‘ಟೆನಂಟ್’ನಲ್ಲಿ ಪ್ರೀತಿ , ದ್ರೋಹ, ಅನೈತಿಕ ಸಂಬಂಧದ ಸುಳಿಯ ಸಂಚು (ಚಿತ್ರವಿಮರ್ಶೆ-ರೇಟಿಂಗ್ : 3/5
ರೇಟಿಂಗ್ : 3/5
ಚಿತ್ರ : ಟೆನಂಟ್
ನಿರ್ದೇಶಕ : ಶ್ರೀಧರ್ ಶಾಸ್ತ್ರಿ
ನಿರ್ಮಾಪಕ : ನಾಗರಾಜ್, ಪೃಥ್ವಿರಾಜ್ ಸಾಗರ್
ಸಂಗೀತ : ಗಿರೀಶ್ ಹೊತ್ತುರ್
ಛಾಯಾಗ್ರಹಣ : ಮನೋಹರ್ ಜೋಷಿ
ತಾರಾಗಣ : ಧರ್ಮಕೀರ್ತಿ ರಾಜ್ , ಸೋನುಗೌಡ , ತಿಲಕ್, ರಾಕೇಶ್ ಮಯ್ಯಾ , ಉಗ್ರಂ ಮಂಜು ಹಾಗೂ ಮುಂತಾದವರು…
ಜೀವನದಲ್ಲಿ ಯಾರನ್ನ , ಹೇಗೆ ನಂಬುವುದು ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ. ಗಂಡು ಹೆಣ್ಣಿನ ಸಂಬಂಧ , ಸ್ನೇಹ , ಪ್ರೀತಿ , ಕಾಮ , ಅನೈತಿಕತೆಯ ನಂಟು ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಕೆಲವರ ಬದುಕು ದುಸ್ತರವಾದಂತೆ ಆಗಿ ಹೋಗಿದೆ. ಅಂತದ್ದೇ ಒಂದು ಕಥಾನಕವನ್ನು ಲಾಕ್ ಡೌನ್ ಸಂದರ್ಭವನ್ನ ಪ್ರಧಾನವಾಗಿಟ್ಟುಕೊಂಡು ಟೆನಂಟ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ತನ್ನದೇ ಒಂದು ಪುಟ್ಟ ಪ್ರಪಂಚದಲ್ಲಿ ಕಮಲೇಶ್ (ರಾಕೇಶ್ ಮಯ್ಯ) ಹಾಗೂ ದಾಮಿನಿ (ಸೋನು ಗೌಡ) ದಂಪತಿಗಳು ಸಂತೋಷ , ನೆಮ್ಮದಿಯಿಂದ ಬದುಕುತ್ತಿರುತ್ತಾರೆ. ತಮ್ಮ ಮನೆಯ ಮೇಲಿನ ರೂಮ್ ಒಂದನ್ನು ಸುಂದರೇಶ್ (ಧರ್ಮ ಕೀರ್ತಿ ರಾಜ್) ಬಾಡಿಗೆಗೆ ನೀಡಿರುತ್ತಾರೆ.
ಕೊರೋನಾ ಸಂದರ್ಭ ಇಡೀ ಜನ ಜೀವನವನ್ನೇ ಕಂಗಾಲು ಮಾಡಿ ಮನೆಯಿಂದ ಹೊರಬರಲು ಹೆದರುವಂತಹ ಸ್ಥಿತಿಗತಿ ಎದುರಾಗಿತ್ತು. ಇದರ ನಡುವೆ ಏಜೆನ್ಸಿ ಮೂಲಕ ಮೆಡಿಕಲ್ ಮಾಸ್ಕ್ ಸಪ್ಲೈ ಮಾಡುವ ಕಮಲೇಶ್ ಒತ್ತಡದಲ್ಲಿ ಓಡಾಡುತ್ತಾರೆ. ಇದು ಪತ್ನಿ ದಾಮಿನಿಗೆ ಹಿಂಸೆ ಅನಿಸಿದರೂ ವಿಧಿ ಇಲ್ಲದ ಬದುಕು, ಇನ್ನು ಮನೆಯ ಮೇಲಿನ ಸುಂದರೇಶ್ ಸದಾ ದಾಮಿನಿಯ ಮೇಲೆ ಕಣ್ಣಿಟ್ಟಿದ್ದು , ಕುಡಿಯುತ್ತಾ , ಸಿಗರೇಟ್ , ತಂಬಾಕು ಪಾಕೆಟ್ ಗಳನ್ನ ಮನೆ ಅಂಗಳದಲ್ಲಿ ಚಲ್ಲಾಡಿರುವುದು ಮತ್ತೊಂದು ಸಂಕಟ.
ಈ ವಿಚಾರ ಗಂಡನಿಗೆ ತಿಳಿದು ಒಂದಷ್ಟು ಮಾತುಕತೆ , ಚರ್ಚೆ, ಗಲಾಟೆಯ ನಡುವೆ ಕಮಲೇಶ್ ಕೊಲೆ ಪ್ರಯತ್ನ ನುಡಿಯುತ್ತದೆ. ಗೆಳೆಯ ರಂಗ (ಉಗ್ರಂ ಮಂಜು) ಸಹಾಯ ಕೇಳಿ ಬಾಡಿ ಶಿಫ್ಟ್ ಮಾಡಲು ನಿರ್ಧರಿಸುತ್ತಾರೆ. ಇದರ ನಡುವೆ ಪೊಲೀಸ್ ಇನ್ಸ್ಪೆಕ್ಟರ್ ಜೈ (ತಿಲಕ್) ಎಂಟ್ರಿ. ಇನ್ವೆಸ್ಟಿಗೇಷನ್ ಹಾದಿಯಲ್ಲಿ ಒಂದಷ್ಟು ರೋಚಕ ಘಟನೆಗಳು ಎದುರಾಗುತ್ತದೆ.
ಕೊಲೆಯ ಸಂಚು ಯಾರದು…
ದಾಮಿನಿ ಸಂಬಂಧ ಯಾರ ಜೊತೆ…
ರಾಡ್ ನಿಂದ ಹೊಡೆದಿದ್ದು ಯಾರು…
ಕ್ಲೈಮ್ಯಾಕ್ಸ್ ತಿರುವು ಏನು…
ಇದೆಲ್ಲದಕ್ಕೂ ನೀವು ಟೆನೆಂಟ್ ಚಿತ್ರ ನೋಡಬೇಕು.
ಲಾಕ್ಡೌನ್ ಸಂದರ್ಭಗಳಲ್ಲಿ ಒಂದಷ್ಟು ಮೋಸ , ವಂಚನೆ , ಅನೈತಿಕ ಪ್ರಕರಣಗಳು, ಕೊಲೆಯ ಸಂಚು ನಡೆದಿರಬಹುದು. ಇಂತಹ ವಿಚಾರಗಳನ್ನು ಬೆಸೆದುಕೊಂಡು ಸೂಕ್ಷ್ಮವಾಗಿ ಚಿತ್ರರೂಪಕವಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕ ಶ್ರೀಧರ್ ಶಾಸ್ತ್ರಿಯ ಪ್ರಯತ್ನ ಉತ್ತಮವಾಗಿದೆ.
ಚಿತ್ರಕಥೆ ಶೈಲಿ ವಿಭಿನ್ನ ಅನಿಸಿದರೂ , ಚಿತ್ರದ ಓಟ ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಸಸ್ಪೆನ್ಸ್ , ಮರ್ಡರ್ ಮೇಸ್ಟ್ರಿ , ಥ್ರಿಲ್ಲರ್ ಚಿತ್ರ ಪ್ರೇಮಗಳಿಗೆ ಇಷ್ಟವಾಗುವಂತಿದೆ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣದ ಕೈಚಳಕ , ಉಜ್ವಲ್ ಚಂದ್ರ ಸಂಕಲನದ ಕೆಲಸ ಉತ್ತಮವಾಗಿದ್ದು , ಗಿರೀಶ್ ಸಂಗೀತ ಗಮನ ಸೆಳೆಯುತ್ತದೆ. ಈ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರ ಧೈರ್ಯ ಮೆಚ್ಚಬೇಕು.
ಇನ್ನು ಗಂಡ ಹೆಂಡತಿಯಾಗಿ ಅಭಿನಯಿಸಿರುವ ರಾಕೇಶ್ ಮಯ್ಯ ಹಾಗೂ ಸೋನು ಗೌಡ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ, ಬಹಳ ಲೀಲಾ ಜಲವಾಗಿ ಅಭಿನಯಿಸಿದ್ದಾರೆ. ಕುಡಿತ ಚಟಕ್ಕೆ ಬಿದ್ದ ಪಾತ್ರದಲ್ಲಿ ಧರ್ಮ ಕೀರ್ತಿರಾಜ್ ಸಿಕ್ಕ ಅವಕಾಶವನ್ನು ನಿರ್ವಹಿಸಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಯಾಗಿ ತಿಲಕ್ ಶೇಖರ್ ಖಡಕ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಎರಡು ಶೇಡ್ ನಲ್ಲಿ ಮಿಂಚಿದ್ದಾರೆ. ಇನ್ನು ಗೆಳೆಯನ ಪಾತ್ರದಲ್ಲಿ ಉಗ್ರಂ ಮಂಜು ಪಾತ್ರಕ್ಕೆ ಜೀವ ತುಂಬಿದ್ದು, ಉಳಿದಂತ ಪಾತ್ರಗಳು ಚಿತ್ರದ ಓಟಕ್ಕೆ ಬೆಂಬಲವಾಗಿ ಅಭಿನಯಿಸಿದ್ದಾರೆ. ಕೊರೋನಾ ಸಮಯದ ಸುಳಿಯಲ್ಲಿ ಸಸ್ಪೆನ್ಸ್ , ಥ್ರಿಲ್ಲರ್ , ಕ್ರೈಂ ಮೂಲಕ ಹೇಳಿರುವ ಈ ಟೆನೆಂಟ್ ಚಿತ್ರವನ್ನು ಒಮ್ಮೆ ನೋಡಬಹುದು.