Cini NewsMovie ReviewSandalwood

ನ್ಯಾಯ , ನೀತಿ , ಧರ್ಮದ ಕಗ್ಗೊಲೆಯಲ್ಲಿ ಸೆಣೆಸಾಟ : “ಪ್ರಭುತ್ವ” ಚಿತ್ರವಿಮರ್ಶೆ -ರೇಟಿಂಗ್ : 3.5 /5

ರೇಟಿಂಗ್ : 3.5 /5
ಚಿತ್ರ : ಪ್ರಭುತ್ವ
ನಿರ್ದೇಶಕ : ಆರ್. ರಂಗನಾಥ
ನಿರ್ಮಾಪಕ : ರವಿರಾಜ್. ಎಸ್. ಕುಮಾರ್
ಸಂಗೀತ : ಎಮಿಲ್
ಛಾಯಾಗ್ರಹಣ : ಕೆ .ಎಸ್. ಚಂದ್ರಶೇಖರ್
ತಾರಾಗಣ : ಚೇತನ್ ಚಂದ್ರ , ಪಾವನ , ರಾಜೇಶ್‌ ನಟರಂಗ , ಗಿರಿ , ನಾಸರ್‌, ವಿಜಯ್‌ ಚೆಂಡೂರ್‌, ರೂಪಾದೇವಿ, ರಾಜೇಶ್‌ ನಟರಂಗ, ಅಂಬಿಕಾ ಶರತ್‌ ಲೋಹಿತಾಶ್ವ, ಆದಿ ಲೋಕೇಶ್, ಹಾಗೂ ಮುಂತಾದವರು…

ಸಮಾಜದಲ್ಲಿ ಜನಸಾಮಾನ್ಯರ ಬದುಕು ಹೇಳಿಕೊಳ್ಳುವಷ್ಟು ಸುಲಭದ ಜೀವನವಲ್ಲ. ದುಡಿದು ಬದುಕುವವರ ನಡುವೆ ಬಡಿದು ತಿನ್ನುವವರೇ ಹೆಚ್ಚಾಗಿದ್ದು , ಮೋಸ , ವಂಚನೆ , ದಂದೆಕೊರರು , ರಾಜಕೀಯ , ಪೊಲೀಸ್ ನಡುವೆ ಪರಿಸರ ಪ್ರೇಮಿ , ರೈತರ ಬದುಕು , ನ್ಯಾಯ , ಧರ್ಮ , ಸತ್ಯಕ್ಕಾಗಿ ಪರದಾಡುವ ನಾಯಕರ ಹೋರಾಟ ಹೀಗೆ ಹಲವು ವಿಚಾರಗಳ ಸಂಗಮದೊಂದಿಗೆ ‘ಗಾಂಧಿ ನೋಟಿಗಿರುವ ಬೆಲೆ… ಗಾಂಧಿ ತತ್ವಕ್ಕೆ ಇಲ್ಲ…’ ಎಂಬ ಮಾತಿನಂತೆ ಸಮಾಜಘಾತುಕ ಶಕ್ತಿಗಳ ಅಟ್ಟಹಾಸಕ್ಕೆ ಜನಸಾಮಾನ್ಯರ ಪರದಾಟವನ್ನು ಕನ್ನಡಿಯಂತೆ ತೆರೆದಿಡುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಪ್ರಭುತ್ವ”.

ಶಾಲಾ ಶಿಕ್ಷಕ , ಪರಿಸರ ಪ್ರೇಮಿ ತಂದೆ (ರಾಜೇಶ್ ನಟರಂಗ) ಹಾಗೂ ತಾಯಿ (ವೀಣಾ ಸುಂದರ್)ರ ಮುದ್ದಿನ ಮಗ ಮನು(ಚೇತನ್ ಚಂದ್ರ)ತಂದೆಯ ಆದರ್ಶವನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಓದುತ್ತ , ಸಂವಿಧಾನದ ಉದ್ದೇಶವನ್ನ ಅರಿತುಕೊಂಡು ಬೆಳೆಯುತ್ತಾನೆ. ಅಪ್ಪನ ಅಗಲಿಕೆ ನಂತರ ತಾಯಿಯೊಟ್ಟಿಗೆ ಜೀವನ ನಡೆಸುವ ಮನು ಗೆ ಗ್ಯಾರೇಜ್ ಆಧಾರ ಸ್ತಂಭವಾಗಿರುತ್ತದೆ. ಸಹಾಯದ ನೆಪದಲ್ಲಿ ಸಿಗುವ ಅನು (ಪಾವನ ಗೌಡ) ಮನು ಜೊತೆ ಸ್ನೇಹ ಮಾಡುತ್ತಾ ಪ್ರೀತಿಯಲ್ಲಿ ಬೀಳುತ್ತಾಳೆ.

ಇದರ ನಡುವೆ ಕಾಮುಕರನ್ನ ಹಾಗೂ ಭ್ರಷ್ಟ ಪೊಲೀಸ್ ಅಧಿಕಾರಿಯನ್ನು ಸದೆ ಬಡಿಯುವ ಮನು ಜೀವನದಲ್ಲಿ ದುರ್ಘಟನೆ ಒಂದು ನಡೆಯುತ್ತದೆ. ಮನನೊಂದು ತನ್ನ ಹುಟ್ಟಿದ ಊರಿಗೆ ಹೋಗುವ ಮನು ಗೆ ಹಳ್ಳಿಯ ಗಣಿಗಾರಿಕೆ, ಪರಿಸರ ನಾಶ , ರಾಜಕೀಯ ನಾಯಕರ ರಣತಂತ್ರ , ದಬ್ಬಾಳಿಕೆಯ ವಿರುದ್ಧ ನಿಲ್ಲುವ ಮನು ಬೆಂಬಲಕ್ಕೆ ಊರಿನ ಹಿರಿಯ ಜೀವ ಐನೋರ್( ನಾಸರ್) ಹಾಗೂ ಗ್ರಾಮಸ್ಥರ ಬೆಂಬಲವಿದ್ದರೂ ಎಂ.ಎಲ್.ಎ (ಶರತ್ ಲೋಹಿತಾಶ್ವ) ಹಾಗೂ ಅವನ ಪುತ್ರ (ಆದಿ ಲೋಕೇಶ್) ನ ಆರ್ಭಟಕ್ಕೆ ಏನು ಮಾಡಲಾಗದ ಸ್ಥಿತಿಯಲ್ಲಿರುವ ಪೊಲೀಸ್ ಅಧಿಕಾರಿಗಳ ನಡುವೆ ನ್ಯಾಯ , ಹೋರಾಟದ ಕಿಚ್ಚು ನೋವು ಸಾವುಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತದೆ.

ನ್ಯಾಯ ಸಿಗುತ್ತಾ… ಸುಳ್ಳು ಆರ್ಭಟಿಸುತ್ತಾ… ಸತ್ಯಮೇವ ಜಯತೆಗೆ ಜಯ ಸಿಗುತ್ತಾ…
ಕ್ಲೈಮಾಕ್ಸ್ ಸಂದೇಶ ಏನು… ಇದಕ್ಕಾಗಿ ನೀವು ಈ ಚಿತ್ರವನ್ನು ನೋಡಬೇಕು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿಂತ ದುಷ್ಟರ ಪ್ರಭಾವದ ಆರ್ಭಟ ಜೋರಾಗಿ ನ್ಯಾಯ , ನೀತಿ , ಧರ್ಮದ ಕಗ್ಗೊಲೆ ವಿಜೃಂಭಿಸುತ್ತದೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಅದ್ದೂರಿ ತನದ ಜೊತೆಗೆ ದೊಡ್ಡ ತಾರಾ ಬಳಗವನ್ನೇ ಸೇರಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು.

ಸುಮಧುರವಾದ ಸಂಗೀತ , ಛಾಯಾಗ್ರಹಕರ ಕೈಚಳಕ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ಕಾಣುತ್ತದೆ. ನಾಯಕನಾಗಿ ಅಭಿನಯಿಸಿರುವ ಚೇತನ್ ಚಂದ್ರ ಇಡೀ ಚಿತ್ರವನ್ನ ಆವರಿಸಿಕೊಂಡು ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನಾಯಕಿ ಪಾವನ ಪಾತ್ರ ತಕ್ಕಮಟ್ಟಿಗಿದ್ದು , ಸಿಕ್ಕ ಅವಕಾಶವನ್ನು ನಿರ್ವಹಿಸಿದ್ದಾರೆ. ಬಹುಭಾಷಾ ನಟ ನಾಸರ್ ಪಾತ್ರ ಗಮನ ಸೆಳೆಯುವಂತಿದೆ. ಹಿರಿಯ ನಟಿ ಅಂಬಿಕಾ ನ್ಯಾಯಾಧೀಶರ ಪಾತ್ರ ಹಾಗೂ ನಟಿ ರೂಪದೇವಿ ಹಳ್ಳಿಯ ತಿಮ್ಮಕ್ಕನ ಪಾತ್ರ ಮತ್ತು ನಟಿ ಅಭಿರಾಮಿ ಎಂಎಲ್ಎ ವಿಜಯಲಕ್ಷ್ಮಿ ಪಾತ್ರ ಹಾಗೂ ನಟಿ ಪೂಜಾ ಲೋಕೇಶ್ ಸಿಬಿಐ ಪಾತ್ರದಲ್ಲಿ ಮಿಂಚಿದ್ದಾರೆ. ಹಾಗೆಯೇ ಅದ್ಭುತ ನಟರಾದ ರಾಜೇಶ್ ನಟರಂಗ , ಶರತ್ ಲೋಹಿತಾಶ್ವ , ಶಶಿಕುಮಾರ್ , ಆದಿ ಲೋಕೇಶ್ , ವೀಣಾ ಸುಂದರ್ , ಹೊನವಳ್ಳಿ ಕೃಷ್ಣ , ಸೇರಿದಂತೆ ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೆ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.
ಒಟ್ಟಾರೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರ ಹೊರಬಂತಂತಿದ್ದು , ಒಮ್ಮೆ ನೋಡುವಂತಿದೆ.

error: Content is protected !!