ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ..’ನೋಡಿದವರು ಏನಂತಾರೆ’ (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ನೋಡಿದವರು ಏನಂತಾರೆ
ನಿರ್ದೇಶಕ : ಕುಲದೀಪ್ ಕಾರಿಯಪ್ಪ
ನಿರ್ಮಾಪಕ : ನಾಗೇಶ್ ಗೋಪಾಲ್
ಸಂಗೀತ : ಮಯೂರೇಶ್
ಛಾಯಾಗ್ರಾಹಣ : ಅಶ್ವಿನಿ
ತಾರಾಗಣ : ನವೀನ್ ಶಂಕರ್, ಸೋನು ಗೌಡ , ಶ್ವೇತ ಶ್ರೀನಿವಾಸ್ , ಅಪೂರ್ವ ಭಾರದ್ವಜ್, ಪದ್ಮಾವತಿ ರಾವ್, ಆರ್ಯ ಕೃಷ್ಣ , ಮುಂತಾದವರು…
ಸಾಮಾನ್ಯವಾಗಿ ಸಮಾಜದ ಕಟ್ಟುಪಾಡುಗಳಿಗೆ ಬದ್ಧರಾಗಿ ನಮ್ಮ ಜೀವನ ಶೈಲಿ , ಆಸೆ , ಆಕಾಂಕ್ಷೆಗಳು , ಕನಸು, ಗುರಿ ಹೀಗೆ ಎಲ್ಲದಕ್ಕೂ ಒಂದು ಮಿತಿಯ ಚೌಕಟ್ಟಿನಲ್ಲಿ ಬದುಕು ನಡೆಸುವ ಪರಿ ನಡಿಯುತ್ತಲೇ ಬಂದಿದೆ. ಇದರ ನಡುವೆ ಯಾರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬ ಗೊಂದಲದಲ್ಲಿಯೇ ಜೀವನ ಸಾಗಿಸುತ್ತಾ ನಮ್ಮಲ್ಲೇ ಹುಟ್ಟಿಕೊಳ್ಳುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ ಒಂದು ಕೆಲಸವಾಗಿದೆ.
ಅಂತದ್ದೇ ಒಂದು ಸೂಕ್ಷ್ಮ ಬದುಕಿನ ತಳಮಳನ್ನ ತೆರೆದಿಡುವ ಪ್ರಯತ್ನವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನೋಡಿದವರು ಏನಂತಾರೆ”. ಬೆಂಗಳೂರಿನ ಕಂಪನಿ ಒಂದರಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುವ ಸಿದ್ದಾರ್ಥ (ನವೀನ್ ಶಂಕರ್). ಟೊರೊಂಟೊಗೆ ಹೋಗುವ ಆಸೆಯ ಜೊತೆ ಗೆಳತಿಯ ಬ್ರೇಕ್ ಅಪ್ ಕೂಡ ಅವನ ಮನಸ್ಸನ್ನ ಕುಗ್ಗಿಸುತ್ತದೆ.
ತಾನು ಮಗುವಾಗಿದ್ದಾಗಲೇ ಬಿಟ್ಟು ಹೋದ ತಾಯಿ, ತಂದೆಯ ಆಸರೆಯಲ್ಲಿ ಬೆಳೆದ ಸಿದ್ದಾರ್ಥ್ ಗೆ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ಒಂಟಿಯಾಗಿ ಜೀವನ ನಡೆಸುವವನ ಬದುಕಲ್ಲಿ ಬರುವ ಹೆಣ್ಣನ್ನ ದ್ವೇಷಿಸಿದ್ರು , ಸರಿಯಾದ ಸಾಂಗತ್ಯವನ್ನು ಬಯಸುತ್ತಾನೆ.
ಕಾರ್ಪೋರೇಟ್ ಜಗತ್ತಿನ ಸೆಣೆಸಾಟ, ಒತ್ತಡ ಬದುಕಿನ ನಡುವೆ ನೆಮ್ಮದಿ ಹುಡುಕಾಟದಲ್ಲಿ ಬರವಣಿಗೆ ಕಡೆ ಗಮನ ಹರಿಸುತ್ತಾ ಪ್ರಶ್ನೆಗೆ ಉತ್ತರ ಹುಡುಕಲು ಮುಂದಾಗುವನ ಬದುಕಲ್ಲಿ ಎದುರಾಗುವ ರೋಚಕ ತಿರುವುಗಳು ಬೇರೆದೇ ದಾರಿ ತೋರಿದಂತಿದೆ.
ಸಿದ್ದಾರ್ಥ್ ಪ್ರಶ್ನೆ ಏನು…
ತಾಯಿ ಬಿಟ್ಟು ಹೋಗಿದ್ದು ಯಾಕೆ…
ಹೆಣ್ಣನ್ನು ದ್ವೇಷಿಸಲು ಕಾರಣ…
ಕ್ಲೈಮಸ್ ಹೇಳುವ ಸತ್ಯ ಏನು..
ಇನ್ನು ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು , ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಾಣುವ
ಹೆಣ್ಣು ಮಗಳ ಬದುಕು, ಬವಣೆಯ ಹಿಂದಿರುವ ಸತ್ಯದ ಸುಳಿಯ ಸುತ್ತ ಸಾಗುವ ಕಥಾನಕದಲ್ಲಿ ಬಂಧು-ಬಳಗ , ಒತ್ತಡದ ಕೆಲಸದ ನಡುವೆ ಇನ್ನೇನನ್ನೋ ಹುಡುಕುವ ಹಂಬಲ, ನೋಡಿದವರು ಏನಂತಾರೆ ಅನ್ನೋದನ್ನ ಬಿಟ್ಟು ನಮ್ಮನ್ನು ನಾವು ಕಂಡುಕೊಳ್ಳುವುದು ಮುಖ್ಯ ಎಂಬ ಅಂಶವನ್ನು ಸ್ಪಷ್ಟವಾಗಿ ತೆರೆದಿಟ್ಟಿದ್ದಾರೆ.
ಚಿತ್ರಕಥೆ ಇನ್ನಷ್ಟು ಬಿಗಿ ಮಾಡಿದರೆ ಚೆನ್ನಾಗಿರತ್ತಿತ್ತು. ಇನ್ನು ಫ್ರೀ ಕ್ಲೈಮ್ಯಾಕ್ಸ್ ಮನ ಮುಟ್ಟುವಂತಿದೆ. ತಾಯಿ – ಮಗನ ಸೆಂಟಿಮೆಂಟ್ ಹಾಗೂ ಜೀವನದ ಕಹಿ ಸತ್ಯದ ಅರಿವು ಮೂಡಿಸಿದಂತಿದೆ. ಯಾವುದೇ ಅಬ್ಬರವಿಲ್ಲದೆ , ನೈಜಕ್ಕೆ ಪೂರಕವಾಗಿ ಮೂಡಿಬಂದಿರುವ ಈ ಚಿತ್ರದ ಸಂಗೀತ , ಛಾಯಾಗ್ರಹಣ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ಇಂಥ ಅರ್ಥಪೂರ್ಣ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.
ನಟ ನವೀನ್ ಶಂಕರ್ ಇಡೀ ಚಿತ್ರದ ಕೇಂದ್ರಬಿಂದುವಾಗಿ ಗಮನ ಸೆಳೆದಿದ್ದಾರೆ. ಹಳ್ಳಿ ಹಾಗೂ ಸಿಟಿ ಜೀವನದ ಪಾತ್ರಕ್ಕೆ ಜೀವ ಕೊಟ್ಟು ನೈಜ್ಯ ಸ್ವರೂಪ ನೀಡಿದ್ದಾರೆ. ಇನ್ನು ತಾಯಿಯ ಪಾತ್ರದಾರಿ ಪದ್ಮಾವತಿ ರಾವ್ ಬಹಳ ಸೊಗಸಾಗಿ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಂಡಿದ್ದು , ಭೂಮಿ ಮೇಲೆ ನಾವು ಅತಿಥಿ ಅಷ್ಟೇ ಎನ್ನುತ್ತಲೇ ಜೀವನದ ಕಹಿ ಸತ್ಯಗಳನ್ನು ಹೊರಹಾಕಿದ್ದಾರೆ.
ಇನ್ನು ಕುರಿ ಕಾಯುವ ಹುಡುಗನ ಪಾತ್ರದ ಮಾಡಿರುವ ಬಾಲಕ ಅದ್ಭುತವಾಗಿ ನಟಿಸಿದ್ದು , ಗಮನ ಸೆಳೆಯುತ್ತಾನೆ. ಉಳಿದಂತೆ ಅಭಿನಯಿಸಿರುವ ಸ್ಪಂದನ ಪ್ರಸಾದ್ , ಶ್ವೇತಾ ಶ್ರೀನಿವಾಸ್ , ಆರ್ಯಕೃಷ್ಣ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಸಾತ್ ನೀಡಿದ್ದಾರೆ. ಅರ್ಥಮಾಡಿಕೊಳ್ಳುವಂಥ ಬಹಳಷ್ಟು ವಿಚಾರ ಒಳಗೊಂಡಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.