‘ಭೈರಾದೇವಿ’ಯ ಆತ್ಮದ ಸೇಡಿನ ರಹಸ್ಯ (ಚಿತ್ರವಿಮರ್ಶೆ -ರೇಟಿಂಗ್ : 4/5 )
ಚಿತ್ರ : ಭೈರಾದೇವಿ
ನಿರ್ದೇಶಕ : ಶ್ರೀಜೈ
ನಿರ್ಮಾಪಕಿ : ರಾಧಿಕಾ ಕುಮಾರಸ್ವಾಮಿ
ಸಂಗೀತ : ಕೆ.ಕೆ.ಸೆಂಥಿಲ್
ಛಾಯಾಗ್ರಹಣ : ಜೆ.ಎಸ್. ವಾಲಿ
ತಾರಾಗಣ : ರಾಧಿಕಾ ಕುಮಾರಸ್ವಾಮಿ , ರಮೇಶ್ ಅರವಿಂದ್, ಅನು ಪ್ರಭಾಕರ್, ರಂಗಾಯಣ ರಘು, ಸ್ಕಂದ ಅಶೋಕ್, ರವಿಶಂಕರ್, ಶಿವರಾಮಣ್ಣ ಹಾಗೂ ಮುಂತಾದವರು…
ಸಾಮಾನ್ಯವಾಗಿ ಆತ್ಮ , ಪ್ರೇತಾತ್ಮಗಳ ಕಾಟದ ಚಿತ್ರಗಳು ಬಹಳಷ್ಟು ಬಂದಿದೆ. ಆದರೆ ಎಲ್ಲದಕ್ಕೂ ಒಂದು ಹಿನ್ನೆಲೆ ಇದ್ದೇ ಇರುತ್ತದೆ. ಅಂತಹದ್ದೇ ಒಂದು ಕೌಟುಂಬಿಕ ಹಿನ್ನೆಲೆಯಲ್ಲಿ ನಡೆದ ದುರಂತ ಸಾವು , ಸೇಡಿನ ಹಾದಿಯಲ್ಲಿ ತಿರುಗಿ ಏನೆಲ್ಲಾ ಅನಾಹುತಗಳು ಆಗುತ್ತದೆ ಎಂಬುದನ್ನು ಬಹಳ ರೋಚಕವಾಗಿ ದೆವ್ವದ ಆರ್ಭಟ , ಅಘೋರಿಯ ತಂತ್ರ , ಮಂತ್ರಗಳ ನಡುವೆ ತಾಯಿ ಮಗಳ ಸಂಬಂಧ , ಪೊಲೀಸ್ ಅಧಿಕಾರಿಯ ಆಟ, ಹೀಗೆ ಒಂದಕ್ಕೊಂದು ಕೊಂಡಿಯಂತೆ ಪ್ರೇಕ್ಷಕರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಭೈರಾದೇವಿ”.
ಡಿಸಿಪಿ ಅರವಿಂದ್ (ರಮೇಶ್ ಅರವಿಂದ್) , ತನ್ನ ಪತ್ನಿ ಶಾಲಿನಿ (ಅನುಪ್ರಭಾಕರ್) ಹಾಗೂ ಅವರಿಗೊಂದು ಮುದ್ದಾದ ಹೆಣ್ಣು ಮಗು ಅದಿತಿ , ಪ್ಯಾರಾ ನಾರ್ಮಲ್ ಸಂಶೋಧನೆಯಲ್ಲಿ ಕೆಲಸ ಮಾಡುವ ಶಾಲಿನಿ ತಂಗಿ ಭೂಮಿಕ (ರಾಧಿಕಾ). ಅಕ್ಕ ಬಾವನ ಪ್ರೀತಿಯಲ್ಲಿ ಬೆಳೆಯುತ್ತಾಳೆ.
ಕಾಲೇಜಿನಲ್ಲಿ ಚೇತು (ಸ್ಕಂದ ಅಶೋಕ್) ಜೊತೆ ಗೆಳೆತನ. ಈ ಸುಖ ಸಂಸಾರದ ಹಿಂದೆ ಒಂದು ಕಠೋರ ಫ್ಲಾಶ್ ಬ್ಯಾಕ್. ಡಿಸಿಪಿ ಅರವಿಂದ್ ಪತ್ನಿ ಶಾಲಿನಿ ಆತ್ಮಹತ್ಯೆ ಹಿಂದೆ ಒಂದು ನಿಗೂಢ. ಇದರಿಂದ ಮನನೊಂದ ಅರವಿಂದ್ ಆ ಮನೆಯನ್ನ ಬಿಟ್ಟು , ತನ್ನ ಮಗಳು ಅದಿತಿ ಯನ್ನು ಬೋರ್ಡಿಂಗ್ ಶಾಲೆಯಲ್ಲಿ ಓದಿಸುತ್ತಿರುತ್ತಾನೆ.
ಇದರ ನಡುವೆ ಅರವಿಂದ್ ಹೆಂಡತಿ ಸಮಾಧಿಗೆ ಪೂಜೆ ಸಲ್ಲಿಸಿ, ಮನೆಗೆ ಬಂದರೂ ಆತ್ಮದ ಕಾಟ ಎದುರಾಗುತ್ತದೆ.ಇದು ತನ್ನ ಹೆಂಡತಿಯೇ ಇರಬೇಕೆಂಬ ಭಯ. ಅರವಿಂದ್ ಕಾರ್ ಡ್ರೈವರ್ ವೀರಯ್ಯ (ರಂಗಾಯಣ ರಘು) ವಾರಣಾಸಿಯಲ್ಲಿ ಆತ್ಮಕ್ಕೆ ಮುಕ್ತಿ ನೀಡಿಸುವ ಹಿರಿಯ ವ್ಯಕ್ತಿ (ಶಿವರಾಮಣ್ಣ) ಮೂಲಕ ಅಘೋರಿ ಬಾಬಾ ರನ್ನ ಭೇಟಿ ಮಾಡಲು ಹೊರಡುತ್ತಾನೆ.
ಗುಹಾಂತರದಲ್ಲಿರುವ ಬಾಬಾ ಸ್ವಾಮಿನಾಥ (ರವಿಶಂಕರ್) ಹಾಗೂ ಶಿಷ್ಯೆ ಭೈರಾದೇವಿ (ರಾಧಿಕಾ ಕುಮಾರಸ್ವಾಮಿ) ಸೇರಿದಂತೆ ಅಘೋರಿಗಳು ಶಂಭೋ ಶಿವಶಂಕರನ ಆರಾಧಿಸುತ್ತಾ ಶಕ್ತಿಯನ್ನ ಪಡೆದು ಬಂಗಿ ಸೇದುತ್ತಾ ಶವಭಕ್ಷಣೆಯನ್ನ ಮಾಡುವ ಈ ಅಘೋರಿಯ ಬಾಬಾ ಬಳಿ ಡಿಸಿಪಿ ಅರವಿಂದ್ ತಾನು ಎದುರಿಸಿದ್ದನ್ನು ಹೇಳುತ್ತಾನೆ. ಇದಕ್ಕೆ ಭೈರಾದೇವಿಯೇ ಸೂಕ್ತ ಪರಿಹಾರ ನೀಡುತ್ತಾಳೆಂದು ಆಕೆಯನ್ನು ಅರವಿಂದ್ ಜೊತೆ ಕಳಿಸುತ್ತಾನೆ. ತನ್ನ ಮಂತ್ರ ಶಕ್ತಿಯ ಮೂಲಕ ಆತ್ಮವನ್ನು ಕಟ್ಟಿ ಹಾಕಲು ಮುಂದಾಗುವ ಸಮಯಕ್ಕೆ ಭೈರಾದೇವಿಯ ಎದುರು ಒಂದು ಕಠೋರ ಸತ್ಯ ಹೊರಬರುತ್ತದೆ.
ಆತ್ಮ ಯಾರು…
ಶಾಲಿನಿ ಸತ್ತಿದ್ದು ಹೇಗೆ…
ಭೈರಾದೇವಿ ತೋರ್ಸೋ ಸತ್ಯ ಏನು…
ಅರವಿಂದ್ ಹೇಳುವ ಸತ್ಯ ಯಾವುದು…
ಭೈರಾದೇವಿ ಭಾಗ-2 ಬರುತ್ತಾ..
ಇದಕ್ಕೆಲ್ಲ ಉತ್ತರ ನೀವು ಈ ಚಿತ್ರವನ್ನು ನೋಡಬೇಕು.
ಇಡೀ ಚಿತ್ರದ ಕೇಂದ್ರ ಬಿಂದು ನಟಿ ರಾಧಿಕಾ ಕುಮಾರಸ್ವಾಮಿ ಹೆಣ್ಣು ಅಘೋರಿಯಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ವೇಷ , ಭೂಷಣದ ಜೊತೆಗೆ ಕಣ್ಣಲ್ಲೇ ತನ್ನ ನಟನಾ ಶಕ್ತಿಯನ್ನು ತೆರೆದಿಟ್ಟಿದ್ದಾರೆ. ಸಂಭಾಷಣೆ , ನೃತ್ಯ , ಸಾಹಸ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ.
ಒಂದು ಅದ್ದೂರಿ ಚಿತ್ರದ ನಿರ್ಮಾಣದ ಜೊತೆ ಎರಡು ಶೇಡ್ ಗಳ ಮೂಲಕ ನಟನೆಯಲ್ಲೂ ಗೆದ್ದಿರುವ ರಾಧಿಕಾ ಕುಮಾರಸ್ವಾಮಿ ಇನ್ನು ಅಭಿನಯಿಸುವ ಶಕ್ತಿ ಎಷ್ಟಿದೆ ಎಂದು ತೆರೆದಿಟ್ಟಿದ್ದಾರೆ. ಅದೇ ರೀತಿ ನಟ ರಮೇಶ್ ಅರವಿಂದ್ ಕೂಡ ಮತ್ತೆ ತಮ್ಮ ನಟನ ಸಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದ ಜೊತೆಗೆ ಸಮಯಕ್ಕೆ ಸರಿಯಾಗಿ ಎರಡು ಮನಸ್ಸಿನ ವ್ಯಕ್ತಿಯಾಗಿ ಮಿಂಚಿದ್ದಾರೆ.
ನಟಿ ಅನುಪ್ರಭಾಕರ್ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಅವರ ಮಗಳಾಗಿ ಪುಟಾಣಿ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಪೊಲೀಸ್ ಕಾರ್ ಡ್ರೈವರ್ ಆಗಿ ರಂಗಾಯಣ ರಘು ಭಯಭೀತರಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಘೋರಿ ಬಾಬರಾಗಿ ರವಿಶಂಕರ್ ತಮ್ಮ ಧ್ವನಿ , ಗತ್ತಿನಲ್ಲಿ ಅಬ್ಬರಿಸಿದ್ದಾರೆ.ಕಾಲೇಜು ವಿದ್ಯಾರ್ಥಿಯಾಗಿ ಸ್ಕಂದ ಅಶೋಕ್, ಟೀಚರ್ ಪಾತ್ರದಲ್ಲಿ ಮಾಳವಿಕಾ ಅವಿನಾಶ್ , ಶಾಲಾ ಫಾದರ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
ಇನ್ನು ನಿರ್ದೇಶಕ ಶ್ರೀಜೈ
ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ವಿಭಿನ್ನವಾಗಿದೆ. ಮುಖವಾಡದ ಬದುಕಿನ ಹಿಂದಿರುವ ರಹಸ್ಯ, ಸಂಬಂಧಗಳಲ್ಲಿ ಆಗುವ ಏರುಪೇರು, ಸಾವು ನೋವುಗಳ ಹಿಂದಿರುವ ಆತ್ಮಗಳು , ಸುಳ್ಳಿನ ಹಿಂದಿರುವ ಸತ್ಯವನ್ನು ತೋರಿಸಿರುವ ರೀತಿ ಮೆಚ್ಚುವಂಥದ್ದು, ಅಘೋರಿಗಳ ನಡುವಳಿಕೆ , ಕಾರ್ಯವೈಖರಿ , ಆತ್ಮಗಳ ದ್ವೇಷ, ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಗಮನ ಸೆಳೆಯುವಂತಿದೆ. ಸ್ಮಶಾನದಲ್ಲಿ ಚಿತ್ರೀಕರಿಸಿರುವ ಹಾಡು , ಸಾಹಸ ದೃಶ್ಯಗಳು ಅದ್ಭುತವಾಗಿದೆ.
ಚಿತ್ರಕಥೆ ಕೊಂಚ ವೇಗ ಮಾಡಬಹುದಿತ್ತು , ಶವಭಕ್ಷಣೆ, ತಲೆ ಬುರುಡೆಗಳು ಸೇರಿದಂತೆ ಕೆಲವು ದೃಶ್ಯಗಳು ನೋಡಲು ಹಿಂಸೆ ಎನಿಸಿದರು ಕಥೆಗೆ ಪೂರಕವಾಗಿದೆ. ಇನ್ನು ಈ ಚಿತ್ರಕ್ಕೆ ಬೆನ್ನೆಲುಬವಾಗಿ ರವಿರಾಜ್ ಹಾಗೂ ಯಾದವ್ ಸಾತ್ ನೀಡಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕೆ.ಕೆ .ಸೆಂಥಿಲ್ ಪ್ರಶಾಂತ್ ಸಂಗೀತ ಅಬ್ಬರಿಸಿದ್ದು , ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಅದೇ ರೀತಿ ಛಾಯಾಗ್ರಾಹಕ ಜೆ.ಎಸ್. ವಾಲಿ ಕೈಚಳಕ ಅದ್ಭುತವಾಗಿದೆ. ರವಿವರ್ಮರ ಸಾಹಸ ದೃಶ್ಯಗಳು ಸೈ ಎನ್ನುವಂತಿದೆ. ಕಲಾ ನಿರ್ದೇಶನ ಕೂಡ ಅಚ್ಚುಕಟ್ಟಾಗಿದ್ದು, ಸಂಕಲನ ಸೇರಿದಂತೆ ಗ್ರಾಫಿಕ್ಸ್ ಕೆಲಸವೂ ಗಮನ ಸೆಳೆಯುತ್ತದೆ. ಒಟ್ನಲ್ಲಿ ಹಾರರ್, ಸಸ್ಪೆನ್ಸ್ ಪ್ರಿಯರಿಗೆ ಬಹುಬೇಗ ಇಷ್ಟವಾಗುವ ಈ ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.