ಮನ ಮುಟ್ಟುವ ಪ್ರೇಮ ಕಥೆ ‘ವಿಷ್ಣು ಪ್ರಿಯ’ (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ವಿಷ್ಣು ಪ್ರಿಯ
ನಿರ್ದೇಶಕ : ವಿ.ಕೆ.ಪ್ರಕಾಶ್
ನಿರ್ಮಾಪಕ : ಕೆ .ಮಂಜು
ಸಂಗೀತ : ಗೋಪಿ ಸುಂದರ್
ಛಾಯಾಗ್ರಹಣ : ವಿನೋದ್ ಭಾರತಿ
ತಾರಾಗಣ : ಶ್ರೇಯಸ್.ಕೆ ಮಂಜು , ಪ್ರಿಯಾ ವಾರಿಯರ್ , ಅಚ್ಚುತ್ ಕುಮಾರ್, ಸುಚೇಂದ್ರ ಪ್ರಸಾದ್ , ನಿಹಾಲ್ ರಾಜ್, ಚಿತ್ಕಲ ಬಿರಾದರ್ , ಅಶ್ವಿನಿ ಗೌಡ ಹಾಗೂ ಮುಂತಾದವರು…
ಪ್ರೀತಿ ಅಮರ… ಪ್ರೀತಿಗೆ ಸಾವಿಲ್ಲ… ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬ ನುಡಿಯನ್ನು ಬಹಳಷ್ಟು ಪ್ರೇಮಿಗಳು ಹೇಳಿರುವ ಮಾತನ್ನು ದಶಕಗಳಿಂದಲೂ ಕೇಳುತ್ತಾ ಬಂದಿದ್ದೇವೆ. ಪ್ರೀತಿಗಿರುವ ನಂಬಿಕೆ , ವಿಶ್ವಾಸ , ಶಕ್ತಿಯ ತಾಕತ್ತೆ ಅಂತದ್ದು, 90ರ ಕಾಲಘಟ್ಟದಲ್ಲಿ ಇದ್ದಂತ ಮನೆಯ ವಾತಾವರಣ , ತಂದೆ ತಾಯಂದಿರ ಆಲೋಚನೆ , ಮಕ್ಕಳ ಆಸೆ , ಆಕಾಂಕ್ಷೆ , ತಳಮಳ , ಸ್ನೇಹಿತರು ಹಾಗೂ ಸಂಬಂಧಿಕರ ಮನಸ್ಥಿತಿಯ ಸುತ್ತ ನಡೆಯುವ ಒಂದು ನಿಷ್ಕಲ್ಮಶ ಮುಗ್ಧ ಪ್ರೇಮಿಗಳ ಆಕರ್ಷಣೆ , ಸೆಳೆತ , ನೋವು , ನಲಿವು ,ಪೊಲೀಸ್, ಕೋರ್ಟ್ ನಡುವೆ ಮನ ಕಲಕುವ ಸನ್ನಿವೇಶಗಳ ಸುಳಿಯಲ್ಲಿ ಪ್ರೇಕ್ಷಕರ ಮುಂದೆ ಈ ವಾರ ಬಂದಿರುವಂತಹ ಚಿತ್ರ ” ವಿಷ್ಣುಪ್ರಿಯ”. ಸುಂದರ ಪರಿಸರದ ಮಡಿಲಲ್ಲಿ ಬೆಳೆದ ಕಾಲೇಜ್ ವಿದ್ಯಾರ್ಥಿ ವಿಷ್ಣು ( ಶ್ರೇಯಸ್).
ತನ್ನ ಬದುಕಿನಲ್ಲಿ ನಡೆದ ಒಂದು ನೋವನ್ನು ಸಹಿಸಿಕೊಂಡು, ತನ್ನ ಆತ್ಮೀಯ ಗೆಳೆಯನೊಟ್ಟಿಗೆ ಖುಷಿಯಾಗಿರುತ್ತಾನೆ. ತನ್ನ ಸ್ನೇಹಿತ ಪ್ರೀತಿಸುವ ಹುಡುಗಿ ಪ್ರಿಯ (ಪ್ರಿಯ ವಾರಿಯರ್)ಗೆ ಗೆಳೆಯನ ಪ್ರೀತಿ ತಿಳಿಸಲು ಸಹಕಾರಿ ಆಗುತ್ತಾನೆ. ಆದರೆ ಪ್ರಿಯ ಗೆಳೆಯನನ್ನ ಬಿಟ್ಟು ವಿಷ್ಣು ನನ್ನ ಪ್ರೀತಿಸುವ ವಿಚಾರ ತಿಳಿಸುತ್ತಾಳೆ.
ವಿದ್ಯಾಭ್ಯಾಸದ ನಡುವೆ ಇವರ ಸ್ನೇಹ , ಸಲುಗೆ ಪ್ರೀತಿ ಒಂದು ಕ್ಷಣವೂ ಬಿಟ್ಟಿರಲಾಗದಂತ ಹಂತಕ್ಕೆ ತಲುಪುತ್ತದೆ. ಈ ಪ್ರೇಮಿಗಳಿಂದಾಗುವ ಎಡವಟ್ಟು ಎರಡು ಕುಟುಂಬದಲ್ಲಿ ಆತಂಕ ಎದುರಾಗಿದೆ. ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಪ್ರಿಯ ತಂದೆಯ ಕೋಪ ಮಿತಿಮೀರಿ ಮಗಳನ್ನು ಬಡಿದು ಶಿಕ್ಷಿಸುತ್ತಾನೆ , ಮುಂದೇನು ಎಂಬ ಗೊಂದಲದ ನಡುವೆ ಇಬ್ಬರನ್ನ ದೂರ ಮಾಡಲು ನಿರ್ಧರಿಸುತ್ತಾನೆ.
ಇತ್ತ ವಿಷ್ಣು ಕುಟುಂಬದಲ್ಲೂ ಮಗನ ಬೆಂಬಲಕ್ಕೆ ನಿಲ್ಲುತ್ತಾರೆ. ಇದರ ನಡುವೆ ಒಂದಷ್ಟು ಗೊಂದಲ , ಕಸಿವಿಸಿ , ವಿಷ ಬೀಜ ಬಿತ್ತುವವರ ನಡುವೆ ಪ್ರೇಮಿಗಳ ಮನಸ್ಸು ಕಂಗಾಲಾಗುತ್ತಾ ರೋಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ.
ಪ್ರೇಮಿಗಳು ಒಂದಾಗ್ತಾರಾ…
ಎರಡು ಕುಟುಂಬ ಸೇರುತ್ತಾ..
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲಾ ವಿಚಾರಕ್ಕಾಗಿ ನೀವು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಒಂದು ಸುಂದರ ನಿಷ್ಕಲ್ಮಶ ಪ್ರೀತಿಯ ಚಿತ್ರವನ್ನ ಕಟ್ಟಿಕೊಡುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. 90ರ ಕಾಲಘಟ್ಟದ ಪ್ರೇಮಿಗಳ ಮನಸ್ಥಿತಿ , ಮನೆಯವರ ಆಲೋಚನೆ , ನೋವು , ನಲಿವಿನ , ತಳಮಳದ ಮೂಲಕ ಕ್ಲೈಮ್ಯಾಕ್ಸ್ ಮನಸೆಳೆಯುತ್ತಿದೆ. ಈ ರೀತಿಯ ಪ್ರೇಮ ಕಥೆಗಳು ಬಹಳಷ್ಟು ಬಂದಿದ್ದರೂ ಕೂಡ ಸುಂದರ ಪರಿಸರ , ಹಾಡುಗಳ ನಡುವೆ ಚಿತ್ರ ಇಷ್ಟವಾಗುತ್ತದೆ.
ಚಿತ್ರದ ಹೈಲೈಟ್ ಎಂದರೆ ಕ್ಯಾಮೆರ ಕೈಚಳಕ , ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಸಂಭಾಷಣೆ , ಸಂಕಲನ ಕೂಡ ಅಚ್ಚುಕಟ್ಟಾಗಿದೆ. ಒಂದು ಮನಸೆಳೆಯುವ ಪ್ರೇಮಕಥೆ ನೀಡಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.
ಇನ್ನು ನಾಯಕನಾಗಿ ಶ್ರೇಯಸ್ . ಕೆ . ಮಂಜು ತನ್ನ ಪಾತ್ರಕ್ಕೆ ಜೀವ ತುಂಬಿ ಒಬ್ಬ ಪ್ರೇಮಿಯಾಗಿ , ಸಂದರ್ಭಕ್ಕೆ ತಕ್ಕಂತೆ ಹಾವಭಾವದ ಮೂಲಕ ಉತ್ತಮವಾಗಿ ನಟಿಸಿದ್ದಾರೆ. ಆಕ್ಷನ್ ಗೂ ಸೈ ಎಂದಿರುವ ಈ ನಟನ ಭವಿಷ್ಯ ಮುಂದೆ ಉಜ್ವಲವಾಗಲಿದೆ. ಇನ್ನು ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಮಾತಿನ ಜೊತೆ ನೋಟದ ಮೂಲಕವೂ ಪ್ರೇಕ್ಷಕರ ಮನಸ್ಸನ್ನು ಕದ್ದಿದ್ದಾರೆ.
ಇನ್ನು ನಾಯಕಿಯ ತಂದೆಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅದ್ಭುತವಾಗಿ ನಡೆಸಿದ್ದು , ನಾಯಕನ ತಂದೆಯಾಗಿ ಅಚ್ಚುತ್ ಕುಮಾರ್ ಕೂಡ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕನ ತಾಯಿಯಾಗಿ ಅಶ್ವಿನಿ ಗೌಡ , ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದಾರ್ ಸೇರಿದಂತೆ ನವೀನ್. ಡಿ. ಪಡಿಲ್ , ಗೆಳೆಯನ ಪಾತ್ರಧಾರಿ , ಅಕ್ಕನ ಪಾತ್ರಧಾರಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.ಪ್ರೇಮಿಗಳು , ಪ್ರೀತಿ ಮಾಡಿದವರು , ಪ್ರೀತಿ ಮಾಡುವವರು ಸೇರಿದಂತೆ ಕುಟುಂಬ ಸಮೇತ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.