Cini NewsSandalwood

“ರಾಜು ಜೇಮ್ಸ್ ಬಾಂಡ್” ಚಿತ್ರದ ಟ್ರೇಲರ್ ರೀಲಿಸ್ ಮಾಡಿದ ನಟ ಶ್ರೀಮುರಳಿ

ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನಲ್ಲೇ ಮೋಡಿ ಮಾಡಿರುವ ಈ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ.

ಗುರುನಂದನ್ ನಮ್ಮ‌ ಕುಟುಂಬದ ಆತ್ಮೀಯರು‌. ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡು ಚೆನ್ನಾಗಿ ಮೂಡಿಬಂದಿದೆ. ನಾಯಕ ಹಾಗೂ ನಾಯಕಿಯ ಅಭಿನಯ ಹಾಗೂ ನಿರ್ದೇಶನ ಚೆನ್ನಾಗಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವುದು ತೆರೆಯ ಮೇಲೆ ಗೊತ್ತಾಗುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶ್ರೀಮುರಳಿ ಹಾರೈಸಿದರು.

ನಾನು ಹದಿನೇಳು ವರ್ಷಗಳ ಹಿಂದೆ ಶ್ರೀಮುರಳಿ ಅವರ “ಮಿಂಚಿನ ಓಟ” ಚಿತ್ರದಲ್ಲಿ ಕೆಲಸ ಮಾಡಿದ್ದೆ. ಈಗ ಹದಿನೇಳು ವರ್ಷಗಳ ನಂತರ ಮತ್ತೆ ನನ್ನ ನಿರ್ದೇಶನದ ಸಿನಿಮಾದ‌ ಟ್ರೇಲರ್ ಅವರಿಂದ ಅನಾವರಣವಾಗಿದ್ದು ಖುಷಿಯಾಗಿದೆ. “ರಾಜು ಜೇಮ್ಸ್ ಬಾಂಡ್” ಚಿತ್ರ ಚೆನ್ನಾಗಿ ಬಂದಿದೆಯಾದರೆ ಅದು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರದಿಂದ ಮಾತ್ರ ಎಂದು ಮಾತನಾಡಿದ ದೀಪಕ್ ಮಧುವನಹಳ್ಳಿ,‌ ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.

ನಾನು ಅಣ್ಣವ್ರು ಹಾಗೂ ಅಪ್ಪು ಅವರ ಅಭಿಮಾನಿ. ಅವರು ನನಗೆ ಆದರ್ಶ. ಇಂದು ಆತ್ಮೀಯರಾದ ಶ್ರೀಮುರಳಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಲ್ಲಿಯವರೆಗೆ ನೀವು ನೋಡಿರದ ಗುರುನಂದನ್ ನನ್ನು ಈ ಚಿತ್ರದಲ್ಲಿ ನೋಡಬಹುದು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇ‌ನೆ ಎಂದು ಗುರುನಂದನ್ ತಿಳಿಸಿರು.

ಆರಂಭದಿಂದಲೂ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಋಣಿ. ಪರಿಶುದ್ಧ ಹಾಸ್ಯ ಚಿತ್ರ ಬಂದು ಬಹಳ ದಿನಗಳಾಗಿದೆ. ಒಂದೊಳ್ಳೆ ಉತ್ತಮ ಕಾಮಿಡಿ ಜನರ್ ನ ಈ ಚಿತ್ರ ಇದೇ ಫೆಬ್ರವರಿ 14 ರಂದು ತೆರೆಗೆ ಬರಲಿದೆ. ಸತ್ಯ ಪಿಕ್ಚರ್ಸ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ಹೇಳಿದರು.‌

ಇದು ನನ್ನ ಮೊದಲ ಚಿತ್ರ. ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕಿ ಮೃದುಲ.‌ ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.

error: Content is protected !!