Cini NewsSandalwood

ಮೊನಾಲಿಸಾ 20ರ ಸಂಭ್ರಮದಲ್ಲಿ “ಗೌರಿ”ಯ ‘ಮುದ್ದಾದ ನಿನ್ನ  ಹೆಸರೇನು’…ಹಾಡು ಬಿಡುಗಡೆ. 

ಸ್ಯಾಂಡಲ್ ವುಡ್ ನ ಸ್ಟೈಲಿಶ್ ಡೈರೆಕ್ಟರ್ ಹಿಂದೆ ಖ್ಯಾತಿ ಪಡೆದಂತಹ ನಿರ್ದೇಶಕ ಇಂದ್ರಜಿತ್ ಲಂಕೇಶ್. ಕಲರ್ ಫುಲ್ , ಯೂಥ್ , ಓರಿಯೆಂಟೆಡ್ ಸಬ್ಜೆಕ್ಟ್ ನಲ್ಲಿ ಮೆಲೋಡಿ ಸಾಂಗ್ ಗಳ ಸಂಗಮದ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದ ಈ ನಿರ್ದೇಶಕರ ‘ ಮೊನಾಲಿಸಾ ‘ ಚಿತ್ರ ಬಿಡುಗಡೆಗೊಂಡು 20 ವರ್ಷವನ್ನು ಕಳೆದಿದೆ.

ಈಗ ಇಂದ್ರಜಿತ್ ಲಂಕೇಶ್ ನಿರ್ದೇಶನದ “ಗೌರಿ” ಚಿತ್ರ ಕೂಡ ಆಗಸ್ಟ್ 15ರಂದು ಬಿಡುಗಡೆಗೆ ಸಿದ್ಧವಿದೆ. ಈಗಾಗಲೇ ಚಿತ್ರದ ಪ್ರಚಾರದ ಕಾರ್ಯವನ್ನು ಅದ್ದೂರಿಯಾಗಿ ಒಂದೊಂದೇ ಹಾಡುಗಳು ಬಿಡುಗಡೆ ಮಾಡುವ ಮೂಲಕ ನಡೆಸುತ್ತಿದ್ದು , ಮತ್ತೊಂದು ಹಾಡನ್ನು ಹೊರ ತರುವುದರ ಜೊತೆಗೆ  ‘ಮೊನಾಲಿಸಾ’ ಚಿತ್ರದಲ್ಲಿ ನಟಿಸಿದ ನಟ ಧ್ಯಾನ್‍ ಮತ್ತು ನಾಯಕಿ ಸದಾ ಸೇರಿದಂತೆ ಚಿತ್ರದಲ್ಲಿ ದುಡಿದಂತಹ ತಂತ್ರಜ್ಞರನ್ನು ಕರೆಸಿ ಸನ್ಮಾನಿಸಿ , ಆ ಸಂದರ್ಭದ ನೆನಪುಗಳನ್ನು ಹಂಚಿಕೊಳ್ಳುವ ಉದ್ದೇಶದೊಂದಿಗೆ ಪತ್ರಕರ್ತರ ಹಾಗೂ ಮಾಧ್ಯಮದವರ ಮುಂದೆ  ಕಾರ್ಯಕ್ರಮವನ್ನು ಆಯೋಜಿಸಿದರು.

ಇನ್ನು ಕಾರ್ಯಕ್ರಮದ ಆರಂಭದಲ್ಲಿ ಮೊನಾಲಿಸಾ ಚಿತ್ರದ ಕೆಲವು ದೃಶ್ಯಗಳನ್ನು  ತೋರಿಸುವುದರ ಜೊತೆಗೆ 20 ವರ್ಷಗಳ ಸಂಭ್ರಮಕ್ಕೆ ವೇದಿಕೆ ಮೇಲೆ  ನಟ ಧ್ಯಾನ್ ನಟಿ ಸದಾ, ಹಾಸ್ಯ ನಟ ಶರಣ್, ಸಾಹಿತಿಗಳಾದ ಕೆ .ಕಲ್ಯಾಣ್, ಕವಿರಾಜ್ , ಸಂಭಾಷಣೆ ಬರಹಗಾರರಾದ ಬಿ.ಎ. ಮಧು , ಛಾಯಾಗ್ರಾಹಕ ಕೆಕೆ ಕೃಷ್ಣಕುಮಾರ್ , ಡಿಸೈನರ್ ಮಣಿ, ಸ್ಟಿಲ್ ಫೋಟೋಗ್ರಾಫರ್ ಗುಂಡ್ಲುಪೇಟೆ ಸುರೇಶ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಜರಿದ್ದರು.

ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂದ್ರಜಿತ್ ಲಂಕೇಶ್ ತಾಯಿ ಇಂದಿರಾ ಲಂಕೇಶ್  ಹಾಗೂ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹಾಗೂ ಅರ್ಪಿತ ಲಂಕೇಶ್ ಸೇರಿದಂತೆ ಗೌರಿ ಚಿತ್ರದ ನಾಯಕ ನಾಯಕಿ ಎಲ್ಲರೂ ಸೇರಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.

ತದನಂತರ ನಟ ಧ್ಯಾನ ತನ್ನ ಆರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾ , ಮೊನಾಲಿಸಾ ತಂದುಕೊಟ್ಟ ಯಶಸ್ಸನ್ನ ಮೆಲುಕು ಹಾಕಿದರು. ಅದೇ ರೀತಿ ನಟಿ ಸದಾ ಕೂಡ ಚಿತ್ರೀಕರಣದಲ್ಲಿ ನಡೆದಂಥ ಘಟನೆಗಳನ್ನು ನೆನಪು  ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಇಂದ್ರಜಿತ್ ಲಂಕೇಶ್  ಪತ್ರಕರ್ತ ಮಿತ್ರರೊಬ್ಬರು ತಮ್ಮ ಪತ್ರಿಕೆಯಲ್ಲಿ ನಟಿ  ಸದಾ ಬಗ್ಗೆ ಬರೆದಂತ ಲೇಖನದ ವಿಚಾರವನ್ನು ಪ್ರಸ್ತಾಪಿಸಿದರು.

ಹಾಸ್ಯ ನಟ ಶರಣ್ ಮಾತನಾಡುತ್ತಾ 20 ವರ್ಷ ಆಯಿತು ಎಂಬುವುದೇ ಒಂದು ಆಶ್ಚರ್ಯ. ನಾನಿನ್ನು ಚಿಕ್ಕವನೇ ಎನ್ನುತ್ತಾ ಶೂಟಿಂಗ್ ಸಂದರ್ಭದಲ್ಲಿ ಹಚ್ ನಾಯಿಯನ್ನು ಕರೆ ತಂದಾಗ ಅದನ್ನ ಆರೈಕೆ ಮಾಡಿದ ರೀತಿಯ  ಅನುಭವಗಳನ್ನು ಹಂಚಿಕೊಂಡ ರೀತಿ ಗಮನ ಸೆಳೆಯಿತು. ಇನ್ನು ಆ ಚಿತ್ರಕ್ಕೆ ಸಂಭಾಷಣೆ ಬರೆದ ಬಿ.ಎ. ಮಧು, ಛಾಯಾಗ್ರಹಕ ಕೃಷ್ಣಕುಮಾರ್ , ಚಿತ್ರ ಸಾಹಿತಿಗಳಾದ ಕೆ .ಕಲ್ಯಾಣ್, ಕವಿರಾಜ್ , ಸ್ಟಿಲ್ ಫೋಟೋಗ್ರಾಫರ್ ಗುಂಡ್ಲುಪೇಟೆ ಸುರೇಶ್ , ಡಿಸೈನರ್ ಮಣಿ  ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇನ್ನು ಕಾರ್ಯಕ್ರಮದ ಮತ್ತೊಂದು ಹಂತವಾಗಿ ಇಂದ್ರಜಿತ್‍ ಲಂಕೇಶ್ ನಿರ್ದೇಶನದ  ‘ಗೌರಿ’ ಚಿತ್ರದ ಒಂದೊಂದೇ ಹಾಡುಗಳು ವಿಭಿನ್ನ ರೀತಿ ಬಿಡುಗಡೆ ಮಾಡಿ ಗಮನ  ಸೆಳೆದಿದ್ದರು. ಈಗ  ‘ಮುದ್ದಾದ ನಿನ್ನ ಹೆಸರೇನು’… ಎಂಬ ಮತ್ತೊಂದು ಹಾಡನ್ನು ಹೊರತಂದರು. ವಿಶೇಷವಾಗಿ ನಾದಬ್ರಹ್ಮ ಹಂಸಲೇಖ ರವರಿಂದ “ಗೌರಿ” ಚಿತ್ರದ ಶೀರ್ಷಿಕೆ ಹಾಡನ್ನು ಅವರ ಸಹೋದರಿ ಗೌರಿಯನ್ನು ನೆನಪಿಸುವ ದೃಶ್ಯಗಳ ಮೂಲಕ  ವಿಭಿನ್ನವಾಗಿ ಪ್ರದರ್ಶಿಸಿದ್ದು,  ಮನಸ್ಸನ್ನ  ಕುಗ್ಗಿಸಿದಂತಿತ್ತು.

ಈ ಹಾಡು ಗೌರಿ ರವರಿಗೆ ಅರ್ಪಣೆ ಮಾಡಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ಹಾಡನ್ನು ಬಿಡುಗಡೆ ಮಾಡಿದ ಹಂಸಲೇಖ ಮಾತನಾಡುತ್ತಾ ನನ್ನನ್ನು ಈ ಕಾರ್ಯಕ್ರಮಕ್ಕೆ ಯಾಕೆ ಕರೆದಿದ್ದಾರೆ ಎಂದು ಈಗ ಅರ್ಥವಾಯಿತು. ಗೌರಿ  ಈ ಹಾಡು ಮನಸ್ಸಿಗೆ ಬಹಳ ಘಾಸಿಯಾಗಿದೆ. ಆಕೆಗಾದ ದ್ರೋಹಕ್ಕೆ  ಏನು ಮಾಡಲು ಆಗದಂತ ಸಂದರ್ಭಗಳು ಕಟ್ಟಿ ಹಾಕಿದೆ. ಆ ವಿಚಾರ ಮಾತನಾಡುತ್ತಾ ಹೋದರೆ ಬಹಳಷ್ಟು ವಿಚಾರ ಇದೆ ಎನ್ನುತ್ತಾ ನಮ್ಮ ಚಿತ್ರರಂಗ ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಯ ಜೊತೆಗೆ ಪ್ಯಾನ್ ಇಂಡಿಯಾ ಚಿತ್ರ ಎನ್ನುತ್ತಿರುವ ನಮ್ಮ ನಟ,ನಟಿಯರು ಅದಕ್ಕೆ ಮೊರೆ ಹೋದಂತವರ ಬಗ್ಗೆ ಖಡಕ್ಕಾಗಿ ಮಾತನಾಡಿ ಎಲ್ಲೇ ಹೋದರು  ಸ್ಯಾಂಡಲ್ ವುಡ್ ಬೇರು ಅದೇ ಮುಖ್ಯ ಎಂದು ಎಚ್ಚರಿಸುವ ಮೂಲಕ ಗಮನ ಸೆಳೆದರು.

ಇನ್ನು ಈ ಗೌರಿ ಚಿತ್ರದ ನಾಯಕ  ಸಮರ್ಜಿತ್‍ ಲಂಕೇಶ್‍ ಮಾತನಾಡುತ್ತಾ ನನ್ನ ಮೊದಲ ಚಿತ್ರಕ್ಕೆ ಈ ರೀತಿಯಾದಂತ ಪ್ರಚಾರ ಸಿಗುತ್ತಿರುವುದಕ್ಕೆ ಕಾರಣ ನನ್ನ ತಂದೆ ಇಂದ್ರಜಿತ್ ಲಂಕೇಶ್. ನನ್ನ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನ ಅಜ್ಜಿ ಬಂದಿರುವುದು ಸಂತೋಷವಾಗಿದೆ. ನನಗೆ ಚಿತ್ರೀಕರಣದ ಸಂದರ್ಭದಲ್ಲಿ ಹೇಳಿಕೊಟ್ಟಂತ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರಿಗೂ ಧನ್ಯವಾದ ತಿಳಿಸುತ್ತೇನೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ನಮ್ಮನ್ನ ಹರಿಸಿ ಬೆಳೆಸಿ ಎಂದರು.

ನಟಿ ಸಾನ್ಯ ಅಯ್ಯರ್‍  ಮಾತನಾಡುತ್ತಾ ಇದು ನನ್ನ ಜೀವನದ ಅತ್ಯಂತ  ಮಧುರವಾದ ಕ್ಷಣ. ನನ್ನ  ನೆಚ್ಚಿನ ಗುರುಗಳಾದ ಸಂಗೀತ ನಿರ್ದೇಶಕ ಹಂಸಲೇಖ ಸರ್ ,  ನನ್ನ ಫೇವರೆಟ್ ಹೀರೋ ಧ್ಯಾನ್ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ. ನನ್ನ ಮೊದಲ ಚಿತ್ರಕ್ಕೆ ಈ ರೀತಿ ಪ್ರಚಾರ ಸಿಗುತ್ತಿದೆ. ನಾವು ನಿರ್ದೇಶಕರು ಹೇಳಿದಂತೆ ಕೆಲಸ ಮಾಡಿದ್ದೇವೆ. ಈ ಚಿತ್ರವನ್ನು ನೀವೆಲ್ಲರೂ ನೋಡಿ ನಮ್ಮನ್ನ ಪ್ರೋತ್ಸಾಹಿಸಿ ಎಂದರು. ಹಾಗೆಯೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡುತ್ತಾ ಈ ಚಿತ್ರ ಒಂದು ಮ್ಯೂಸಿಕಲ್ ಹಿಟ್ ಆಗಲಿದೆ. ಏಳು ಹಾಡುಗಳನ್ನು ಒಳಗೊಂಡಿದೆ.

 

ನಮ್ಮ ಚಿತ್ರಕ್ಕಾಗಿ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಇಂದು ಬಿಡುಗಡೆಯಾದ ‘ಮುದ್ದಾದ ನಿನ್ನ ಹೆಸರೇನು’… ಹಾಡಿಗೆ ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಕವಿರಾಜ್ ಹಾಡು ಬರೆದಿದ್ದಾರೆ. ಇನ್ನು, ನಿಹಾಲ್‍ ತೌರೋ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು ವಿಶೇಷವಾಗಿ ನನ್ನ ಅಕ್ಕನಿಗಾಗಿ ಮಾಡಿದಂತಹ ಗೌರಿ ಟೈಟಲ್ ಸಾಂಗ್ ನನ್ನ ಫೇವರೆಟ್ ಆಗಿದೆ. “ಗೌರಿ” ಚಿತ್ರವು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ನಿಮ್ಮೆಲ್ಲರ ಪ್ರೀತಿ , ಬೆಂಬಲ ನಮ್ಮ ತಂಡದ ಮೇಲೆ ಇರಲಿ ಎಂದು ಕೇಳಿಕೊಂಡರು.

error: Content is protected !!