ಕೊಲೆಯ ಸುಳಿಯಲ್ಲಿ ಮಮಕಾರದ ಛಾಯೆ “ಪರಿಮಳ ಡಿಸೋಜಾ” (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಪರಿಮಳ ಡಿಸೋಜಾ
ನಿರ್ದೇಶಕ :ಗಿರಿಧರ್. ಹೆಚ್.ಟಿ
ನಿರ್ಮಾಪಕ : ವಿನೋದ್ ಶೇಷಾದ್ರಿ
ಸಂಗೀತ : ಕ್ರಿಸ್ಟೋಫರ್ ಜೈಸನ್
ಛಾಯಾಗ್ರಹಕ : ರಾಮ್.ಕೆ
ತಾರಾಗಣ : ಭವ್ಯ , ಕೋಮಲ ಬನವಾಸಿ , ಶ್ರೀನಿವಾಸ್ ಪ್ರಭು , ವಿನೋದ್ ಶೇಷಾದ್ರಿ , ಪೂಜಾ ರಾಮಚಂದ್ರ , ಆಂಜನಪ್ಪ , ಸುನಿಲ್ , ಶಿವಕುಮಾರ್ ಆರಾಧ್ಯ, ಚಂದನ , ಜಯರಾಮಣ್ಣ , ಜ್ಯೋತಿ ಮರೂರು , ಲಕ್ಷ್ಮಣ ಗೌಡ , ಉಗ್ರಂ ರೆಡ್ಡಿ , ನಿಸಂಕಾ ಮಾನಸಿ ಹಾಗೂ ಮುಂತಾದವರು…
ಪ್ರತಿಯೊಬ್ಬರೂ ನೆಮ್ಮದಿಯಿಂದ , ಸುಖ ಸಂಸಾರದ ಜೀವನ ನಡೆಸಬೇಕೆಂದು ಆಸೆಪಡೋದು ಸಹಜ. ತಂದೆ ತಾಯಿಯ ಮಮಕಾರ , ಮಕ್ಕಳ ಬೆಳವಣಿಗೆಯ ಕನಸು , ಸಂಬಂಧಗಳ ಮೌಲ್ಯ , ಗಂಡ ಹೆಂಡತಿಯರ ಬದುಕು , ಸಂಬಂಧಿಕರೊಂದಿಗೆ ಒಡನಾಟ ಎಲ್ಲವೂ ಸುಖಮಯ ಸರಾಗ ಎನ್ನುವ ಕುಟುಂಬದಲ್ಲಿ ಕೊಲೆ ಒಂದು ನಡೆದಾಗ ಎನ್ನೆಲ್ಲಾ ಅವಾಂತರಗಳು ಎದುರಾಗುತ್ತದೆ ಎಂಬುದನ್ನ ಪ್ರೇಕ್ಷಕರ ಮುಂದೆ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಪರಿಮಳ ಡಿಸೋಜಾ”.
ಒಂದು ಸುಂದರ ಕುಟುಂಬ ಮನೆಯಲ್ಲಿ ತಂದೆ, ತಾಯಿ, ಮಗ, ಸೊಸೆ , ಸಂಬಂಧಿಕರು , ಆಳುಕಾಳು ಸೇರಿದಂತೆ ನಿತ್ಯದ ಬದುಕು ನಡೆಯುತ್ತಿರುವಾಗಲೇ ಒಂದು ದಿನ ಸೊಸೆ ಪರಿಮಳ ಡಿಸೋಜಾ (ಪೂಜಾ ರಾಮಚಂದ್ರ) ಮನೆಯ ಬಾತ್ರೂಮ್ ನಲ್ಲಿ ಸಾವನ್ನಪ್ಪಿರುತ್ತಾಳೆ. ಇದು ಇಡೀ ಮನೆಯ ವಾತಾವರಣ ತಲ್ಲಿನಗೊಳಿಸುತ್ತದೆ.
ಈ ಕೊಲೆಯ ಮೂಲ ಹುಡುಕಲು ಬರುವ ಮಹಿಳಾ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ ( ಕೋಮಲ ಬನವಾಸಿ) ಹಾಗೂ ಅವರ ತಂಡ. ಕೊಲೆಯಾದ ಪರಿಮಳ ಡಿಸೋಜಾ ಕ್ರಿಶ್ಚಿಯನ್ ಹುಡುಗಿ ಆದ ಕಾರಣ ಈ ಕೊಲೆ ನಡೆದಿರಬಹುದು ಎಂಬ ಅನುಮಾನದಿಂದ ಗಂಡ , ಅತ್ತೆ , ಸೋದರ ಮಾವ , ತಂಗಿ , ಮನೆಯ ಕೆಲಸದವರು , ಸೆಕ್ಯೂರಿಟಿ ಸೇರಿದಂತೆ ಎಲ್ಲರ ಮೇಲು ಅನುಮಾನದ ಛಾಯೆ ಹರಡುತ್ತಾ ಹೋಗುತ್ತದೆ.
ಬೇರೆ ಬೇರೆ ದೃಷ್ಟಿಕೋನದೊಂದಿಗೆ ಪ್ರತಿಯೊಬ್ಬರನ್ನು ವಿಚಾರಣೆ ಮಾಡುತ್ತಿರುವಾಗಲೇ ಮನೆಯ ಪ್ರತಿಯೊಬ್ಬರ ಮೇಲು ಅನುಮಾನಗಳು ಹೆಚ್ಚುತ್ತಾ ಹೋಗುತ್ತದೆ. ಆದರೆ ಯಾವುದೇ ಸುಳಿವು ಸಿಗದಿರುವ ಸಮಯದಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ನಡುವೆಯೂ ಸೈಬರ್ ಕ್ರೈಮ್ ನಿಂದ ಸುಳಿವು ಸಿಗುತ್ತದೆ. ಆದರೆ ಅಲ್ಲೊಂದು ತಾಯಿ (ಭವ್ಯ) ಮಗ ಸೈಕಲ್ ಪಾಪು (ಸುನೀಲ) ನ ಮುದ್ದಾದ ಬಾಂಧವ್ಯದ ಬೆಸುಗೆ. ಅರಿಯದ ವಯಸ್ಸಿನಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ. ಹುಚ್ಚುನಂತೆ ತಾಯಿ ಪ್ರೀತಿಗೆ ಪರದಾಡುವ ಪಾಪುವಿನ ಬದುಕಿಗೂ ಈ ಪರಿಮಳ ಡಿಸೋಜಾ ಸಾವಿಗೂ ಏನು ಕಾರಣ… ಎಂಬುವುದೇ ಒಂದು ದೊಡ್ಡ ಪ್ರಶ್ನೆ. ಈ ಕೊಲೆಯ ರಹಸ್ಯ ತುಳಿಯಬೇಕಾದರೆ ಒಮ್ಮೆ ಪರಿಮಳ ಡಿಸೋಜಾ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಗಿರಿಧರ್ ಒಂದು ಸಸ್ಪೆನ್ಸ್ , ಥ್ರಿಲ್ಲರ್ ಮರ್ಡರ್ ಮೇಸ್ಟ್ರಿ ಕಥೆಯನ್ನು ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ತಾಯಿ ಮಗನ ಬಾಂಧವ್ಯದ ಸೆಳೆತವನ್ನು ತೆರೆಯ ಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಚಿತ್ರಕಥೆಯ ಓಟ ಇನ್ನಷ್ಟು ಅಚ್ಚುಕಟ್ಟಾಗಿ ಮಾಡಬಹುದಿತ್ತು. ಕೆಲವು ಸನ್ನಿವೇಶಗಳು ಅನಗತ್ಯ ಎನಿಸುತ್ತದೆ.
ಪ್ರಯತ್ನ ಉತ್ತಮವಾಗಿದ್ದು , ಇನ್ನಷ್ಟು ಪೂರ್ವ ತಯಾರಿ ಮಾಡಬೇಕಾಗಿತ್ತು ಅನಿಸುತ್ತದೆ. ಟ್ವಿಸ್ಟ್ ಗಳ ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ದೃಶ್ಯಗಳು ಗಮನ ಸೆಳೆಯುತ್ತದೆ. ನಿರ್ಮಾಪಕ ವಿನೋದ್ ಶೇಷಾದ್ರಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ನಟನ ಆಸೆಯನ್ನು ಈಡೇರಿಸಿಕೊಂಡಂತಿದೆ.
ನಟಿ ಕೋಮಲ ಬನವಾಸಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಹಿರಿಯ ನಟಿ ಭವ್ಯ ತಾಯಿಯ ಪಾತ್ರದಲ್ಲಿ , ಪೊಲೀಸ್ ಕಮಿಷನರ್ ಆಗಿ ಶ್ರೀನಿವಾಸ ಪ್ರಭು , ಪರಿಮಳ ಡಿಸೋಜಾ ಪಾತ್ರದಲ್ಲಿ ಪೂಜಾ ರಾಮಚಂದ್ರ , ಹುಚ್ಚು ಮಗನ ಪಾತ್ರದಲ್ಲಿ ಸುನೀಲ್ ಉಳಿದಂತೆ ಅಂಜನಪ್ಪ , ಚಂದನ , ಜ್ಯೋತಿ ಮರೂರು , ಉಗ್ರಂ ರೆಡ್ಡಿ , ಲಕ್ಷ್ಮಣಗೌಡ ಸೇರಿದಂತೆ ಕೆಲವರು ಅಚ್ಚುಕಟ್ಟಾಗಿ ಅಭಿನಯಿಸಿದ್ದು, ಮತ್ತಷ್ಟು ಪ್ರತಿಭೆಗಳು ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ.
ಹಾಡುಗಳು ಉತ್ತಮವಾಗಿದ್ದು , ತಾಯಿ ಮಗನ ಸೆಂಟಿಮೆಂಟ್ ಸಾಂಗ್ ಕೇಳುವಂತಿದೆ. ಛಾಯಾಗ್ರಾಹಕರ ಕೆಲಸ ಕೂಡ ಇನ್ನಷ್ಟು ಚಂದ ಮಾಡಬಹುದಿತ್ತು. ಒಟ್ಟಾರೆ ಸೆಂಟಿಮೆಂಟ್ ಅಂಶದೊಂದಿಗೆ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಕಥಾನಕದೊಂದಿಗೆ ಮೂಡಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.
#parimalad’souza, #kannadamovie, #Review,