ವಿನೂತನ ಶೈಲಿಯಲ್ಲಿ “#ಪಾರು ಪಾರ್ವತಿ” ಹಾಡುಗಳ ಲೋಕಾರ್ಪಣೆ
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜರ್ನಿ ಚಿತ್ರ ಬರಲು ಸಿದ್ಧವಾಗಿದೆ. EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ “ಬಿಗ್ ಬಾಸ್” ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ “#ಪಾರು ಪಾರ್ವತಿ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಲಹರಿ ವೇಲು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲಹರಿ ವೇಲು ಹಾಗೂ ಚಿತ್ರತಂಡದ ಸದಸ್ಯರು ಸೇರಿ ವಿನೂತನ ಶೈಲಿಯಲ್ಲಿ ಹಾಡುಗಳನ್ನು ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕೆಲವು ದಿನಗಳ ಹಿಂದೆ ಈ ಚಿತ್ರತಂಡದವರು ನನ್ನನ್ನು ಭೇಟಿಯಾಗಿ, ಹಾಡುಗಳನ್ನು ಕೇಳಿಸಿದರು. ಆರ್ ಹರಿ ಸಂಗೀತ ಸಂಯೋಜಿಸಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಲಹರಿ ವೇಲು ತಿಳಿಸಿದರು.
ನಾನು ಮೊದಲೇ ತಿಳಿಸಿದ ಹಾಗೆ ಪಿ.ವಾಸು, ಎಂ ಮನೋನ್, ಅರವಿಂದ್ ಶಾಸ್ತ್ರಿ, ಸಿಂಪಲ್ ಸುನಿ ಮುಂತಾದ ನಿರ್ದೇಶಕರ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದೆ. ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ಪ್ರೇಂನಾಥ್ ಅವರಿಗೆ ಅಭಿನಂದನೆ. ಇದೊಂದು ಟ್ರಾವೆಲ್, ಅಡ್ವೆಂಚರ್ ಡ್ರಾಮ ಜಾನರ್ ನ ಚಿತ್ರ. ಇದರಲ್ಲಿ ಹಾಡುಗಳು ಪ್ರಮುಖಪಾತ್ರವಹಿಸಿದೆ.
ಆರ್ ಹರಿ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಹಾಗೂ ನಾಲ್ಕು ಬಿಟ್ ಗಳು ಚಿತ್ರದಲ್ಲಿದೆ. ಆದರೆ ಜ್ಯೂಕ್ ಬಾಕ್ಸ್ ನಲ್ಲಿ ಹನ್ನೆರಡು ಹಾಡುಗಳು ಬಿಡುಗಡೆಯಾಗಿದೆ. ನಾಗಾರ್ಜುನ್ ಶರ್ಮಾ ಅವರು ಐದು ಹಾಡುಗಳನ್ನು ಬರೆದಿದ್ದಾರೆ. ಜೆಸ್ಸಿ ಗಿಫ್ಟ್, ವಿಜಯ್ ಜೇಸುದಾಸ್, ಆಂಟೋನಿ ಮ್ಯಕಿಯಾನ್ (ಐರೀಶ್ ಗಾಯಕ), ಔರಾ, ಎಂ.ಸಿ.ಬಿಜ್ಜು, ಚೇತನ್ ನಾಯಕ್, ದಿಯಾ ಹೆಗ್ಡೆ ಸೇರಿದಂತೆ ಹದಿಮೂರು ಜನ ಗಾಯಕರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಎಂ.ಆರ್.ಟಿ ಮ್ಯೂಸಿಕ್ ಮೂಲಕ ನಮ್ಮ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು. ಪ್ರವಾಸ ಕಥನ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡ್ ನಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ.
ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಟ್ರಾವೆಲ್ನಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇನ್ನೆರಡು ಪ್ರಮುಖ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು.
ನಾನು ಮೊದಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದಂತೆ ಇದೊಂದು ಪ್ರಯಾಣ ಹಾಗೂ ಅಡ್ವೆಂಚರ್ಸ್ ಕಥನಾ. ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. ಇಂದು ಹಾಡುಗಳ ಮೂಲಕ ನಮ್ಮ ಚಿತ್ರ ಜನರನ್ನು ತಲುಪುತ್ತಿದೆ ಎಂದು ದೀಪಿಕಾ ದಾಸ್ ತಿಳಿಸಿದರು. ಇದು ನಾನು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರ ಎಂದರು ನಟಿ ಪೂನಂ ಸರ್ ನಾಯಕ್. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಕೇರಳ ಮೂಲದ ನಟ ಫವಾಝ್ ಅಶ್ರಫ್ ಹೇಳಿದರು.
ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪಿ.ಬಿ.ಪ್ರೇಂನಾಥ್ ಮನವಿ ಮಾಡಿದರು. ಛಾಯಾಗ್ರಾಹಕ ಅಬಿನ್ ರಾಜೇಶ್, ಸಂಗೀತ ನಿರ್ದೇಶಕ ಆರ್ ಹರಿ, ಸಂಕಲನಕಾರ ಸಿ.ಕೆ.ಕುಮಾರ್, ಗೀತರಚನೆಕಾರ ನಾಗಾರ್ಜುನ್ ಶರ್ಮಾ, ಗಾಯಕರಾದ ಚೇತನ್ ನಾಯಕ್, ಔರಾ, ಎಂ ಸಿ ಬಿಜ್ಜು, ಆಂಟೋನಿ ಮ್ಯಕಿಯಾನ್, ಚೇತನ್ ನಾಯಕ್ ಹಾಗೂ ಕಲಾ ನಿರ್ದೇಶಕ ರಾಘು ಮೈಸೂರು ಚಿತ್ರದ ಕುರಿತು ಮಾತನಾಡಿದರು.