ಮರ್ಡರ್ ಮಿಸ್ಟ್ರಿಯ ಮೈಂಡ್ ಗೇಮ್ ‘ತತ್ಸಮ ತದ್ಭವ’ (ಚಿತ್ರವಿಮರ್ಶೆ – ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ತತ್ಸಮ ತದ್ಭವ
ನಿರ್ದೇಶಕ : ವಿಶಾಲ್ ಆತ್ರೇಯ
ನಿರ್ಮಾಪಕರು : ಸ್ಪುತಿ ಅನಿಲ್, ಪನ್ನಗ ಭರಣ, ಚೇತನ್ ನಂಜುಂಡಯ್ಯ
ಸಂಗೀತ : ವೈಭವ್ ವಾಸಕಿ
ಛಾಯಾಗ್ರಹಕ : ಶ್ರೀನಿವಾಸ್ ರಾಮಯ್ಯ
ತಾರಾಗಣ : ಪ್ರಜ್ವಲ್ ದೇವರಾಜ್ , ಮೇಘನಾ ರಾಜ್ , ಪ್ರಶಾಂತ್ ನಟನಾ, ಬಾಲಾಜಿ ಮನೋಹರ್ , ಟಿ. ಎಸ್. ನಾಗಭರಣ, ಮಹತಿ ವೈಷ್ಣವಿ ಭಟ್ , ಅರವಿಂದ್ ಅಯ್ಯರ್ , ಗಿರಿಜಾ ಲೋಕೇಶ್ , ವರುಣ್ ಶ್ರೀನಿವಾಸ್ , ರಾಜಶ್ರೀ ಪೊನ್ನಪ್ಪ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತೆ. ಅದೇ ನಿಟ್ಟಿನಲ್ಲಿ ಒಂದು ಕೊಲೆಯ ಸುತ್ತ ಹಲವಾರು ರೋಚಕ ತಿರುವುಗಳನ್ನ ಬೆಸೆದುಕೊಂಡು , ಅನುಮಾನಗಳ ಛಾಯೆ , ನಾಪತ್ತೆಯಾದವನ ಜಾಡಿನ ಹಿಂದಿರುವ ಸ್ನೇಹ , ಪ್ರೀತಿ , ದ್ವೇಷದ ಸುಳಿಯಲ್ಲಿ ಕಳ್ಳ ಪೊಲೀಸರ ಆಟದ ಸುತ್ತ ಸಾಗುವ ವಿಭಿನ್ನ ಕಥಾಹಂದರದ ಕುತೂಹಲ ಮೂಡಿಸುವ ಹಾದಿಯಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ತತ್ಸಮ ತದ್ಭವ”.
ಬೆಂಗಳೂರಿನ ಸುತ್ತ ಮುತ್ತಲಿನಲ್ಲಿರುವ ಪೊಲೀಸ್ ಸ್ಟೇಷನ್ ಗಳಲ್ಲಿ ಕೇಳಿ ಬರುವ ವಿಚಾರ ಕಿಡ್ನಾಪ್ , ಮರ್ಡರ್ , ರಾಬರಿ , ಅತ್ಯಾಚಾರ , ಪ್ರಕರಣಗಳ ಸದ್ದು , ಅಂತದ್ದೇ ನೋವಿನ ಸುಳಿಯಲ್ಲಿ ಸಿಲುಕಿರುವ ಅರಿಕಾ (ಮೇಘನಾ ರಾಜ್) ತನ್ನ ಗಂಡ ಸಂಜಯ್ ನಾಪತ್ತೆ ಆಗಿರೋದನ್ನ ಗಮನಿಸಿ ಮಾವ , ಅತ್ತೆಗೆ ಕರೆ ಮಾಡಿ ವಿಚಾರಿಸ್ತಾಳೆ.
ತಾಯಿ ಮಗಳು ಇಬ್ಬರೇ ಇರುವ ಕಾರಣ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ನೀಡುತ್ತಾಳೆ. ಅದೇ ಸ್ಟೇಷನ್ನ ಪೊಲೀಸ್ ಅಧಿಕಾರಿಯಾಗಿರುವ ಅರವಿಂದ್ (ಪ್ರಜ್ವಲ್ ದೇವರಾಜ್) ತನ್ನ ಸೂಕ್ಷ್ಮ ನಡೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಅಧಿಕಾರಿಯಾಗಿರುತ್ತಾರೆ. ಈ ಕೇಸಿನ ವಿಚಾರದಲ್ಲೂ ಅರವಿಂದ್ ಹಲವು ದೃಷ್ಟಿಕೋನದಲ್ಲಿ ಆಲೋಚಿಸಿ ಕಾಣೆಯಾದ ಸಂಜಯ್ ರನ್ನ ಹುಡುಕಲು ಮುಂದಾಗುತ್ತಾರೆ.
ಕಾಣೆಯಾಗಿರುವ ಸಂಜಯ್ ಕೆಲಸ ಮಾಡುವ ಸಂಸ್ಥೆ , ಅವನ ಒಡನಾಟ , ಮನಸ್ಥಿತಿ , ಮನೆಯಲ್ಲಿ ಪತ್ನಿಯ ಜೊತೆ ಸಂಬಂಧ , ಕಾಣದ ವ್ಯಕ್ತಿಗಳ ಕುತಂತ್ರ ಹೇಗೆ ಯಾವ ಕಾರಣಕ್ಕಾಗಿ ನಾಪತ್ತೆಯಾಗಿದ್ದಾನೆ ಎಂದು ಹುಡುಕುವಷ್ಟರಲ್ಲಿ ತನ್ನ ಮನೆಯ store ನಲ್ಲಿ ಹೆಣವಾಗಿ ಪತ್ತೆ ಆಗುತ್ತಾನೆ.
ಮುಂದೆ ಚಿತ್ರದ ಓಟ ಬೇರೆ ರೂಪವನ್ನು ಪಡೆದುಕೊಳ್ಳುತ್ತದೆ. ತಪ್ಪು ಮಾಡಿದವರ ಮನಸ್ಥಿತಿಯಲ್ಲಿ ಸ್ಟ್ರಾಂಗ್ ಹಾಗೂ ವೀಕ್ ಮೈಂಡ್ ಏನೆಲ್ಲಾ ಮಾಡುತ್ತಿದೆ ಎಂಬುದನ್ನು ಆರಂಭದಿಂದ ಅಂತ್ಯದವರೆಗೂ ಕುತೂಹಲಕರಿಯಾಗಿ ಐದು ಹಂತಗಳಲ್ಲಿ ಕೊಲೆಯ ಸತ್ಯಾನ್ವೇಷಣೆ ಸಾಗುವ ಮಧ್ಯೆ ಫ್ಲಾಶ್ ಬ್ಯಾಕ್ ಕೂಡ ತೆರೆದುಕೊಳ್ಳುತ್ತಾ ಹೋಗುತ್ತದೆ.
ಕೊಲೆ ಮಾಡಿದವರು ಯಾರು..
ಕಾರಣ ಏನು…
ಇನ್ಸ್ಪೆಕ್ಟರ್ ಹುಡುಕುವ ದಾರಿ…
ಸತ್ಯ ಹೊರ ಬರುತ್ತಾ ಇಲ್ವಾ…
ಕ್ಲೈಮ್ಯಾಕ್ಸ್ ಉತ್ತರ ಏನು…
ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ತತ್ಸಮ ತದ್ಭವ ನೋಡಬೇಕು.
ನಟಿ ಮೇಘನಾ ರಾಜ್ ಬದುಕಿನ ನೋವು , ಸಂಕಷ್ಟಗಳನ್ನು ಎದುರಿಸಿ ಆತ್ಮಸ್ಥೈರ್ಯದೊಂದಿಗೆ ಮತ್ತೆ ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮಗುವಿನ ತಾಯಿಯಾಗಿ ,ಪ್ರೇಯಸಿಯಾಗಿ, ಎರಡು ಮನಸ್ಥಿತಿಯ ಆರಿಕಾ ಹಾಗೂ ಅಕಿರಾ ದ್ವಿಪಾತ್ರವನ್ನ ಭಾವನೆಗಳ ಮೂಲಕ ಸಮರ್ಥವಾಗಿ ನಿರ್ವಹಿಸಿ ಇಡೀ ಚಿತ್ರವನ್ನ ಆವರಿಸಿ ಕೊಂಡಿದ್ದಾರೆ.
ಇದಕ್ಕೆ ಪೂರಕವಾಗಿ ಇನ್ಸ್ಪೆಕ್ಟರ್ ಪಾತ್ರವನ್ನು ಮಾಡಿರುವ ಪ್ರಜ್ವಲ್ ದೇವರಾಜ್ ಕೂಡ ಚಾಣಾಕ್ಷ ಅಧಿಕಾರಿಯಾಗಿ ಪ್ರತಿಯೊಂದು ಹಂತದಲ್ಲೂ ಕೇಸ್ ನ ಏರಿಳಿತಗಳನ್ನು ಎದುರಿಸುತ್ತಾ ಭೇದಿಸುವ ಬುದ್ದಿವಂತಿಗೆ ಶೈಲಿ ಗಮನ ಸೆಳೆಯುವಂತಿದೆ. ಪೊಲೀಸ್ ಪಾತ್ರಕ್ಕೆ ಫಿಟ್ ಎನ್ನುವಂತಿರುವ ಪ್ರಜ್ವಲ್ ಅಚ್ಚುಕಟ್ಟಾಗಿ ಜೀವ ತುಂಬಿ ನಟಿಸಿದ್ದಾರೆ.
ಹಿರಿಯ ನಟಿ ಶೃತಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ಮಗಳಾಗಿ ಮಹತಿ ವೈಷ್ಣವಿ ಭಟ್ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಪ್ರಶಾಂತ್ ನಟನಾ, ಬಾಲಾಜಿ ಮನೋಹರ್ , ಟಿ.ಎಸ್. ನಾಗಭರಣ , ಅರವಿಂದ್ ಅಯ್ಯರ್ , ಗಿರಿಜಾ ಲೋಕೇಶ್, ವರುಣ್ ಶ್ರೀನಿವಾಸ್ , ರಾಶಿ ಪೊನ್ನಪ್ಪ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
ಈ ಒಂದು ಚಿತ್ರವನ್ನು ಮೇಘನಾ ರಾಜ್ ಗೆಳೆಯರಾದ
ಪನ್ನಗ ಭರಣ , ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ನಿರ್ಮಿಸಿದ್ದಾರೆ. ಒಂದು ಇನ್ವೆಸ್ಟಿಗೇಷನ್ ಮರ್ಡರ್ ಮಿಸ್ಟರಿ ಕಥೆಯನ್ನು ಬಹಳ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುವುದರಲ್ಲಿ ಯುವ ನಿರ್ದೇಶಕ ವಿಶಾಲ್ ಆತ್ರೇಯ ಗಮನ ಸೆಳೆದಿದ್ದಾರೆ.ಒಂದರ ಹಿಂದೆ ಒಂದಂತೆ ಐದು ಹಂತವಾಗಿ ಈ ಕೊಲೆಯ ಆಗುಹೋಗುಗಳ ಚಿತ್ರಣವನ್ನು ಫ್ಲಾಶ್ ಬ್ಯಾಕ್ ಜೊತೆಯಲ್ಲಿ ತೆರೆದಿಟ್ಟಿರುವ ರೀತಿ ವಿಭಿನ್ನವಾಗಿದ್ದು , ಕೆಲವೊಂದು ಸನ್ನಿವೇಶಗಳು ಗೊಂದಲವೆನಿಸುತ್ತದೆ. ಚಿತ್ರಕಥೆಯ ವೇಗ ಹೆಚ್ಚು ಮಾಡಬಹುದಿತ್ತು, ಒಂದು ಉತ್ತಮ ಪ್ರಯತ್ನವಾಗಿ ಹೊರ ಬಂದಿದೆ. ಈ ಚಿತ್ರದಲ್ಲಿ ಬರುವ ಒಂದು ಹಾಡು ಹಾದು ಹೋದಂತೆ ಕಂಡರೂ ಸಂಗೀತ ನೀಡಿರುವ ವೈಭವ್ ವಾಸಕಿಯ ಹಿನ್ನಲೆ ಸಂಗೀತ ಬಹಳ ಉತ್ತಮವಾಗಿ ಮೂಡಿ ಬಂದಿದೆ.
ಇನ್ನು ಈ ಚಿತ್ರದ ಛಾಯಾಗ್ರಾಹಕ ಶ್ರೀನಿವಾಸ್ ರಾಮಯ್ಯ ಕ್ಯಾಮರಾ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ಇದೊಂದು ಬೇರೆದೇ ಪ್ಯಾಟ್ರನ್ ನಲ್ಲಿ ಚಿತ್ರ ಹೊರಬಂದಿದೆ. ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿ ಇಷ್ಟಪಡುವವರಿಗೆ ಚಿತ್ರ ಖಂಡಿತಾ ಇಷ್ಟವಾಗುತ್ತದೆ. ಒಟ್ನಲ್ಲಿ ಎಲ್ಲಾ ವರ್ಗದವರು ಈ ತತ್ಸಮ ತದ್ಭವ ಚಿತ್ರವನ್ನು ಒಮ್ಮೆ ನೋಡಬಹುದು.
#TatsamaTadbhava, #MovieReview, #MeghanaRaj, #PrajwalDevaraj,