ಜೀವ ಹಾಗೂ ಜೀವನದ ಸುಳಿಯಲ್ಲಿ “ಸಂಜು” ಪಯಣ..(ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸಂಜು
ನಿರ್ದೇಶಕ : ಯತಿರಾಜ್
ನಿರ್ಮಾಣ : ಸಂತೋಷ್
ಸಂಗೀತ : ವಿಜಯ್
ಛಾಯಾಗ್ರಹಣ : ವಿದ್ಯಾ ನಾಗೇಶ್
ತಾರಾಗಣ: ಮನ್ವಿತ್ , ಸಾತ್ವಿಕ, ಸಂಗೀತಾ , ಯತಿರಾಜು, ಅಪೂರ್ವ, ಬಾಲ ರಾಜ್ವಾಡಿ, ಸುಂದರಶ್ರೀ ಹಾಗೂ ಮುಂತಾದವರು…
ಪ್ರತಿಯೊಬ್ಬರಿಗೂ ಸ್ನೇಹ , ಪ್ರೀತಿ , ಜೀವನ ಅಮೂಲ್ಯ. ಅದರಂತೆ ನಿಸ್ವಾರ್ಥದಿಂದ ಪ್ರೀತಿಸುವ ಹೃದಯಕ್ಕೂ , ಜೀವನದಲ್ಲಿ ಗುರಿ ಮುಟ್ಟುವ ಹಕ್ಕಿಗೂ ಬೇಲಿ ಇಲ್ಲದಂತೆ ಬದುಕಲು ದಾರಿ ಮಾಡಿಕೊಡುವುದು ಅಷ್ಟೇ ಅಗತ್ಯ ಎನ್ನುವ ವಿಚಾರದೊಂದಿಗೆ ತಾಯಿ ಮಗನ ಬಾಂಧವ್ಯದ ಮಮಕಾರ , ಜವಾಬ್ದಾರಿ ತಂದೆಯ ತಳಮಳ ಹಾಗೂ ಒಂದೊಂದು ಗೂಡಿನ ಬದುಕಿನ ಪಯಣದ ಎಳೆ ತೆರೆಯುತ್ತಾ ಸಾಗಿ ಮನಮುಟ್ಟುವಂತಹ ಕಥಾನಕ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಸಂಜು”.
ಮಲೆನಾಡ ಸುಂದರ ಪರಿಸರದ ರಸ್ತೆಯ ಪಕ್ಕದ ತಂಗುದಾಣ ಸಮೀಪದಲ್ಲಿ ಟೀ , ಟಿಫನ್ ಅಂಗಡಿಯ ಮಾಲೀಕ ದೇವು (ಯತಿರಾಜ್) ಆತನ ಪತ್ನಿ ಪಾರು (ಅಪೂರ್ವ) ತಮ್ಮ ನೋವನ್ನ ನುಂಗಿಕೊಂಡು ತಮ್ಮ ವ್ಯಾಪಾರದಲ್ಲಿ ನೆಮ್ಮದಿಯ ಜೀವನ ಕಾಣುತ್ತಿರುತ್ತಾರೆ. ಅದೇ ಬಸ್ ನಿಲ್ದಾಣಕ್ಕೆ ಬರುವ ಸಂಜು (ಮನ್ವಿತ್) ಮತ್ತೊಂದು ಬಸ್ ಗೆ ಕಾಯುವ ಸಮಯಕ್ಕೆ ಸರಸ್ವತಿ (ಸಾತ್ವಿಕ) ಬರುತ್ತಾಳೆ.
ಮೊದಲ ನೋಟಕ್ಕೆ ಆಕೆಯ ಬಗ್ಗೆ ತಿಳಿದುಕೊಳ್ಳುವ ತವಕ ಸಂಜುಗೆ, ಆದರೆ ಅನಾಮಿಕ ವ್ಯಕ್ತಿ ಜೊತೆ ಏನು ಮಾತು ಎಂಬ ಭಯ ಸರಸ್ವತಿಗೆ. ಇದರ ನಡುವೆ ಹಣ್ಣು ಮಾರುವವಳು , ಕಾಲೇಜು ವಿದ್ಯಾರ್ಥಿ , ಕೌಟುಂಬಿಕ ಕಲಹಗಳ ಬದುಕು , ಭಾವಣೆಯ ಸದ್ದು ತಂಗುದಾಣ ಸಮೀಪ ಹಾದು ಹೋಗುತ್ತದೆ.
ತನ್ನ ಪ್ರೇಯಸಿಯಿಂದ ಮನನೊಂದು ಕುಡಿತಕ್ಕೆ ದಾಸನಾಗುವ ಮಗನ ಭವಿಷ್ಯದ ಬಗ್ಗೆ ಚಿಂತಿಸುವ ಶಿಕ್ಷಕಿ ತಾಯಿ. ಇನ್ನು ಮತ್ತೊಂದೆಡೆ ತಾನು ಹೇಳಿದಂತೆ ನಡೆದುಕೊಳ್ಳಬೇಕೆಂದು ಹೆಂಡತಿ , ಮಕ್ಕಳನ್ನು ಕಂಟ್ರೋಲ್ ಮಾಡುವ ತಂದೆ. ಕಾಲೇಜಿಗೆ ಹೋಗಿ ಬರುವ ಸರಸ್ವತಿ ಮೇಲೆ ಅನುಮಾನದ ಕಣ್ಣು , ಹೇಗಾದರೂ ಮಗಳಿಗೆ ಮದುವೆ ಮಾಡುವ ಆತುರ, ಆದರೆ ಮಗಳಿಗೆ ಓದಿ ನೆಲೆ ಕಾಣುವ ಆಸೆ.
ಈ ವಿಚಾರ ಮನೆಯ ನೆಮ್ಮದಿಗೂ ಕಂಟಕ. ಈ ಎಲ್ಲಾ ಘಟನೆಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುತ್ತಿರುವಾಗಲೇ ವಿಧಿಯ ಆಟ ಬೇರೆ ದಾರಿಯನ್ನ ತೋರಿಸುತ್ತದೆ.
ಸಂಜುಗೆ ಪ್ರೀತಿ ಸಿಗುತ್ತಾ…
ಸರಸ್ವತಿಗೆ ಮದುವೆ ಆಗುತ್ತಾ..
ಇಬ್ಬರ ಬೇಟಿಗೆ ಕಾರಣ ಏನು..
ತಾಳ್ಮೆ , ಕೋಪ ತೋರುವ ದಾರಿ…?
ಕ್ಲೈಮಾಕ್ಸ್ ಉತ್ತರ ಏನು…
ಇದಕ್ಕಾಗಿ ನೀವು ಸಂಜು ಚಿತ್ರ ನೋಡಬೇಕು.
ಒಂದು ಸುಂದರ ಪರಿಸರದೊಳಗೆ ಅರಳಿರುವ ಅಪ್ಪಟ ಪ್ರೀತಿಯ ಸೆಳೆತವನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕೆಂಬ ನೀತಿಯ ಸಮಯ ಪ್ರಜ್ಞೆಯ ಮಾತು, ಮಗನಿಗಾಗಿ ತಾಯಿ ಎದುರಿಸುವ ಅವಮಾನ , ಸಂಕಟ ಮನಮುಟ್ಟುವಂತಿದೆ.
ಬೆಲ್ಲ ಇದ್ದ ಕಡೆ ಇರುವೆಗಳ ರಾಶಿ ಎಂಬಂತೆ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳಿಸುವ ನಿರ್ಧಾರ ಸೇರಿದಂತೆ ಒಂದಷ್ಟು ಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿರುವ ರೀತಿ ಮೆಚ್ಚುವಂಥದ್ದು, ಮೊದಲ ಭಾಗ ನೀರಸವಾಗಿ ಸಾಗಿದರು, ದ್ವಿತೀಯ ಭಾಗ ಗಮನ ಸೆಳೆಯುವಂತೆ ಮೂಡಿದೆ. ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಆದರೂ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದ್ದು, ಒಂದು ಅರ್ಥಪೂರ್ಣ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇಬೇಕು. ಇನ್ನು ಸಂಗೀತ ಉತ್ತಮವಾಗಿದ್ದು , ಛಾಯಾಗ್ರಹಕರ ಕೈಚಳಕ ಅಚ್ಚುಕಟ್ಟಾಗಿದ್ದು , ಸಾಹಸ ದೃಶ್ಯಗಳು ಸೈ ಎನ್ನುವಂತಿದೆ.
ಇಡೀ ಚಿತ್ರದ ಹೈಲೈಟ್ ಎಂದರೆ ನಟಿ ಸಾತ್ವಿಕ. ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಮೊದಲ ಚಿತ್ರದಲ್ಲೇ ನಾಯಕ ಮನ್ವಿತ್ ಬಹಳ ಶ್ರಮ ಪಟ್ಟಿರುವುದು ಕಾಣುತ್ತದೆ. ಮತ್ತಷ್ಟು ಪರಿಪಕ್ವತೆ ಆದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಸಿಗುವಂತಿದೆ.
ಇನ್ನು ಕಡೆ ಮನೆ ಕುಶಾಲಪ್ಪನಾಗಿ ಬಾಲ ರಾಜ್ವಾಡಿ ಎಂದಿನಂತೆ ತಮ್ಮ ನಟನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇಂತಹ ತಾಯಿಯು ಇರ್ತಾರ ಎನ್ನುವ ಹಾಗೆ ಹಿರಿಯ ನಟಿ ಸಂಗೀತಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಉಳಿದಂತೆ
ಸುಂದರಶ್ರೀ , ಬೌಬೌ ಜಯರಾಮ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ನ್ಯಾಯ ಸಲ್ಲಿಸಿದ್ದಾರೆ. ಒಂದು ಸರಳ ಕಥೆಯಲ್ಲಿ ಸ್ನೇಹ , ಪ್ರೀತಿ , ಮಮಕಾರ , ಕೋಪ , ನೋವು , ನಲಿವು , ಹಾಸ್ಯದೊಂದಿಗೆ ಹೊರಬಂದಿರುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.