ಡಿ.27ಕ್ಕೆ ಬಿಡುಗಡೆಯಾಗಲಿರುವ “ಗಜರಾಮ” ಚಿತ್ರದ ಟೈಟಲ್ ಟ್ರ್ಯಾಕ್ ರೀಲಿಸ್
ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರೋ ನಟ ರಾಜವರ್ಧನ್. ಈ ಚಿತ್ರದ ಬಳಿಕ ಕಥೆಗೆ ಹೆಚ್ಚು ಪ್ರಾಧಾನ್ಯತೆ ಇರುವ ಚಿತ್ರಗಳನ್ನೇ ಆಯ್ಕೆ ಮಾಡುತ್ತಿರುವ ರಾಜವರ್ಧನ್ ಈಗ ಗಜರಾಮನಾಗಿ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಗಜರಾಮ ಬಿಡುಗಡೆ ಸಿದ್ಧವಾಗಿದ್ದು, ಡಿಸೆಂಬರ್ 27ಕ್ಕೆ ತೆರೆಗೆ ಎಂಟ್ರಿ ಕೊಡುತ್ತಿದೆ.
ಚಿತ್ರತಂಡ ಹಾಡುಗಳನ್ನು ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚಿಗೆ ರಿಲೀಸ್ ಆದ ಸಾರಾಯಿ ಶಾಂತಮ್ಮ ಗಾನಬಜಾನ ಹಿಟ್ ಲೀಸ್ಟ್ ಸೇರಿದೆ. ಇದೀಗ ಗಜರಾಮನ ಟೈಟಲ್ ಟ್ರ್ಯಾಕ್ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಸಾಹಿತ್ಯ, ಮನೋ ಮೂರ್ತಿ ಸಂಗೀತ, ಹೇಮಂತ್ ಗಾಯನದಲ್ಲಿ ರಾಜವರ್ಧನ್ ಅಬ್ಬರಿಸಿದ್ದಾರೆ.
ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್ ವಿ.ಎ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ.
ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರು ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.
‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹಮೂರ್ತಿ ಗಾಜರಾಮ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಸಿನೆಮಾ ಹಾಡುಗಳು ಮೂಡಿ ಬಂದಿವೆ. ಡಿಸೆಂಬರ್ 27ಕ್ಕೆ ರಾಜಾದ್ಯಂತ ಗಜರಾಮ ಸಿನಿಮಾ ಬಿಡುಗಡೆಯಾಗಲಿದೆ.