” ಪ್ರಕರಣ ತನಿಖಾ ಹಂತದಲ್ಲಿದೆ” ಚಿತ್ರದ ಟ್ರೈಲರ್ ಬಿಡುಗಡೆ.
ಚಂದನವನಕ್ಕೆ ಬರಲು ಹಲವಾರು ಯುವ ಪ್ರತಿಭೆಗಳು ಸಾಕಷ್ಟು ಪ್ರಯತ್ನವನ್ನು ಮಾಡಿ ಒಂದಷ್ಟು ಸಿದ್ಧತೆಗಳ ಮೂಲಕ ಭದ್ರ ನೆಲೆ ಕಾಣಲು ಮುಂದಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ರಂಗ ಗೆಳೆಯರ ಬಳಗ ಸೇರಿಕೊಂಡು “ಪ್ರಕರಣ ತನಿಖಾ ಹಂತದಲ್ಲಿದೆ” ಎಂಬ ಕ್ರೈಂ , ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವನ್ನು ಸಿದ್ಧಪಡಿಸಿ ತೆರೆಗೆ ತರುವ ಹಂತದಲ್ಲಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ರೇಣುಕಾಂಬ ಸ್ಟುಡಿಯೋದಲ್ಲಿ ಆಯೋಜಿಸಿದ್ದು, ಈ ಚಿತ್ರದ ಟ್ರೈಲರ್ ಅನ್ನ ನಿರ್ಮಾಪಕರ ತಂದೆಯಾದ ಡಾಕ್ಟರ್ ಶಿವಣ್ಣ ರವರು ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಶುಭವನ್ನು ಹಾರೈಸಿದರು.
ಈಗಾಗಲೇ ಮೋಷನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಹೊರಬಂದಿದ್ದು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಸಂತಸವನ್ನ ತಂದಿದ್ದು , ಈಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ತಂಡ ಆಯೋಜನೆ ಮಾಡಿತ್ತು.
ಇನ್ನು ಈ ಚಿತ್ರದ ನಿರ್ದೇಶಕ ಸುಂದರ್. ಎಸ್ ಮಾತನಾಡುತ್ತ ನನ್ನ ಕನಸು ಈಗ ನನಸಾಗುತ್ತಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಬಹುತೇಕ ನನ್ನ ರಂಗಭೂಮಿ ಗೆಳೆಯರು ಸೇರಿ ಮಾಡಿರುವ ಚಿತ್ರ ಇದು. ನಾಟಕಗಳನ್ನು ಮಾಡಿಕೊಂಡೆ ಸಿನಿಮಾ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕಥೆಯನ್ನ ಸಿದ್ಧಪಡಿಸಿಕೊಂಡೆ.
ಇದೊಂದು ಕ್ರೈಂ , ಸಸ್ಪೆನ್ಸ್ ಜಾನರ್ ಚಿತ್ರವಾಗಿದ್ದು , ಒಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಠೆ , ಅದರ ವಿರುದ್ಧ ನಡೆಯುವ ಷಡ್ಯಂತರ, ಟ್ರಾನ್ಸ್ಫರ್ ಹೀಗೆ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ತೆರೆಯ ಮೇಲೆ ತರುವ ಪ್ರಯತ್ನವಾಗಿ ಈ ಚಿತ್ರವನ್ನು ಸಿದ್ಧಪಡಿಸಿದ್ದೇವೆ. ಈ ಕಥೆಯನ್ನು ಮಾಡಿಕೊಂಡು ನನ್ನ ಒಂದಷ್ಟು ಗೆಳೆಯರಿಗೆ ತಿಳಿಸಿದ್ದೆ.
ಈ ಕಥೆ ಬಗ್ಗೆ ನಾನು ಹಾಗೂ ಚಿಂತನ್ ತುಂಬಾ ಚರ್ಚೆ ಮಾಡಿ ನಿರ್ಮಾಪಕರನ್ನು ಹುಡುಕುತ್ತಿದ್ದೆವು, ಒಮ್ಮೆ ಚಿಂತನ್ ನಾನೇ ಈ ಚಿತ್ರವನ್ನು ನಿರ್ಮಿಸುತ್ತೇನೆ ಎಂದು ಮುಂದಾದರೂ , ಅಲ್ಲಿಂದ ನಮ್ಮ ಚಿತ್ರ ಆರಂಭವಾಗಿ ಈಗ ಚಿತ್ರ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಸುಮಾರು 20% ವಿ.ಎಫ್.ಎಕ್ಸ್ ಕೆಲಸ ಮಾಡಿದ್ದೇವೆ. ಕುತೂಹಲಕಾರಿಯಾಗಿ ಚಿತ್ರ ಮೂಡಿಬಂದಿದೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.
ಚಿತ್ರದ ನಿರ್ಮಾಪಕರಾದ ಚಿಂತನ್ ಕಂಬಣ್ಣ ಮಾತನಾಡುತ್ತಾ ನಾನು ಎಂಜಿನಿಯರಿಂಗ್ ಮುಗಿಸಿದ್ದೇನೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದು , ರಂಗತಂಡಕ್ಕೆ ಸೇರಿಕೊಂಡೆ. ನಾಟಕಗಳಲ್ಲಿ ಅಭಿನಯಿಸುವ ಸಂದರ್ಭಗಳಲ್ಲಿ ನನಗೆ ಸುಂದರ್ ಪರಿಚಯವಾಯಿತು. ನಂತರ ನಿರ್ದೇಶಕ ಸುಂದರ್ ಮಾಡಿಕೊಂಡಿದ್ದ ಕಥೆಯ ವಿಚಾರ ತಿಳಿಯಿತು.
ನಾವಿಬ್ಬರೂ ಸೇರಿ ನಿರ್ಮಾಪಕರನ್ನು ಹುಡುಕುತಿದ್ದೆವು , ಒಮ್ಮೆ ನಾನೇ ಯೋಚಿಸಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದೆ. ಇದಕ್ಕೆ ನನ್ನ ತಂದೆ , ತಾಯಿ , ಅಕ್ಕ ಎಲ್ಲರ ಸಹಕಾರ ಸಿಕ್ಕಿತು. ನಾವು ಅಂದುಕೊಂಡಿದ್ದಕ್ಕಿಂತ ಬಜೆಟ್ ಜಾಸ್ತಿಯಾಗಿದೆ. ಇದೊಂದು ಪೊಲೀಸ್ ಇಲಾಖೆಯ ಸುತ್ತ ಕಥೆ ಬೆಸೆದುಕೊಂಡಿದ್ದು , ಒಂದು ಉತ್ತಮ ಚಿತ್ರ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ.
ಈ ಚಿತ್ರದಲ್ಲಿ ನಾನು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಚಿತ್ರದಲ್ಲಿ ಕಲಾವಿದರು , ತಂತ್ರಜ್ಞರು ಎಲ್ಲರೂ ತುಂಬಾ ಸಹಕಾರ ನೀಡಿದ್ದಾರೆ. ನಮ್ಮ ಚಿತ್ರ ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿಯನ್ನು ನೀಡಿದರು.
ಹಾಗೆಯೇ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಂತಹ ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಸಾಹಿತ್ಯ ಬರೆದಿದ್ದಾರೆ. ವಿಶೇಷ ಎಂದರೆ ಅವರು ಷಟ್ಪದಿಯಲ್ಲಿ ಈ ಹಾಡನ್ನು ಬರೆದಿರುವುದು, ಇವರು ಪಶುವೈದ್ಯ ವೈದ್ಯರಾದರು ಸಹ ಕವನ , ಪದ್ಯ ಬರೆಯುವುದು ಇವರ ಹವ್ಯಾಸ. ತಾವು ರಕ್ಷಿಸುವ ಪ್ರಾಣಿಗಳ ಮೇಲು ಕೂಡ ಷಟ್ಪದಿ ಮೂಲಕ ಪದ್ಯಗಳನ್ನ ರಸಿದ್ದಾರೆ. ತಮ್ಮ ಪುತ್ರ ನಿರ್ಮಾಣ ಮಾಡುತ್ತಿರುವ ಚಿತ್ರದ ಕಥೆಯ ಕೆಲವು ಸಂದರ್ಭಗಳನ್ನು ಕೇಳಿ ಈ ಚಿತ್ರಕ್ಕಾಗಿ ಷಟ್ಪದಿ ಮೂಲಕ ಟೈಟಲ್ ಹಾಡನ್ನು ಬರೆದಿದ್ದು , ವೇದಿಕೆ ಮೇಲೆ ಹಾಡನ್ನ ಹಾಡಿದ್ದು ವಿಶೇಷವಾಗಿತ್ತು.
ಇನ್ನು ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿರುವ ಮಹಿನ್ ಕುಬೇರ್ ಮಾತನಾಡುತ್ತಾ ನಾನು ಒಂದಷ್ಟು ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿದ್ದೇನೆ. ನಮ್ಮ ನಿರ್ದೇಶಕರು , ನಿರ್ಮಾಪಕರು ನನಗೆ ಒಂದು ಉತ್ತಮ ಅವಕಾಶವನ್ನು ನೀಡಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದೇನೆ.
ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಇಷ್ಟು ಬೇಗ ಇಂತಹ ಒಂದು ಪ್ರಮುಖ ಪಾತ್ರ ಸಿಗುತ್ತೆ ಎಂದು. ಈ ಒಂದು ಪಾತ್ರಕ್ಕಾಗಿ ಬಹಳಷ್ಟು ತಯಾರಿಯನ್ನು ಮಾಡಿಕೊಂಡೆ. ನಿರ್ದೇಶಕರು ಹೇಳಿ ಕೊಟ್ಟಂತೆ ನಾನು ಶ್ರಮವಹಿಸಿ ಅಭಿನಯಿಸಿದ್ದೇನೆ. ನಿರ್ಮಾಪಕರು ಎಂದು ಭೇದ ಭಾವ ಮಾಡದೆ ಎಲ್ಲರನ್ನೂ ಒಟ್ಟಾಗಿ ಚಿತ್ರೀಕರಣದಲ್ಲಿ ನಡೆಸಿಕೊಂಡ ರೀತಿ ನನಗೆ ಖುಷಿ ಇದೆ. ನಮ್ಮ ಚಿತ್ರವನ್ನು ನೋಡಿ ಎಲ್ಲರೂ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಹಾಗೆಯೇ ಉಳಿದಂತೆ ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃಷ್ಣ, ವಿಎಫ್‌ಎಕ್ಸ್ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಒಂದು ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಪ್ರಚಾರದ ಕಾರ್ಯವನ್ನ ಆರಂಭಿಸಿದ್ದು, ಬಿಡುಗಡೆಗೆ ಚಿತ್ರತಂಡ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.