ಜ.25 ಹಾಗೂ 26ರಂದು ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ ಶುರು.
ಸಿನಿಮಾ ಕಲಾವಿದರ ಅಭಿಮಾನಿಗಳು ಹಾಗು ಕ್ರಿಕೆಟ್ ಪ್ರೇಮಿಗಳು ಜೊತೆಯಾಗಿ ಆಡುವಂತಹ ಅಪರೂಪದ, ಅಷ್ಟೇ ಪ್ರತಿಷ್ಟಿತವಾದಂತಹ ಪಂದ್ಯಾಟ ಫ್ಯಾನ್ಸ್ ಕ್ರಿಕೆಟ್ ಲೀಗ್ ಇದೀಗ ತನ್ನ ಹನ್ನೆರಡನೇ ಆವೃತ್ತಿಗೆ ಸಜ್ಜುಗೊಳ್ಳುತ್ತಿದೆ. ನಮ್ ಟಾಕೀಸ್ ಸಂಸ್ಥೆ, ಇದರ ಮುಖ್ಯಸ್ಥ ಭರತ್ ಎಸ್.ಎನ್ ಹಾಗು ಇವರ ಆಪ್ತರ ಆಯೋಜನೆಯಲ್ಲಿ ಯಶಸ್ವಿಯಾಗಿ ಹನ್ನೊಂದು ಆವೃತ್ತಿಗಳನ್ನ ಪೂರೈಸಿರುವ ಈ ಕ್ರಿಕೆಟ್ ಕಾದಾಟದ ಹನ್ನೆರಡನೇ ಸೀಸನ್, FCL-12 ಇದೇ ಜನವರಿ 25 ಹಾಗು 26ರಂದು ರಾಜರಾಜೇಶ್ವರಿ ನಗರದ ರಾಮ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ.
ಆರಂಭದಿಂದಲೂ ಪ್ರತೀ ಆವೃತ್ತಿಯನ್ನ ಕನ್ನಡದ ಒಂದೊಂದು ಗಣ್ಯ ನಟರಿಗೆ ಸಮರ್ಪಿಸುತ್ತ, ಅವರ ಹೆಸರಿನಲ್ಲಿ, ಅವರ ಆಶೀರ್ವಾದದೊಂದಿಗೆ ನಡೆಸಿಕೊಂಡು ಬಂದಿರುವ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಈ ಬಾರಿ ನಮ್ಮ ಚಂದನವನದ ಧೀಮಂತ ಖಳನಟ ಸುಧೀರ್ ಅವರ ಆಶೀರ್ವಾದದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಸಕಲ ಸಿದ್ಧತೆಗಳು ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾಟಕ್ಕೆ ಈ ಬಾರಿ ವಿಶೇಷವಾದ ಹಾಡೊಂದು ಕೂಡ ಬಿಡುಗಡೆಯಾಗಿದೆ.
ಪ್ರಮೋದ್ ಮರವಂತೆ ಅವರ ಸಾಹಿತ್ಯದಲ್ಲಿ ಮೂಡಿಬಂದ ಆಡು ಆಡು ಆಟ ಆಡು ಹಾಡನ್ನು ಪ್ರದೀಪ್ ವರ್ಮಾ ಅವರು ಸಂಗೀತ ನೀಡಿ ತಮ್ಮದೇ ದನಿಯಲ್ಲಿ ಹಾಡಿದ್ದಾರೆ. ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಆನಂದ್ ಸ್ಪೋರ್ಟ್ಸ್ ಇಂಡಿಯಾ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಹೊರಬಿದ್ದಿದ್ದು, ಸದ್ಯ ಎಲ್ಲರ ಮೆಚ್ಚುಗೆ ಪಡೆಯುವುದಷ್ಟೇ ಅಲ್ಲದೇ, ಪಂದ್ಯಾಟದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ಪ್ರತೀ ವರ್ಷದಂತೆ ಈ ಬಾರಿಯೂ ಒಟ್ಟು ಹತ್ತರಿಂದ ಹನ್ನೆರಡು ತಂಡಗಳು ನಮ್ಮ ಚಂದನವನದ ವಿವಿಧ ತಾರೆಯರ ಅಭಿಮಾನಿ ಬಳಗವಾಗಿ ಜೊತೆಗೂಡಿ ಬಂದು FCL-12 ನಲ್ಲಿ ಭಾಗಿಯಾಗಲಿದ್ದಾರೆ. ಆನಂದ್ ಸ್ಪೋರ್ಟ್ಸ್ ಇಂಡಿಯಾ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರಪ್ರಸಾರ ಕೂಡ ಲಭ್ಯವಿರಲಿದೆ. ನಿಮ್ಮೆಲ್ಲರ ಸಹಾಯ-ಸಹಕಾರಗಳಿಲ್ಲದೆ ಪಂದ್ಯಾಟದ ಯಶಸ್ಸು ಅತ್ಯಂತ ಕಷ್ಟ. ಈ ನಮ್ಮ ಫ್ಯಾನ್ಸ್ ಕ್ರಿಕೆಟ್ ಲೀಗ್ ಗೆ ನಿಮ್ಮೆಲ್ಲರ ಪ್ರೋತ್ಸಾಹವನ್ನು ಕೋರುತ್ತಿದ್ದೇವೆ.