ನಿಷ್ಕಲ್ಮಶ ಪ್ರೀತಿಯ ಹಾದಿಯ ತಲ್ಲಣದ ಕಥೆ ‘ಲವ್ ರೆಡ್ಡಿ’ : ಚಿತ್ರವಿಮರ್ಶೆ -ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ಲವ್ ರೆಡ್ಡಿ
ನಿರ್ದೇಶಕ : ಸ್ಮರಣ್ ರೆಡ್ಡಿ
ನಿರ್ಮಾಪಕಿ : ಹೇಮಲತಾ ರೆಡ್ಡಿ
ಸಂಗೀತ : ಪ್ರಿನ್ಸ್ ಹೆನ್ರಿ
ಛಾಯಾಗ್ರಹಣ : ಮೋಹನ್ ಚರಿ , ಅಷ್ಕರ್ ಅಲಿ
ತಾರಾಗಣ : ಅಂಜನ್ ರಾಮಚಂದ್ರ , ಶ್ರಾವಣಿ , ಎನ್.ಟಿ.ರಾಮಸ್ವಾಮಿ, ವಾಣಿ ಗೌಡ, ರವಿ ಕಾಲಬ್ರಹ್ಮ , ಗಣೇಶ್ , ಪಲ್ಲವಿ , ಜ್ಯೋತಿ ಮದನ್ ಹಾಗೂ ಮುಂತಾದವರು…
ಸುಂದರ ಸಂಸಾರದ ಮಮಕಾರ , ಸ್ನೇಹ , ಪ್ರೀತಿ , ಅನುಬಂಧ , ನೋವು , ನಲಿವು , ಆಕರ್ಷಣೆಯ ನಡುವೆ ಪ್ರತಿಷ್ಠೆ , ಸ್ವಾರ್ಥದ ಕಿಚ್ಚು ಹಚ್ಚಿಕೊಂಡಾಗ ಎದುರಾಗುವ ಸಂಕಷ್ಟಗಳ ಸುಳಿಯ ಸುತ್ತ ಬೆಸೆದುಕೊಂಡು ರೋಚಕ ತಿರುವುಗಳ ಹಾದಿಯಲ್ಲಿ ತಲ್ಲಣ ಮೂಡಿಸುವಂತಹ ಕಥಾನಕ ಮೂಲಕ ಮನಸ್ಸನ್ನ ಸೆಳೆಯುವಂತಹ ಚಿತ್ರ “ಲವ್ ರೆಡ್ಡಿ”. ವಯಸ್ಸು 3೦ ಆದರೂ ಮದುವೆಯಾಗದ ನಾರಾಯಣ ರೆಡ್ಡಿ( ಅಂಜನ್ ರಾಮಚಂದ್ರ ) ತುಂಬು ಕುಟುಂಬದ ಈ ಹಿರಿಯ ಮಗನಿಗೆ ಹುಡುಗಿ ಹುಡುಕುವುದೇ ಮನೆಯವರಿಗೆ ದೊಡ್ಡ ಸಾಹಸ.
ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟ್ರಿಯಾ ಪಾರ್ಟರ್ ಶಿಪ್ ಬಿಜಿನೆಸ್ ಮಾಡುತ್ತಲೇ ಗಡಿ ಭಾಗ ಜಿಲ್ಲೆ ಚಿಕ್ಕಬಳ್ಳಾಪುರದ ಗುಡಿಬಂಡೆ ಯಿಂದ ನಿತ್ಯ ಬಸ್ಸಿನಲ್ಲಿ ಓಡಾಟ. ಒಂದು ದಿನ ತನ್ನ ಕನಸಿನ ಕನ್ಯೆ ದಿವ್ಯ( ಶ್ರಾವಣಿ) ಬಸ್ ನಲ್ಲಿ ಪ್ರತ್ಯಕ್ಷ. ಆಕೆಯ ನಗು , ನೋಟಕ್ಕೆ ಮನಸೋಲುವ ನಾರಾಯಣ ರೆಡ್ಡಿ ಕೆಲವೊಂದಷ್ಟು ಕಾರಣಗಳಿಂದ ಆಕೆಯ ಸ್ನೇಹ , ವಿಶ್ವಾಸ ಗಳಿಸುತ್ತಾ ಮನೆಯವರಿಗೂ ವಿಚಾರ ತಿಳಿಸುತ್ತಾನೆ.
ದಿವ್ಯಾಳ ಜೊತೆ ಮಾತುಕತೆ , ಒಡನಾಟ ಹೊಂದಿದ್ದರು ಪ್ರೀತಿಯ ವಿಚಾರ ತಿಳಿಸಲು ಚಡಪಡಿಸುತ್ತಿರುತ್ತಾನೆ. ಕೆಲವೊಮ್ಮೆ ಸಮಯ ಒದಗಿ ಬಂದರೂ ಹೇಳಲಾರದೆ ಸುಮ್ಮನಾಗುತ್ತಾನೆ. ಒಬ್ಬ ಮೇಷ್ಟ್ರು (ಎನ್.ಟಿ. ರಾಮಸ್ವಾಮಿ) ಮಗಳಾದ ದಿವ್ಯ ಆಹಾರ ಇಲಾಖೆಯ ಸರಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರು ತಂದೆಯ ಮಾರ್ಗದಲ್ಲಿ ಸಾಗುತ್ತಿರುತ್ತಾಳೆ.
ಇನ್ನು ರೆಡ್ಡಿ ಹಾಗೂ ದಿವ್ಯ ಪ್ರತಿದಿನ ಭೇಟಿ , ಮಾತು ಇದ್ದರು ಪ್ರೀತಿಯ ಸೆಳೆತದ ಛಾಯೆ ಹರಿದಾಡುತ್ತಿರುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ ಎನ್ನುತ್ತುವಾಗಲೇ ಇವರಿಬ್ಬರ ಬದುಕಿನಲ್ಲಿ ಎದುರಾಗುವ ಸಂಕಷ್ಟ , ಸಮಸ್ಯೆಗಳು ನಿರೀಕ್ಷೆಗೂ ಮೀರಿದ ಘಟನೆಗಳು ಜೀವನದ ಇನ್ನೊಂದು ಮುಖದ ದರ್ಶನವನ್ನು ಮಾಡಿಸುತ್ತದೆ. ಅದು ಏನು… ಹೇಗೆ… ಯಾಕೆ… ಎಂಬುದನ್ನು ನೋಡಬೇಕಾದರೆ ಒಮ್ಮೆ “ಲವ್ ರೆಡ್ಡಿ” ಚಿತ್ರವನ್ನು ವೀಕ್ಷಿಸಿ.
ನಿರ್ದೇಶಕ ಸ್ಮರಣ್ ರೆಡ್ಡಿ ಗಡಿ ಭಾಗ ಜನರ ಜೀವನದ ಶೈಲಿ , ಬದುಕು , ಭಾವನೆ , ಮಾತಿನ ವರ್ಚಸ್ಸು ಎಲ್ಲವನ್ನು ಬಹಳ ನೈಜಕ್ಕೆ ಪೂರಕವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರೀತಿಗಿರುವ ಶಕ್ತಿ , ನಂಬಿಕೆಯ ಜೊತೆ ಸಂಬಂಧಗಳ ಮೌಲ್ಯ , ಪ್ರತಿಷ್ಠೆಯ ಪರಮಾವಧಿಯನ್ನ ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿದ್ದಾರೆ. ಸರಕಾರಿ ಬಸ್ ಒಂದು ಪ್ರಮುಖ ಪಾತ್ರವನ್ನ ನಿರ್ವಹಿಸಿದೆ. ಬಸ್ ಚಲಿಸುವಂತೆ ಚಿತ್ರದ ಓಟವು ಕೂಡ ಕೊಂಚ ನಿಧಾನವಾಗಿದೆ.
ಕನ್ನಡಕ್ಕೆ ಡಬ್ ಆಗಿದ್ದು , ಲಿಪ್ ಸಿಂಕ್ ಕಡೆ ಗಮನ ಹರಿಸಬೇಕಿತ್ತು. ಛಾಯಾಗ್ರಹಗಳ ಕೈಚಳಕ ಅದ್ಭುತವಾಗಿದೆ. ಸಂಗೀತವು ಚಿತ್ರಕ್ಕೆ ಪೂರಕವಾಗಿದೆ. ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ಕಾಣುತ್ತದೆ. ಕ್ಲೈಮಾಕ್ಸ್ ಸನ್ನಿವೇಶ ಇಂಥವರು ಇರ್ತಾರಾ ಎನ್ನುವಂತೆ ಮೂಡಿಬಂದಿದೆ. ನಾಯಕನಟನಾಗಿ ಅಭಿನಯಿಸಿರುವ ಅಂಜನ್ ರಾಮಚಂದ್ರ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು , ಒಬ್ಬ ಉತ್ತಮ ನಟನಾಗಿ ಹೊರಹೊಮ್ಮಿದ್ದಾರೆ. ಮನೆಯವರ ಪ್ರೀತಿ ವಿಶ್ವಾಸದ ಜೊತೆ ಒಬ್ಬ ಪ್ರೇಮಿಯಾಗಿ ಮನಮುಟ್ಟುವಂತೆ ಗಮನ ಸೆಳೆದಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಶ್ರಾವಣಿ ರೆಡ್ಡಿ ಕೂಡ ಬಹಳ ಸೊಗಸಾಗಿ ನೈಜಕ್ಕೆ ಹತ್ತಿರದ ಪಾತ್ರದ ಅದ್ಭುತವಾಗಿ ನಿರ್ವಹಿಸಿದ್ದಾರೆ.
ಮಾತಿನ ನಡೆ , ನುಡಿಯ ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಬರುವ ಸನ್ನಿವೇಶಗಳನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯ ತಂದೆ ಪಾತ್ರ ಮಾಡಿರುವ ಎನ್ .ಟಿ. ರಾಮಸ್ವಾಮಿ ಇಡೀ ಚಿತ್ರದ ಹೈಲೈಟ್ ಪಾತ್ರ. ತಮ್ಮ ಪಾತ್ರಕ್ಕೆ ನ್ಯಾಯ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಬರುವ ಫ್ಯಾಮಿಲಿಯಲ್ಲಿ ಕಂಡು ಬರುವ ಪಾತ್ರಗಳು , ಸ್ನೇಹಿತರು , ಪಡ್ಡೆ ಹುಡುಗರು ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಯಾವುದೇ ಮುಜುಗರ , ಅಬ್ಬರ ಇಲ್ಲದ ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡುವಂತಿದೆ.