೆಯಂತೆ.
ಸದಭಿರುಚಿಯ ಜೊತೆಗೆ ಉತ್ತಮ ಚಿತ್ರಗಳನ್ನು ನೀಡುವ ನಿಟ್ಟಿನಲ್ಲಿ ಮುಂದಾಗಿರುವಂತಹ ಸಂಸ್ಥೆ ರಾಷ್ಟ್ರಕೂಟ ಪಿಕ್ಚರ್ಸ್. ಈ ಸಂಸ್ಥೆಯ ನಿರ್ಮಾಪಕರಾದ ವಿ.ರವಿಕುಮಾರ್ ಹಾಗೂ ಶಂಶುದ್ದೀನ್. ಎ ರವರು ಈಗಾಗಲೇ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಉತ್ತಮ ಕಥೆಗಳನ್ನು ಆಯ್ಕೆ ಮಾಡುವುದರ ಜೊತೆಗೆ ಯುವ ಪ್ರತಿಭೆಗಳಿಗೆ ನಿರ್ದೇಶನ ಜವಾಬ್ದಾರಿ ಕೊಡುವುದರಲ್ಲಿ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಹೋಪ್ ಚಿತ್ರದ ಮೂಲಕ ಭರವಸೆ ಮೂಡಿಸಿದಂತಹ ನಿರ್ದೇಶಕ ಅಂಬರೀಶ್ .ಎಂ. ಗೆ ಈ “ನಾಟ್ ಔಟ್” ಚಿತ್ರದ ಸಾರಥ್ಯವನ್ನ ನೀಡಿದ್ದಾರೆ.
ಯುವ ಪ್ರತಿಭೆ ಅಜಯ್ ಪೃಥ್ವಿ ಈ ಚಿತ್ರದಲ್ಲಿ ಯಾವುದೇ ಹೀರೋಯಿಸಂ ಇಲ್ಲದೆ ಪಾತ್ರಕ್ಕೆ ಸೂಕ್ತವಾದ ಕಲಾವಿದನಾಗಿ ಕಾಣಿಸಿಕೊಂಡಿದ್ದಾರಂತೆ. ಒಬ್ಬ ಆಂಬುಲೆನ್ಸ್ ಡ್ರೈವರ್ ಪಾತ್ರ ನಿರ್ವಹಿಸಿದ್ದು, ಇದು ಇವರ ಚಿತ್ರ ಜೀವನಕ್ಕೆ ಮತ್ತೊಂದು ವಿಶೇಷವಾದ ಚಿತ್ರವಾಗಲಿದೆಯಂತೆ. ಅದೇ ರೀತಿ ಲವ್ mocktail ನಲ್ಲಿ ಹೆಂಗೆ ನಾವು… ಎನ್ನುತ್ತಾ ಪ್ರೇಕ್ಷಕರ ಮನ ಗೆದ್ದಂತ ಬೆಡಗಿ ರಚನಾ ಇಂದರ್ ಈ ಚಿತ್ರದಲ್ಲಿ ರೋಗಿಗಳನ್ನು ನೋಡಿಕೊಳ್ಳುವ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಮುಗಂ ಖ್ಯಾತಿಯ ರವಿಶಂಕರ್ ಈ ಚಿತ್ರದ ಮೂಲಕ ಒಂಟಿಕೊಪ್ಪಲ್ ದೇವರಾಜ ಪಾತ್ರದಲ್ಲಿ ಮಿಂಚಿದ್ದಾರಂತೆ. ಇನ್ನು ಸ್ನೇಕ್ ನಾಗನಾಗಿ ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಸೇರಿದಂತೆ ಹಲವರ ತಾರಾಬಳಗವಿದೆ.
ಈ ಡಾರ್ಕ್ ಹ್ಯೂಮರ್ ಶೈಲಿಯ ಚಿತ್ರವು ಬೆಂಗಳೂರು , ಮೈಸೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಈ “ನಾಟ್ ಔಟ್” ಚಿತ್ರ ನೋಡಲು ಪ್ರೇಕ್ಷಕರಿಗೆ ವಿಶೇಷ ಆಹ್ವಾನ ನೀಡಿದೆ ಚಿತ್ರತಂಡ. ಚಿತ್ರದ ಮೊದಲ ಭಾಗ ನೋಡಲು ಫ್ರೀ ಎಂಟ್ರಿ ಸಿಗಲಿದೆ. ಚಿತ್ರ ಇಷ್ಟವಾದರೆ ಎರಡನೇ ಭಾಗ ನೋಡಲು ಟಿಕೆಟ್ ಪಡೆಯಬೇಕು ಎಂದಿದೆ. ಇದೊಂದು ರೀತಿ ಪ್ರೇಕ್ಷಕನ್ನ ಚಿತ್ರಮಂದಿರಕ್ಕೆ ಸೆಳೆಯುವುದಕ್ಕೆ ಹೊಸ ತಂತ್ರವಾಗಿ ಗಮನ ಸೆಳೆದಿದ್ದು, ಚಿತ್ರದ ಬಗ್ಗೆ ಇಡೀ ತಂಡ ಬಹಳಷ್ಟು ನಿರೀಕ್ಷೆ ಇಟ್ಟಿದ್ದು , ಇದೇ 19ರಂದು ಉತ್ತರ ಸಿಗಲಿದೆ