Cini NewsMovie ReviewSandalwood

ಜೀವ ಹಾಗೂ ಜೀವನದ ಕಥಾನಕ ‘ ಮರ್ಯಾದೆ ಪ್ರಶ್ನೆ’ : (ಚಿತ್ರವಿಮರ್ಶೆ-ರೇಟಿಂಗ್ : 4 /5)

ರೇಟಿಂಗ್ : 4 /5
ಚಿತ್ರ : ಮರ್ಯಾದೆ ಪ್ರಶ್ನೆ
ನಿರ್ದೇಶಕ : ನಾಗರಾಜ್ ಸೋಮಯಾಜಿ
ನಿರ್ಮಾಪಕಿ : ಶ್ವೇತಾ ಪ್ರಸಾದ್
ಸಂಗೀತ : ಅರ್ಜುನ್ ರಾಮು
ಛಾಯಾಗ್ರಹಣ : ಸಂದೀಪ್
ತಾರಾಗಣ : ಸುನೀಲ್ ರಾವ್ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ , ಪ್ರಭು ಮುಂಡ್ಕರ್, ತೇಜು ಬೆಳವಾಡಿ, ನಾಗೇಂದ್ರ ಶಾ, ರೇಖಾ ಕೂಡ್ಲಿಗಿ ಹಾಗೂ ಮುಂತಾದವರು…

 

ಪ್ರತಿಯೊಬ್ಬರ ಬದುಕಿಗೂ ಒಂದು ಅರ್ಥ , ಬೆಲೆ , ಗೌರವ ಬಹಳ ಮುಖ್ಯ. ಪ್ರಾಮಾಣಿಕತೆ , ನಿಷ್ಠೆ , ಶಮಪಟ್ಟು ದುಡಿಯುವವರ ಬದುಕಿನಲ್ಲಿ ಎದುರಾಗುವ ಒಂದಷ್ಟು ಅನಿರೀಕ್ಷಿತ ಘಟನೆಗಳು ಜೀವನದ ದಿಕ್ಕನ್ನೇ ಬದಲಿಸಿ, ಜೀವ ಹಾಗೂ ಜೀವನದ ಮೌಲ್ಯವನ್ನ ತೆರೆದಿರುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ ಮರ್ಯಾದೆ ಪ್ರಶ್ನೆ. ಎಂ. ಎಲ್. ಎ (ನಾಗಾಭರಣ) ಬಂಟನಾಗಿ ಕಾರ್ಪೊರೇಟರ್ ಆಗುವ ಮಹದಾಸೆಯೊಂದಿಗೆ ಜನರ ಪ್ರೀತಿ , ವಿಶ್ವಾಸ ಗಳಿಸುವ ಸೂರಿ (ರಾಕೇಶ್ ಅಡಿಗ). ತಂದೆ ತಾಯಿ ತಂಗಿಯ ಜೊತೆ ನೆಮ್ಮದಿ ಜೀವನ ನಡೆಸಲು ಶ್ರಮಪಡುವ ಸತೀಶ (ಸುನಿಲ್ ರಾವ್) ಬಿಸಿನೆಸ್ ನಲ್ಲಿ ಲಾಸ್ ಆದರೂ ಜೋಮೋಟೋ ಫುಡ್ ಡೆಲಿವರಿ ಮಾಡುತ್ತಾನೆ.
ಹಣ ಸಂಪಾದಿಸಿ ಬದುಕು ಕಟ್ಟಿಕೊಳ್ಳಬೇಕೆಂಬ ತಾವಕದೊಂದಿಗೆ ಕ್ಯಾಬ್ ಡ್ರೈವರ್ ಯಾಗಿ ಹಗಲಿರಲು ದುಡಿಯುವ ಮಂಜ (ಪೂರ್ಣಚಂದ್ರ ).

ಈ ಮೂವರ ವೃತ್ತಿ ಬೇರೆಯಾದರೂ ಜೀವದ ಗೆಳೆಯರಾಗಿ ಒಬ್ಬರ ಕಷ್ಟ ಸುಖಕ್ಕೆ ಸಾತ್ ನೀಡುತ್ತಾ ಬದುಕುತ್ತಾರೆ. ಮಂಜನನ್ನು ಪ್ರೀತಿಸುವ ಸತೀಶನ ತಂಗಿ ಲಕ್ಷ್ಮಿ (ತೇಜು ಬೆಳವಾಡಿ) ಮಾಲ್ ನಲ್ಲಿ ಕೆಲಸ ಮಾಡುತ್ತಾ ತನ್ನ ಕನಸೆಲ್ಲ ಸಾಕಾರಗೊಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಮಧ್ಯಮ ವರ್ಗದ ಜಂಜಾಟ ಬದುಕಿನ ನಡುವೆ ಇವರ ದಿನನಿತ್ಯದ ಹೋರಾಟ ಸಾಗುತ್ತದೆ.

ನೆನಪಿನ ಶಕ್ತಿ ಇಲ್ಲದ ತಂದೆ , ವಯಸ್ಸಾದ ತಾಯಿ , ಮದುವೆಯಾಗದ ತಂಗಿಯನ್ನು ನೋಡಿಕೊಳ್ಳುವ ಬಾರ ಸತೀಶನ ಮೇಲಿರುತ್ತೆ. ತನ್ನ ಹುಟ್ಟು ಹಬ್ಬದ ಪಾರ್ಟಿ ಗೆಳೆಯರೊಟ್ಟಿಗೆ ಆಚರಿಸಿಕೊಂಡು ಬರುವಾಗ ಮಾರ್ಗ ಮಧ್ಯೆ ಆಕ್ಸಿಡೆಂಟ್ ನಲ್ಲಿ ಸತೀಶ ಸಾವಿಗಿಡಾಗುತ್ತಾನೆ. ಕುಡಿದ ಮತ್ತಿನಲ್ಲಿ ಗುದ್ದಿದ ಶ್ರೀಮಂತ ಹುಡುಗರು ಪೊಲೀಸ್ ಕೇಸ್ ಮಾಡದಂತೆ ಸತ್ತ ಸತೀಶನ ಕುಟುಂಬಕ್ಕೆ ಹಣ ನೀಡುವ ಆಮಿಷ ಒಡ್ಡುತ್ತಾರೆ. ಮರ್ಯಾದಿಗಾಗಿ ಅಂಜುವ ಗೆಳೆಯರು ಬಡತನ , ಕಷ್ಟಕ್ಕೆ ಯೋಚಿಸಿ ಹಣ ಪಡೆಯಲು ಮುಂದಾಗುತ್ತಾರೆ. ದುಡ್ಡು ಕೊಡದ ಪುಂಡ ಶ್ರೀಮಂತರ ದರ್ಪಕ್ಕೆ ಕಂಗಲಾಗುತ್ತಾರೆ. ಮುಂದೆ ಎದುರಾಗುವ ರೋಚಕ ಘಟನೆಗಳು ಒಂದಷ್ಟು ದಿಕ್ಸೂಚಿಗಳನ್ನ ತೆರೆದಿಡುತ್ತದೆ.
ಜೀವದ ಬೆಲೆ ಏನು…

ಬದುಕು ಕಲಿಸುವ ಪಾಠ..
ಲಕ್ಷ್ಮಿ ಹಾಗೂ ಮಂಜು ಪ್ರೀತಿ..?
ಕ್ಲೈಮಾಕ್ಸ್ ನೀಡುವ ಉತ್ತರ…
ಎಲ್ಲಾ ಪ್ರಶ್ನೆಗೆ ಉತ್ತರಕ್ಕಾಗಿ ಮರ್ಯಾದೆ ಪ್ರಶ್ನೆ ನೋಡಬೇಕು.

ಮಧ್ಯಮ ವರ್ಗದವರ ಬದುಕು , ಬವಣೆ . ಸ್ನೇಹ , ಗೆಳೆತನ , ಪ್ರೀತಿ , ಸಂಬಂಧಗಳ ಮೌಲ್ಯ , ಮಮಕಾರ , ರಾಜಕೀಯ ನಾಯಕರು , ಪೊಲೀಸ್ ಕಾರ್ಯವೈಖರಿ ಹೀಗೆ ಪ್ರಸ್ತುತ ಸಮಾಜದಲ್ಲಿ ನಮ್ಮ ಸುತ್ತ ನಡೆಯುವ ಒಂದಿಷ್ಟು ನೈಜ ಘಟನೆಗಳನ್ನ ತೆರೆಯ ಮೇಲೆ ತಂದಿರುವ ನಿರ್ದೇಶಕ ನಾಗರಾಜ್ ಸೋಮಾಜಿ ಪ್ರಯತ್ನ ಅಚ್ಚುಕಟ್ಟಾಗಿದೆ. ನೈಜಕ್ಕೆ ಹತ್ತಿರವಾಗಿಸುವ ಕಥಾನಕದಲ್ಲಿ ಯಾವುದೇ ಆಡಂಬರ , ರಕ್ತಪಾತವಿಲ್ಲದೆ ಗಮನ ಸೆಳೆಯುತ್ತದೆ. ಇದರ ನಡುವೆ ಕೆಲವೊಂದು ದೃಶ್ಯ ಇದ್ದಲ್ಲಿ ಸುತ್ತಿದಂತಿದೆ. ಆದರೂ ಮನಸ್ಸಿಗೆ ಹತ್ತಿರವಾಗಿಸುವ ಕಥೆ ಅಗತ್ಯ ಅನಿಸುತ್ತದೆ. ಅರ್ಥಪೂರ್ಣ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಆಲೋಚನೆಗೆ ಬೆನ್ನೆಲುಬಾಗಿ ನಿಂತಿರುವ ಚಿತ್ರದ ಉಸ್ತುವಾರಿ ಪ್ರದೀಪ ರವರ ಕಾರ್ಯವೈಖರಿ ಮೆಚ್ಚುವಂಥದ್ದು, ಸಾಹಿತ್ಯಕ್ಕೆ ತಕ್ಕಂತೆ ಸಂಗೀತ ಪೂರಕವಾಗಿ ಮೂಡಿ ಬಂದಿದ್ದು, ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ.

ನಟ ರಾಕೇಶ್ ಅಡಿಗ ಬಹಳ ವರ್ಷಗಳ ನಂತರ ಒಂದು ಉತ್ತಮ ಪಾತ್ರದ ಮೂಲಕ ಅದ್ಭುತವಾಗಿ ಜೀವ ತುಂಬಿ ಗಮನ ಸೆಳೆದಿದ್ದು, ಮತ್ತಷ್ಟು ಉತ್ತಮ ಅವಕಾಶ ಸಿಗುವಂತೆ ಮಿಂಚಿದ್ದಾರೆ. ಹಾಗೆಯೇ ನಟ ಸುನಿಲ್ ರಾವ್ ಕೂಡ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮತ್ತೊಬ್ಬ ನಟ ಪೂರ್ಣಚಂದ್ರ ಮೈಸೂರು ಕೂಡ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ನಟಿ ತೇಜು ಬೆಳವಾಡಿ ಮನೆಯ ಮುದ್ದಿನ ಮಗಳಾಗಿ , ತಂಗಿಯಾಗಿ , ಗೆಳೆಯನ ಪ್ರೇಯಸಿಯಾಗಿ ಅದ್ಭುತವಾಗಿ ನಟಿಸಿ , ತಮ್ಮ ಮುಂದಿನ ಸಿನಿಮಾ ಹಾದಿಗೆ ಉತ್ತಮ ದಾರಿ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪ್ರತಿಭೆ ಪ್ರಭು ಮುಂದ್ಕರ್ ಖಡಕ್ ಮಾತಿನ ಶೈಲಿಯಲ್ಲಿ ಅಬ್ಬರಿಸಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಧಾರಿಯ ಗತ್ತು , ಗಾಂಭೀರ್ಯ ಗಮನ ಸೆಳೆಯುತ್ತದೆ. ತಂದೆಯ ಪಾತ್ರದಲ್ಲಿ ನಾಗೇಂದ್ರ ಶಾ , ತಾಯಿಯ ಪಾತ್ರದಲ್ಲಿ ರೇಖಾ ಕೂಡ್ಲಿಗಿ , ಶೈನ್ ಶೆಟ್ಟಿ , ಹರಿಹರನ್ , ವಿಶೇಷ ಪಾತ್ರದಲ್ಲಿ ದಯಾಳ್ , ಈ ಚಿತ್ರದ ನಿರ್ಮಾಪಕಿ ಶ್ವೇತಾ ಪ್ರಸಾದ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಂದು ಅರ್ಥಪೂರ್ಣ ಮಾನವೀಯತೆಯ ಮೌಲ್ಯದೊಂದಿಗೆ ಜನರನ್ನ ತಲುಪುವ ಪ್ರಯತ್ನವಾಗಿ ಬಂದಿರುವ ಈ ಮರ್ಯಾದೆ ಪ್ರಶ್ನೆ ಚಿತ್ರದಲ್ಲಿ ‘ನಾವು ಬಡವರಿರಬಹುದು…ಆದ್ರೆ ರೌಡಿಗಳಲ್ಲ’ ಎಂಬ ಡೈಲಾಗ್ ಚಿತ್ರದ ನೋಟದ ದಿಕ್ಕನ್ನೇ ಬದಲಿಸುವಂತ್ತಿದ್ದು ಎಲ್ಲರೂ ಒಮ್ಮೆ ಚಿತ್ರವನ್ನು ನೋಡಬಹುದು.

error: Content is protected !!