“ಕಂಟೈನರ್” ಚಿತ್ರದ ಟ್ರೈಲರ್ ಬಿಡುಗಡೆ
ಸಮಾಜಕ್ಕೆ ಒಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಕಥಾನಕ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವಂತಹ ಚಿತ್ರತಂಡ “ಕಂಟೇನರ್”. ಈ ಹಿಂದೆ ’ಗರುಡಾಕ್ಷ’ ನಿರ್ಮಾಣ ಮಾಡಿದ್ದ ಎಸ್. ನರಸಿಂಹ ಮೂರ್ತಿ ಸಾರಥ್ಯದ ’ಕಂಟೈನರ್’ ಸಿನಿಮಾಕ್ಕೆ ಬಂಡವಾಳ ಹೂಡುವ ಜೊತೆಗೆ ಕಥೆ , ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.
ಇದೊಂದು ಸಂಪೂರ್ಣ ಕಂಟೇನರ್ ಸುತ್ತ ನಡೆಯುವ ಕಥೆಯಾಗಿದ್ದು, ವಿದೇಶದಿಂದ ವಸ್ತುಗಳನ್ನು ಬರುವ ಕಂಟೇನರ್ ಹಾಗೂ ಅದರಲ್ಲಿರುವ ಕೆಮಿಕಲ್ಸ್ ನಿಂದ ಆಗುವ ಪರಿಣಾಮದ ವಿಚಾರವನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಹೇಳಲಿದ್ದಾರಂತೆ ನಿರ್ದೇಶಕರು.
ಈಗಾಗಲೇ ಈ ಚಿತ್ರವು ಸೆನ್ಸಾರ್ ನಿಂದ ಉತ್ತಮ ಪ್ರಶಂಸೆಯನ್ನ ಪಡೆದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆಯಂತೆ. ಚಿತ್ರ ಅಂದುಕೊಂಡಂತೆ ಸಿದ್ಧವಾಗಿದ್ದು , ಈಗ ಪ್ರಚಾರದ ಕಾರ್ಯವನ್ನು ಆರಂಭಿಸುವ ಮೊದಲ ಪ್ರಯತ್ನವಾಗಿ ಮೊನ್ನೆಯಷ್ಟೇ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ನಿರ್ದೇಶಕ ಎನ್. ನರಸಿಂಹ ಮೂರ್ತಿ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿರುವುದರಿಂದ ವೈದ್ಯಕೀಯ ವಿಷಯಕ್ಕೆ ಸಂಬಂದಪಟ್ಟಂತೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಹೆಕ್ಕಿಕೊಂಡು, ಸಣ್ಣ ಹಾಗೂ ಧ್ವನಿ ಇಲ್ಲದ ಕಾರ್ಮಿಕನಿಗೂ ಬೆಲೆ ಇರುತ್ತದೆ ಎಂಬುದನ್ನು ಸಂದೇಶದಲ್ಲಿ ಹೇಳಿದ್ದಾರೆ.
ಕ್ಯಾನ್ಸರ್ ಸುಡುವ ಬೃಹದಕಾರದ ಯಂತ್ರವನ್ನು ಉಪಯೋಗಿಸಿದ ತರುವಾಯ ಮರಳಿ ಹಿಂದುರಿಗಿಸ ಬೇಕಾಗಿರುತ್ತದೆ. ಈ ಸಮಯದಲ್ಲಿ ಹಡಗಿನಲ್ಲಿ ಕಂಟೈನರ್ ಸಾಗಿಸುವಾಗ ಅಚಾತುರ್ಯದಿಂದ ಅದರ ಒಳಗಡೆ ಕಾರ್ಮಿಕನೊಬ್ಬ ಬಂದಿಯಾಗುತ್ತಾನೆ. ಒಂದು ದಿನದಲ್ಲಿ ನಡೆಯುವ ಘಟನೆಯಲ್ಲಿ ಆತ ಹೊರಗೆ ಬರುತ್ತಾನಾ? ಅಲ್ಲೆ ನರಳುತ್ತಾನಾ? ಎಂಬುದನ್ನು ಕುತೂಹಲದೊಂದಿಗೆ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರಂತೆ.
ಈ ಚಿತ್ರದಲ್ಲಿ ಯುವ ಪ್ರತಿಭೆ ದತ್ತಾತ್ರೇಯ ಪೂಜಾರಿ ನಾಯಕನಾಗಿ ಅಭಿನಯಿಸಿದ್ದು, ಕಂಟೇನರ್ ನಲ್ಲಿ ಸಿಲುಕುವ ಕಾರ್ಮಿಕನ ಪಾತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪುಣ್ಯಗೌಡ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಮಂಜುನಾಥ್.ಜಿ, ರಂಗನಾಥ್, ಮಂಜು.ಬಿ.ಕೆ ಉದಯಕುಮಾರ್ ಮುಂತಾದವರು ನಟಿಸಿದ್ದಾರೆ.
ಸಂಗೀತ ಅಲಂಕಾರ್, ಛಾಯಾಗ್ರಹಣ ಶ್ರೀನಿವಾಸ್, ಸಂಕಲನ ಭಾರ್ಗವ ಅವರದಾಗಿದೆ. ಬೆಂಗಳೂರು, ಮಂಗಳೂರು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಸರಾ ಮುಗಿದ ನಂತರ ಸೂಕ್ತ ಸಮಯ ನೋಡಿಕೊಂಡು ಬೆಳ್ಳಿ ಪರದೆ ಮೇಲೆ ಬರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.