‘ಆರಾಮ್ ಅರವಿಂದ ಸ್ವಾಮಿ’ ನವೆಂಬರ್‌ನಲ್ಲಿ ತೆರೆಗೆ
ಸಿನಿಮಾ ಅನ್ನೋದೇ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಅಖಾಡಕ್ಕೆ ಇಳಿದ್ಮೇಲೆ ಪ್ರೇಕ್ಷಕರಿಗೆ ಸಿನಿಮಾ ತಲುಪಿಸುವುದು ಮಗದೊಂದು ಸವಾಲು. ತಮ್ಮ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಪ್ರಚಾರ ಬಹಳ ಮುಖ್ಯ. ಈ ವಿಚಾರದಲ್ಲಿ ಆರಾಮ್ ಅರವಿಂದ ಸ್ವಾಮಿ ಬಳಗದ ಕ್ರಿಯೇಟಿವಿಟಿಗೆ ರಾಯಲ್ ಸೆಲ್ಯೂಟ್ ಹೇಳಲೇಬೇಕು.
ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಆರಾಮ್ ಅರವಿಂದ ಸ್ವಾಮಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ನವೆಂಬರ್ ನಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಸಿನಿಮಾ ಬಿಡುಗಡೆಯಾಗಲಿದೆ. ಗಣೇಶ ಹಬ್ಬದ ವಿಶೇಷವಾಗಿ ಇಂದು ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಯಾವಾಗ ಸಿನಿಮಾ ಬರಲಿದೆ ಅನ್ನೋದನ್ನು ಶೀಘ್ರದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ.
ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಮೂಲಕ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್ ಮತ್ತೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು. ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಹೀಗಾಗಿ ಸಂಗೀತ ಪ್ರಿಯರ ಕಿವಿಗಳಿಗಂತೂ ಒಳ್ಳೊಳ್ಳೆ ಹಾಡುಗಳನ್ನು ನಿರೀಕ್ಷೆ ಮಾಡಬಹುದು. ‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ‘ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗಿದೆ.