ಡ್ರಗ್ಸ್ ಹಾಗೂ ಕೊಲೆಯ ಹಿಂದಿನ ರಹಸ್ಯ : ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಪ್ರಕರಣ ತನಿಖಾ ಹಂತದಲ್ಲಿದೆ
ನಿರ್ದೇಶನ : ಸುಂದರ್.ಎಸ್
ನಿರ್ಮಾಪಕ : ಚಿಂತನ್ ಕಂಬಣ್ಣ
ಸಂಗೀತ : ಶಿವೋಂ
ಛಾಯಾಗ್ರಹಣ : ಮೋಹನ್ , ಜಗದೀಶ್
ತಾರಾಗಣ : ಮಹೀನ್ ಕುಬೇರ್, ಚಿಂತನ್ ಕಂಬಣ್ಣ , ಮುತ್ತುರಾಜ್. ಟಿ, ರಾಜ್ ಗಗನ್, ಪ್ರದೀಪ್ ಕುಮಾರ್ ಹಾಗೂ ಮುಂತಾದವರು…
ಒಂದೊಂದು ಕ್ರೈಂ ಹಿಂದೆ ಕೂಡ ಕಾಣದ ಕೈಗಳ ಕೈವಾಡ ಇದ್ದೇ ಇರುತ್ತದೆ. ಅದೆಲ್ಲಾದಕ್ಕೂ ಒಂದು ಕಾರಣ ಕೇಂದ್ರ ಬಿಂದುವಾಗಿರುತ್ತದೆ. ಅಂತಹದ್ದೇ ಒಂದು ಕಥಾನಕ ಮೂಲಕ ಯುವ ಪೀಳಿಗೆಗಳ ಬದುಕನ್ನು ಹಾಳು ಮಾಡುತ್ತಿರುವಂತಹ ಡ್ರಗ್ಸ್ ಮಾಫಿಯಾದ ಕರಾಳ ಛಾಯೆ,
ಸಿಲುಕಿಕೊಂಡವರ ಪರಿಸ್ಥಿತಿ,
ಕಿಡ್ನಾಪ್ , ಕೊಲೆ, ಸಾಕ್ಷಿಯ ಸುತ್ತ ಪೊಲೀಸ್ ತನಿಖಾ ಹಾದಿಯಲ್ಲಿ ಕಾಣುವ ಕರಾಳ ಸತ್ಯದ ಮೇಲೆ ಬೆಳಕು ಚೆಲ್ಲಿರುವಂತಹ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಪ್ರಕರಣ ತನಿಖಾ ಹಂತದಲ್ಲಿದೆ”. ಹಡಗಿನ ಮೂಲಕ ಬೇರೆ ದೇಶದಿಂದ ಬರುವ ಡ್ರಗ್ಸ್ ಇಲ್ಲಿನ ಕಿಂಗ್ ಪಿನ್ ಗಳ ಮೂಲಕ ತಾವು ಪ್ಲಾನ್ ಮಾಡಿದಂತ ಸ್ಥಳಕ್ಕೆ ಸಾಗಿಸುವ ಚಾಣಾಕ್ಷರಾಗಿ ಕೆ.ಪಿ. ಟೀಮ್ ಹಾಗೂ ಜಾರ್ಜ್ ಟೀಮ್ ಮುಂದಾಗಿರುತ್ತಾರೆ.
ಈ ದಂಧೆ ಕೋರರ ಕೇಸ್ ಗೆ ಲಾಯರ್ ವಾಸುಕಿ ಸಾತ್ ಇರುತ್ತದೆ. ಈ ಡ್ರಗ್ಸ್ ಮಾರಾಟದ ಹಾದಿಯಲ್ಲಿ ಮೂಟೆ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಶವ ಒಂದು ಪತ್ತೆಯಾಗುತ್ತದೆ. ತನಿಖೆಗೆ ಮುಂದಾಗುವ ಪೊಲೀಸ್ ಅಧಿಕಾರಿ ಹಾಗೂ ತಂಡಕ್ಕೆ ತಲೆ ಇಲ್ಲದ ದೇಹ ಸಿಗುತ್ತದೆ.
ಒಂದು ಸಾಕ್ಷಿಯ ಮೂಲಕ ಗೌರವ್ ಎಂದು ಗುರುತಿಸಿ ಆತನ ಅಣ್ಣ ಡಾಕ್ಟರ್ ಭಾರ್ಗವ ನನ್ನ ಕರ್ಸಿ ಮಾಹಿತಿ ಕಲೆ ಹಾಕುತ್ತಾರೆ. ಅಣ್ಣನ ಮೂಲಕ ತಮ್ಮನ ಡ್ರಗ್ಸ್ ದಂಧೆಯ ವಿಚಾರ ಒಂದಷ್ಟು ಕ್ಲೂ ನೀಡುತ್ತದೆ. ಇದರ ನಡುವೆ ಮೆಡಿಕಲ್ ಶಾಪ್ ಓನರ್ ಸುಭಾಷ್ ನಾಪತ್ತೆ. ಮುಂದೆ ಒಂದರ ಹಿಂದೆ ಒಂದು ಕೊಲೆ ನಡೆಯುತ್ತಲೇ ಹೋಗುತ್ತದೆ.
ಹಿರಿಯ ಅಧಿಕಾರಿಗಳ ಒತ್ತಡದಲ್ಲಿ ಪೊಲೀಸ್ ಗೂ ತಲೆನೋವು ಆಗಿರುತ್ತದೆ. ಸತ್ಯ ಹೊರ ಬರುವ ಹಂತದಲ್ಲಿ ರೋಚಕ ತಿರುವು ಎದುರಾಗುತ್ತದೆ.
ಕೊನೆಗೆ ಕಾರಣ ಏನು…
ಕೊಲೆ ಮಾಡಿದ್ದು ಯಾರು…
ಪೊಲೀಸ್ ಗೆ ಸಿಕ್ಕ ಸುಳಿವು..?
ಕ್ಲೈಮಾಕ್ಸ್ ನೀಡುವ ಉತ್ತರ… ಈ ಎಲ್ಲಾ ಮಾಹಿತಿಗಾಗಿ ಚಿತ್ರ ನೀವು ನೋಡಬೇಕು.
ಡ್ರಗ್ಸ್ ಸುಳಿಗೆ ಸಿಲುಕಿದವರ ಬದಕು , ಈ ದಂಧೆಯ ಕಾರ್ಯ ವೈಖರಿ, ಮುಷ್ಟಿಯಲ್ಲಿ ಸಿಕ್ಕವರ ಮನಸ್ಥಿತಿ, ಪೊಲೀಸ್ ತನಿಖೆಯ ಸೂಕ್ಷ್ಮತೆ ಜೊತೆ ತಬ್ಬಲಿ ಹುಡುಗನ ಆಸೆ, ಆಕಾಂಕ್ಷೆ ಸೇರಿ ಹಲವು ವಿಚಾರವನ್ನು ತಮ್ಮ ಪ್ರಥಮ ಪ್ರಯತ್ನದಲ್ಲೇ ಹೇಳಿರುವ ನಿರ್ದೇಶಕರ ಆಲೋಚನೆ ಉತ್ತಮವಾಗಿದೆ.
ಆದರೆ ಚಿತ್ರಕಥೆಯಲ್ಲಿ ಇನ್ನಷ್ಟು ಸೂಕ್ಷ್ಮತೆ ಜೊತೆ ಮೇಕಿಂಗ್ ಉತ್ತಮವಾಗಿ ಮಾಡಬಹುದಿತ್ತು. ಜಾಗೃತಿ ಮೂಡಿಸುವ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಧೈರ್ಯ ಮೆಚ್ಚಲೇಬೇಕು. ಒಂದು ಹಾಡು ಗುನುಗುವಂತಿದೆ , ಸಂಗೀತ ಹಾಗೂ ಛಾಯಾಗ್ರಾಹಕರ ಕೈಚಳಕ ತಕ್ಕ ಮಟ್ಟಿಗಿದೆ. ತಾಂತ್ರಿಕವಾಗಿ ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಇನ್ನು ಪೊಲೀಸ್ ಅಧಿಕಾರಿಯಾಗಿ ಮಾಹಿನ್ ಕುಬೇರ್ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.
ಚಿಂತನ್ ಕಂಬಣ್ಣ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ರಾಜ್ ಗಗನ್ ಸೇರಿದಂತೆ ಉಳಿದ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಕ್ರೈಂ , ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ ಚಿತ್ರ ಪ್ರೇಮಿಗಳಿಗೆ ಇಷ್ಟವಾಗುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.