ಕೊಲೆಗಳ ರೋಚಕ ಮಿಸ್ಟ್ರಿ ಕಹಾನಿ ‘ಅಧಿಪತ್ರ’ : ಚಿತ್ರವಿಮರ್ಶೆ-ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ಅಧಿಪತ್ರ
ನಿರ್ದೇಶಕ : ಚಯನ್ ಶೆಟ್ಟಿ
ನಿರ್ಮಾಣ : ಕೆ. ಆರ್. ಸಿನಿ ಕಂಬೈನ್ಸ್ , ಬೆಳಕು ಫಿಲಂಸ್
ಸಂಗೀತ : ಶ್ರೀಹರಿ ಶ್ರೇಷ್ಠ
ಛಾಯಾಗ್ರಹಣ : ಶ್ರೀಕಾಂತ್
ತಾರಾಗಣ : ರೂಪೇಶ್ ಶೆಟ್ಟಿ , ಜಾನವಿ , ರಘು ಪಾಂಡೇಶ್ವರ್ , ಪ್ರಕಾಶ್ ತುಮಿನಾಡು, ದೀಪಕ್ ರೈ , ಎಂ.ಕೆ. ಮಠ, ಪ್ರಶಾಂತ ನಟನ ಹಾಗೂ ಮುಂತಾದವರು…
ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತದೆ. ಅದರಲ್ಲೂ ನಿಗೂಢ ಪ್ರದೇಶಗಳ ತುಳುನಾಡಿನ ಭಾಗದ ದಟ್ಟ ಅರಣ್ಯಗಳ ನೆಲದಲ್ಲಿ ಬಹಳಷ್ಟು ದಂತಕಥೆಗಳು ರಹಸ್ಯವಾಗಿ ಉಳಿದೆಹೋಗಿದೆಯಂತೆ. ಅಂತದ್ದೇ ಒಂದಷ್ಟು ನಿಗೂಢ ಸೂಕ್ಷ್ಮತೆಯ ಕಥಾನಕದ ಜಾಡಿನ ಹಿಂದಿರುವ ರಹಸ್ಯದ ಸರಪಳಿಯನ್ನು ಚಿತ್ರ ರೂಪಕವಾಗಿ ತುಳುನಾಡ ಸಂಸ್ಕೃತಿ ಆಟಿಕಳಂಜ ಅಂಶದ ಸುತ್ತ ಸಾಗುವ ಹಾದಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಅಧಿಪತ್ರ”.
ಉಡುಪಿ ಜಿಲ್ಲೆಯ ಶಿವಪುರ ಪೊಲೀಸ್ ಠಾಣೆಗೆ ಹೊಸದಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಬಂದ ಅತ್ರೇಯ (ರೂಪೇಶ್ ಶೆಟ್ಟಿ) ಆರಂಭದಲ್ಲೇ ಅಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಕೇಸ್ ಎದಿರಿಸಬೇಕಾಗುತ್ತೆ. ಅದರ ಮೂಲ ಕೆದಕುತ್ತ ಹೋದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕೆಂದು ಬಂದ ಅತ್ರೇಯ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಊರಲ್ಲಿ ಒಂದರ ಹಿಂದೆ ಒಂದು ಸಂಭವಿಸುತ್ತಿರುವ ಅಸಹಜ ಸಾವುಗಳ ರಹಸ್ಯ ಬಯಲು ಮಾಡುವುದೇ ದೊಡ್ಡ ಸವಾಲಾಗುತ್ತದೆ. ಇನ್ಸಪೆಕ್ಟರ್ ವಿಶ್ವನಾಥ್ , ಪತ್ರಿಕಾ ಸಂಪಾದಕ ಬಲರಾಮ್ ಸಾವುಗಳು ಬ್ರಹ್ಮರಾಕ್ಷಸ , ಕಗ್ಗರ ಬೆಟ್ಟದ ನಿಗೂಢ ರಹಸ್ಯ ಇದೆಲ್ಲವೂ ಅತ್ರೇಯನಿಗೆ ಬಿಡಿಸಲಾಗದ ಕಗ್ಗಂಟಾಗಿ ಕಂಡುಬರುತ್ತದೆ.
ಬುದ್ದಿವಂತಿಕೆಯಿಂದ ಒಂದೊಂದೇ ಸಮಸ್ಯೆಗಳನ್ನು ಬಿಡಿಸುತ್ತಾ ಹೋದಂತೆ ಅತ್ರೇಯನಿಗೆ ಆ ಎಲ್ಲ ಕೊಲೆಗಳ ಹಿಂದಿರುವುದು ಒಬ್ಬರದೇ ಕೈ ಎನ್ನುವುದೂ ಗೊತ್ತಾಗುತ್ತದೆ. ಇನ್ನೇನು ಅತ್ರೇಯ ಕೊಲೆಗಾರನನ್ನು ಪತ್ತೇ ಹಚ್ಚಿಬಿಟ್ಟೆ ಎಂದುಕೊಳ್ಳುತ್ತಿರುವಾಗಲೇ ಅಲ್ಲಿ ಮತ್ತೊಂದು ರಹಸ್ಯ ತೆರೆದುಕೊಳ್ಳುತ್ತದೆ. ಈ ಹುಡುಕಾಟದಲ್ಲಿ ಕಥಾನಾಯಕನಿಗೆ ತನ್ನ ತಂದೆ-ತಾಯಿಯ ಬಗ್ಗೆ ಮಾಹಿತಿಯೂ ಸಿಗುತ್ತದೆ.
ಇತ್ತ ಅತ್ರೇಯ ಯಾರನ್ನು ಕೊಲೆಗಾರ ಎಂದು ಕೊಂಡಿರ್ತಾನೋ ಅವರ‍್ಯಾರೂ ಕೊಲೆಗಾರರಾಗಿರುವುದಿಲ್ಲ, ಅದರ ಹಿಂದಿರುವ ಕೈ ಬೇರೇನೇ ಇರುತ್ತದೆ. ತಂದೆಯಿಲ್ಲದ ಅತ್ರೇಯನನ್ನು ಆತನ ತಾತನೇ ಆಶ್ರಮದಲ್ಲಿಟ್ಟು ಬೆಳೆಸುತ್ತಾನೆ.
ಸುಮಾರು 25 ವರ್ಷಗಳ ಹಿಂದೆ ಮಾರ್ಕಂಡೇಯ ಎಂಬ ವ್ಯಕ್ತಿ ಮರದ ಬೇರುಗಳಿಂದ ಸಂಗ್ರಹಿಸಿ ಕೊಡುತ್ತಿದ್ದ ಮದ್ದಿಗೆ ಅದೆಂಥ ಖಾಯಿಲೆ ಇದ್ದರೂ ವಾಸಿ ಮಾಡುವ ಶಕ್ತಿಯಿರುತ್ತದೆ. ಕಳಂಜ ಎಂದರೆ ಊರವರ ಕಷ್ಟ ದೂರಮಾಡಲು ಆ ದೇವರೇ ಕಳಿಸಿದ ದೂತ ಎನ್ನುವ ನಂಬಿಕೆ ಅವರದ್ದು, ಆದರೆ ಹೊಲದಲ್ಲಿ ಸಿಕ್ಕ ನಿಧಿ ನಾಯಕನ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳುತ್ತದೆ, ಆ ನಿಧಿಗೋಸ್ಕರ ಇಡೀ ಕುಟುಂಬವನ್ನೇ ಮೂವರು ದುಷ್ಟರು ಬಲಿತೆಗೆದು ಕೊಂಡಿರುತ್ತಾರೆ. ಈ ಎಲ್ಲಾ ರಹಸ್ಯಗಳ ಹಿಂದೆ ಒಂದು ನಿಗೂಢ ಸತ್ಯ ಅಡಗಿರುತ್ತದೆ.
ಈ ಕೊಲೆಗಳಿಗೆ ಕಾರಣ ಯಾರು…
ಅತ್ರೇಯನಿಗೆ ಸಿಗುವ ಸುಳಿ ಏನು…
ಇದರ ಹಿಂದೆ ಯಾರಿದ್ದಾರೆ…
ಕ್ಲೈಮ್ಯಾಕ್ಸ್ ಉತ್ತರ ಏನು…
ಒಂದಷ್ಟು ಸೂಕ್ಷ್ಮ ವಿಚಾರಗಳ ತಿಳಿಯುವುದಕ್ಕೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿ , ಸೂಕ್ಷ್ಮತೆಯಿಂದ ಸಾಗುತ್ತದೆ. ಇಲ್ಲಿ ಯಾವುದೇ ಬಿಲ್ಡಪ್ ಇಲ್ಲದೆ ನೀಟಾಗಿ ಕಥೆ ಹೇಳಿರುವುದು ಗಮನ ಸೆಳೆಯುತ್ತದೆ. ಟ್ವಿಸ್ಟ್ ಅಂಡ್ ಟರ್ನ್ ಮೂಲಕ ಕ್ಯೂರಿಯಾಸಿಟಿಯಾಗಿ ಚಿತ್ರ ಸಾಗುವ ಹಾಗೆ ಮಾಡಿರುವ ನಿರ್ದೇಶಕ ಚಯನ್ ಶೆಟ್ಟಿ ಪ್ರಯತ್ನ ಉತ್ತಮವಾಗಿದೆ.
ಮೊದಲ ಚಿತ್ರ ನಿರ್ದೇಶನದಲ್ಲೇ ಕರಾವಳಿ ಸೊಗಡಿನ ಥ್ರಿಲ್ಲರ್ ಕಥೆಯನ್ನು ಪ್ರೇಕ್ಚಕರ ಮುಂದೆ ತೆರೆದಿಟ್ಟಿದ್ದು, ಚಿತ್ರಕಥೆಯ ಓಟ ಇನ್ನಷ್ಟು ಹಿಡಿತಗೊಳಿಸಬಹುದಿತ್ತು.
ಇನ್ನು ಚಿತ್ರಕ್ಕೆ ಏನು ಬೇಕು ಅದನ್ನು ಅಚ್ಚುಕಟ್ಟಾಗಿ ಒದಗಿಸಿದ್ದಾರೆ ನಿರ್ಮಾಪಕರಾದ ದಿವ್ಯಾ ನಾರಾಯಣ್, ಕುಲದೀಪ್ ರಾಘವ್. ಇನ್ನು ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ, ಛಾಯಾಗ್ರಹಣ , ಸಂಕಲನ ಸೇರಿದಂತೆ ತಂಡ ಅಚ್ಚುಕಟ್ಟಾಗಿ ತನ್ನ ಕೆಲಸವನ್ನು ನಿರ್ವಹಿಸಿದೆ.
ಇನ್ನು ನಟ ರೂಪೇಶ್ ಶೆಟ್ಟಿ ನಿಷ್ಠಾವಂತ ಪೊಲೀಸ್ ಆಧಿಕಾರಿಯಾಗಿ ಸಹಜಾಭಿನಯ ನೀಡಿದ್ದಾರೆ. ಯಾವುದೇ ಆಡಂಬರವಿಲ್ಲದೆ ಪತ್ರಿಕೆ ನ್ಯಾಯ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ನಟಿ ಜಾಹ್ನವಿ ಪತ್ರಕರ್ತೆಯಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಉಳಿದಂತೆ ಹಿರಿಯ ನಟ ಎಂ.ಕೆ.ಮಠ, ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಪ್ರಶಾಂತ್ ನಟನ ತಮ್ಮ ತಮ್ಮ ಪಾತ್ರವನ್ನು ನೈಜವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾ ಸಾಗುವುದೇ ಕೊಲೆಗಳ ಸುತ್ತ. ಇದು ರೆಟ್ರೋ ಕಾಲದಲ್ಲಿ ನಡೆಯುವ ಕಥಾನಕವಾಗಿದ್ದು , ಪ್ರೇಕ್ಷಕರನ್ನ ಸೆಳೆಯುವಂತ ಎಲ್ಲಾ ಅಂಶವು ಒಳಗೊಂಡಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.