ಫ್ಲೆಮಿಂಗೋ ಸೆಲಬ್ರಟೀಸ್ ಸಂಸ್ಥೆಯಿಂದ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ನಟಿ ಐಶ್ವರ್ಯ ಸಿಂದೋಗಿ ಅವರಿಗೆ ಪ್ರಶಸ್ತಿ.
2013ರಲ್ಲಿ ಚಿತ್ರ ನಟ, ಮಾಡೆಲ್ ದವನ್ ಸೋಹಾ ಅವರು ಚಿತ್ರರಂಗಕ್ಕೆ ಬರಬೇಕೆನ್ನುವವರಿಗೆ ಸೂಕ್ತ ತರಬೇತಿ ನೀಡಲೆಂದು ಫ್ಲೆಮಿಂಗೋ ಸೆಲಬ್ರಟೀಸ್ ಫಿಲಂ ಇನ್ ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈವರಗೆ ನೂರಾರು ಸಿನಿಮಾಸಕ್ತರು ಇಲ್ಲಿ ತರಬೇತಿ ಪಡೆದು ಸಿನಿಮಾ, ಟಿವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ.
ದವನ್ ಸೋಹಾ ಅವರು ತಮ್ಮ ಫ್ಲೆಮಿಂಗೋ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಾ ಬಂದಿದ್ದಾರೆ.
ಅದೇರೀತಿ ಫ್ಲೆಮಿಂಗೋ ಸೆಲಬ್ರಟೀಸ್ ಸಂಸ್ಥೆಯ 2025ರ ವಾರ್ಷಿಕೋತ್ಸವ ಸಂದರ್ಭದಲ್ಲಿ ಕನ್ನಡದ ಹಿರಿಯನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಸಾಧಕ ನಟಿ ಪ್ರಶಸ್ತಿ ಹಾಗೂ ನಟಿ ಐಶ್ವರ್ಯ ಸಿಂದೋಗಿ ಅವರಿಗೆ ಸೆನ್ಸೆಷನಲ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಆವರಣದಲ್ಲಿ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, ಮಮ್ಮಿ ಚಿತ್ರದಲ್ಲಿ ಐಶ್ವರ್ಯ ಅವರು ನನ್ನ ತಂಗಿಯಾಗಿ ನಟಿಸಿದ್ದರು. ದವನ್ ಸೋಹ ಅವರು ನಮ್ಮನ್ನು ಗುರುತಿಸಿ, ಈ ವರ್ಷದ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಇಲ್ಲಿ ಬಂದಿರುವ ಎಲ್ಲಾ ಮಕ್ಕಳನ್ನು ನೋಡಿ ತುಂಬಾ ಖುಷಿಯಾಯ್ತು. ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ.
ಪುಟ್ಟ ಮಕ್ಕಳಿಗೆ ಈರೀತಿ ತರಬೇತಿ ಕೊಡಿಸಿದಾಗ ಅವರಿಗೆ ಮುಂದೆ ಅದು ತುಂಬಾ ಸಹಾಯ ಆಗುತ್ತೆ. ಬರೀ ಸಿನಿಮಾ ಅಂತಲ್ಲ, ಟಿವಿ ಶೋ, ಸ್ಟೇಜ್ ಶೋ ಎಲ್ಲೇ ಆಗಿರಲಿ, ಜನರ ಮುಂದೆ ಮಾತಾಡಲು ಒಂದು ಕಾನ್ಫಿಡೆನ್ಸ್ ಬರುತ್ತದೆ. ಈ ಹಿಂದೆ ನಾನು ಕೂಡ ಮಾತಾಡಲು ಹಿಂಜರಿಯುತ್ತಿದ್ದೆ. ಈಗ ಓಪನ್ ಅಪ್ ಆಗಿದ್ದೇನೆ. ಯಾವುದೇ ಪ್ರೊಫೆಷನ್ ನಲ್ಲಿ ಕಮ್ಯೂನಿಕೇಶನ್ ಸ್ಕಿಲ್ ತುಂಬಾ ಮುಖ್ಯ. ಅದಕ್ಕೆ ನೀವೊಂದು ಜಾಗ ಕೊಟ್ಟಿದ್ದೀರಿ. ಪ್ಲಾಟ್ ಫಾರಂ ಕಲ್ಪಿಸುತ್ತಿದ್ದೀರಿ.
ಇಲ್ಲಿಗೆ ಬರುವವರಿಗೆ ಟೆಕ್ನಿಕಲ್ ಆಸ್ಪೆಕ್ಟ್, ರೂಲ್ಸ್ ಬಹಳಷ್ಟು ಜನರಿಗೆ ಗೊತ್ತಿರಲ್ಲ, ಅವರಿಗೆ ಕಾಸ್ಟೂಮ್ಸ್, ವರ್ಕ್ ಹವರ್ ಬಗ್ಗೆ ಹೇಳಿಕೊಡಿ, ಚಿಕ್ಕ ಮಕ್ಕಳಿಗೆ ಎಜುಕೇಶನ್ ತುಂಬಾ ಮುಖ್ಯ, ಇದು ಕೂಡ ಒಂದು ಭಾಗ, ಅವರು ಎರಡನ್ನೂ ಜತೆಗೆ ಕಲೀಬೇಕು ಎಂದು ಮಕ್ಕಳು ಹಾಗೂ ಪೋಷಕರಿಗೆ ಸಲಹೆ ನೀಡಿದರು.