ಈ ವಾರ “ಹಗ್ಗ” ಬಿಡುಗಡೆ.. ಟ್ರೈಲರ್ ಗೆ ಚಿತ್ರರಂಗದ ಗಣ್ಯರು ಸಾಥ್.
ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂತಹ ಚಿತ್ರ “ಹಗ್ಗ”. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದ್ದು , ಹಿರಿಯ ನಟಿ ಗಾಯತ್ರಿ ಪ್ರಭಾಕರ್, ನಟಿ ಪ್ರಿಯಾಂಕ ಉಪೇಂದ್ರ ಹಾಗೂ ರಘು ಮುಖರ್ಜಿ ಈ ಹಗ್ಗ ಚಿತ್ರದ ಟ್ರೈಲರ್ ಅನ್ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭವನ್ನ ಕೋರಿದರು. ಈ ಒಂದು ಕಾರ್ಯಕ್ರಮದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಮಾತನಾಡುತ್ತ ನನಗೆ ದೆವ್ವ ಎಂದರೆ ಭಯ. ನನ್ನ ಮಗಳು ದೆವ್ವದ ಚಿತ್ರದಲ್ಲಿ ಅಭಿನಯಿಸಿದ್ದಾಳೆ ಎಂದರೆ ನೋಡುವುದು ತುಂಬಾ ಕಷ್ಟ.
ಏನೇ ಆಗಲಿ ಅವಳು ಈ ಮಟ್ಟಕ್ಕೆ ಬೆಳೆಯಲು ಚಿತ್ರರಂಗ ಹಾಗೂ ಮಾಧ್ಯಮದವರ ಸಹಕಾರ ತುಂಬಾ ಇದೆ. ಮುಂದೆಯೂ ನಿರಂತರವಾಗಿ ಹೀಗೆ ಪ್ರೋತ್ಸಾಹ ಮಾಡುತ್ತಿರಿ, ಈ ಚಿತ್ರತಂಡ ಬಹಳ ಶ್ರಮಪಟ್ಟು ಚಿತ್ರ ಮಾಡಿದ್ದಾರೆ ಇವರಿಗೂ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.
ಇನ್ನು ಅನುಪ್ರಭಾಕರ್ ಪತಿ ರಘು ಮುಖರ್ಜಿ ಮಾತನಾಡುತ್ತಾ ಅನು ಒಬ್ಬ ನಟಿಯಾಗಿ ಬಹಳ ಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ. ಚಿತ್ರರಂಗದವರ ಜೊತೆ ಉತ್ತಮ ಒಡನಾಟದೊಂದಿಗೆ ಮನೆಯವರ ಪ್ರೀತಿ ವಿಶ್ವಾಸದೊಂದಿಗೆ ಸಾಗಿ ಸುಮಾರು 25 ವರ್ಷ ಜರ್ನಿ ಪೂರೈಸಿರುವ ಅನುಪ್ರಭಾಕರ್ ನನ್ನ ಪತ್ನಿ ಎಂಬುದೇ ನನಗೆ ಬಹಳ ಖುಷಿ ತಂದಿದೆ. ಇನ್ನು ಈ ಹಗ್ಗ ಚಿತ್ರ ಅನು ಗೆ ಬಹಳ ವಿಶೇಷ. ಹಾಗೆಯೇ ದೆವ್ವ ಎಂದರೆ ತುಂಬಾ ಭಯ , ಆದರೂ ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ ಎನ್ನುತ್ತಾ ಈ ಚಿತ್ರದಲ್ಲಿ ನಡೆದ ಒಂದಷ್ಟು ಅನುಭವಗಳನ್ನುn ಕೂಡ ಇದೇ ಸಮಯದಲ್ಲಿ ಹಂಚಿಕೊಂಡರು.
ಇನ್ನು ಮತ್ತೊಬ್ಬ ಮುಖ್ಯ ಅತಿಥಿ ಪ್ರಿಯಾಂಕ ಉಪೇಂದ್ರ ಮಾತನಾಡುತ್ತಾ ನನ್ನ ಹಾಗೂ ಅನುಪ್ರಭಾಕರ್ ಸ್ನೇಹ ಬಹಳ ವರ್ಷದ್ದು , ನನಗೆ ಒಬ್ಬ ಉತ್ತಮ ಗೆಳತಿ ಸಿಕ್ಕಿದ್ದಾರೆ. ಇವರ ನಟನೆ ಹಾಗೂ ಕನ್ನಡದ ಸ್ಪಷ್ಟತೆ ಬಹಳ ಇಷ್ಟ. ಈ ಚಿತ್ರ ಟ್ರೇಲರ್ ಬಹಳ ಇಂಟರೆಸ್ಟಿಂಗ್ ಆಗಿದೆ. ಖಂಡಿತ ಇಡೀ ತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರತಂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಹರ್ಷಿಕಾ ಪೂಣಚ್ಚ ಗೆ ಸೀಮಂತದ ಕಾರ್ಯಕ್ರಮವನ್ನು ವೇದಿಕೆ ಮೇಲೆ ನಡೆಸಿದ್ದು ವಿಶೇಷವಾಗಿತ್ತು.
ಈ ಚಿತ್ರ ಬಿಡುಗಡೆಗೆ ಬೆನ್ನೆಲುಬಾಗಿ ನಿಂತಿರುವ ದಯಾಳ್ ಪದ್ಮನಾಭನ್ ಮಾತನಾಡುತ್ತಾ ನಾವು ಈ ಚಿತ್ರವನ್ನು ಯಾವ ಯಾವ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೆಂಬ ಪೂರ್ವ ತಯಾರಿಯನ್ನು ಮಾಡಿಕೊಂಡು ತೆರೆಗೆ ಬರುತ್ತಿದ್ದೇವೆ. ಈ ಚಿತ್ರದಲ್ಲಿ ಒಂದು ನ್ಯಾಷನಲ್ ಇಶ್ಯೂ ಬೇಸ್ ಕಂಟೆಂಟ್ ಇದೆ. ಖಂಡಿತ ಅದು ಎಲ್ಲರ ಗಮನವನ್ನು ಸೆಳೆಯುತ್ತದೆ. ಚಿತ್ರ ಬಹಳ ಉತ್ತಮವಾಗಿ ಚಿತ್ರತಂಡ ಮಾಡಿದೆ. ನಾನು ನಟಿ ಅನುಪ್ರಭಾಕರ್ ಅವರ ಜೊತೆ ಒಂದು ಚಿತ್ರದ ಡಿಸ್ಕಶನ್ ನಲ್ಲಿ ಇದ್ದಾಗ, ಈ ಚಿತ್ರದ ಬಿಡುಗಡೆ ಜವಾಬ್ದಾರಿಯನ್ನ ನನಗೆ ಮಾಡಿಕೊಡಿ ಎಂದು ಕೇಳಿದರು. ಹಾಗಾಗಿ ಈ ತಂಡದಲ್ಲಿ ಸೇರಿಕೊಂಡೆ. ಈಗ ಈ ಚಿತ್ರವನ್ನು ಇದೇ ವಾರ ಬಿಡುಗಡೆ ಮಾಡ್ತಿದ್ದೇವೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದರು.
ನಟಿ ಅನುಪ್ರಭಾಕರ್ ಮಾತನಾಡುತ್ತಾ ನಾನು ಚಿತ್ರರಂಗಕ್ಕೆ ಬಂದು ಸುಮಾರು 25 ವರ್ಷ ತುಂಬಿದೆ. ನಾನು ಈ ಮಟ್ಟಕ್ಕೆ ಬೆಳೆಯಲು ಅಪ್ಪಾಜಿ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ರವರು ಕಾರಣ. ನನಗೆ ಹೃದಯ ಹೃದಯ ಸಿನಿಮಾ ಮೂಲಕ ನಟಿಯಾಗುವ ಅವಕಾಶವನ್ನು ನೀಡಿದರು. ಅಲ್ಲಿಂದ ಹಲವಾರು ವಿಭಿನ್ನ ಚಿತ್ರಗಳನ್ನು ಮಾಡುತ್ತಾ ಈಗ ಹಗ್ಗ ಚಿತ್ರ ಮಾಡಿದ್ದೇನೆ.
‘ ಹ ‘ ಅಕ್ಷರ ನನಗೆ ಬಹಳ ವಿಶೇಷವಾಗಿದೆ. ನನ್ನ ತಾಯಿ, ತಂದೆ, ನನ್ನ ಗಂಡ ಹಾಗೆಯೇ ನನ್ನ ಸಿನಿಮಾ ಹಾಗೂ ಮಾಧ್ಯಮದ ಕುಟುಂಬವು ನನಗೆ ಸಹಕಾರ ನೀಡುತ್ತಾ ಬಂದಿದೆ. ನನಗೆ ದೆವ್ವ ಅಂದರೆ ಭಯ, ಈ ಚಿತ್ರವನ್ನು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟ ಅನಿಸಿತು , ಆದರೂ ಪಾತ್ರ ಬಹಳ ವಿಶೇಷವಾಗಿದೆ ಎಂಬ ಕಾರಣಕ್ಕೆ ಅಭಿನಯಿಸಿದೆ. ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ವಿಭಿನ್ನ ಪ್ರಯತ್ನದ ಥ್ರಿಲ್ಲರ್ , ಹಾರರ್ , ವಿಎಫ್ಎಕ್ಸ್ , ಸೂಪರ್ ಪವರ್ ಕಥಾನಕದ “ಹಗ್ಗ” ಚಿತ್ರವನ್ನು ವಸಂತ ಸಿನಿ ಕ್ರಿಯೇಶನ್ಸ್ ಮೂಲಕ ರಾಜ್ ಭರದ್ವಾಜ್ ನಿರ್ಮಿಸಿದ್ದು , ಮೊದಲ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಅವಿನಾಶ್. ಎನ್ ಬರುತ್ತಿದ್ದು , ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು , ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆ ಅನುಭವಗಳನ್ನು ಹಂಚಿಕೊಂಡರು.
ಈ ಚಿತ್ರದಲ್ಲಿ ನಾಯಕನಾಗಿ ಪ್ರಥಮ ಬಾರಿಗೆ ಅಭಿನಯಿಸಿದಂತ ಸಿ .ವೇಣು , ನಟಿ ಹರ್ಷಿಕಾ ಪೂಣಚ್ಚ , ಹಾಸ್ಯ ನಟ ತಬ್ಲ ನಾಣಿ ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಅನುಭವಗಳನ್ನು ಹಂಚಿಕೊಂಡರು. ಇನ್ನು ಉಳಿದಂತೆ ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗಡೆ, ಮೈಕೋ ಮಂಜು , ಸಂಜು ಬಸಯ್ಯ ಮುಂತಾದವರ ತಾರಾಬಳಗವಿದೆ. ಈ ಚಿತ್ರದಲ್ಲಿ ಮ್ಯಾಥ್ಯೂಸ್ ಮನು ಸಂಗೀತ , ಸಿನಿಟೆಕ್ ಸೂರಿ ಛಾಯಾಗ್ರಹಣ, ಮನೋಹರ್ ಸಂಭಾಷಣೆ ಹಾಗೂ ಎನ್ . ಎಂ. ವಿಶ್ವ ಸಂಕಲನವಿದೆ. ಈ “ಹಗ್ಗ” ಚಿತ್ರವು ಅದ್ದೂರಿಯಾಗಿ ತೆರೆಯ ಮೇಲೆ ಇದೇ 20ರಂದು ಬಿಡುಗಡೆಯಾಗಲಿದೆ.