Cini NewsMovie ReviewSandalwood

ಭಾವನೆಗಳ ಪ್ರೀತಿಯ ಯಾನ ‘ಭಾವ ತೀರ ಯಾನ’ (ಚಿತ್ರವಿಮರ್ಶೆ- ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಭಾವ ತೀರ ಯಾನ
ನಿರ್ದೇಶಕರು : ಮಯೂರ್‌ ಅಂಬೆಕಲ್ಲು , ತೇಜಸ್ ಕಿರಣ್
ನಿರ್ಮಾಪಕರು : ಶೈಲೇಶ್ ಅಂಬೆಕಲ್ಲು , ಲಕ್ಷ್ಮಣ್ ಬಿ.ಕೆ.
ಸಂಗೀತ : ಮಯೂರ್
ಛಾಯಾಗ್ರಹಣ : ಶಿವಶಂಕರ್
ತಾರಾಗಣ : ತೇಜಸ್ ಕಿರಣ್, ಆರೋಹಿ ನೈನಾ, ಅನುಷಾ ಕೃಷ್ಣ , ರಮೇಶ್ ಭಟ್, ಚಂದನಾ ಆನಂತಕೃಷ್ಣ , ವಿದ್ಯಾಮೂರ್ತಿ ಹಾಗೂ ಮುಂತಾದವರು…

ಬದುಕಿನ ಪಯಣದ ಹಾದಿಯ ಪ್ರತಿ ಹಂತದ ಕಾಲಘಟ್ಟವು ಒಂದಷ್ಟು ಸಿಹಿ , ಕಹಿ ನೆನಪುಗಳು ಭಾವನೆಗಳ ಮೂಲಕ ಕಾಡುತ್ತಾ ಸಾಗುತ್ತದೆ. ಅದರಲ್ಲೂ ಸ್ನೇಹ , ಪ್ರೀತಿ , ಬಾಂಧವ್ಯದ ಸುಳಿ ಮತ್ತೊಂದು ಬೆಸುಗೆಯನ್ನ ಕಟ್ಟಿಕೊಡುತ್ತದೆ.

ಪ್ರೀತಿ ಮಧುರ… ನೆನಪು ಅಮರ… ಎನ್ನುವಂತಹ ತೀವ್ರತೆ ಇರುವ ಕಥಾನಕವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಭಾವ ತೀರ ಯಾನ”. ಸಾಮಾನ್ಯವಾಗಿ ನಾವು ಇಷ್ಟಪಡುವ ವಸ್ತು , ಸ್ಥಳ ಅಥವಾ ವ್ಯಕ್ತಿಗಳನ್ನಾಗಲಿ ಬಿಟ್ಟು ಹೋಗುವುದು ಅಷ್ಟು ಸುಲಭದ ಮಾತಲ್ಲ. ಮನಸು ಭಾರವಾಗುತ್ತೆ , ಏನೋ ಕಳೆದುಕೊಂಡಂತ ಭಾವ ಮೂಡುತ್ತದೆ.

ಅಂತಹ ಮನಸ್ಥಿತಿಯ ವ್ಯಕ್ತಿ (ರಮೇಶ್ ಭಟ್) ಮಗ , ಸೊಸೆ ಹಾಗೂ ಮೊಮ್ಮಗನ ಮಾತಿಗೆ ಕಿವಿಗೊಡದೆ , ತನ್ನ ಮನಸ್ಸಿನ ವಿಚಾರವನ್ನು ಹಂಚಿಕೊಳ್ಳಲು ಆರೋಗ್ಯ ಕೇಂದ್ರದಂತಿರುವ ನಿಸರ್ಗಧಾಮದ ರೂವಾರಿ ದೃತಿ ( ಚಂದನ ಅನಂತಕೃಷ್ಣ) ಯನ್ನ ಭೇಟಿ ಮಾಡುತ್ತಾರೆ.

ಗೆಳೆಯನ ಕಥೆ ಹೇಳಲು ಮುಂದಾಗುವ ಈ ಹಿರಿಯ ಜೀವ , ತನ್ನ ಸ್ನೇಹಿತ ಚಂದು (ತೇಜಸ್ ಕಿರಣ್) ಸ್ನೇಹಜೀವಿ , ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ , ನಂಬಿಕೆ , ದೇವರು , ಪ್ರೀತಿ ಬಗ್ಗೆ ತಲೆ ಕೆಡಿಸಿಕೊಳ್ಳದವನು ಬದುಕಿನಲ್ಲಿ ಸ್ನೇಹಿತೆ ಅನು ( ಅನುಷಾ ಕೃಷ್ಣ) ಜೊತೆಗಿರುವ ಒಡನಾಟ ಪ್ರೀತಿಯ ಚಿಗುರು ಮೂಡುತ್ತದೆ. ಇದರ ನಡುವೆ ಅನು ತನ್ನ ಪ್ರಿಯಕರನನ್ನ ಭೇಟಿ ಮಾಡಲು ಚಂದು ಸಹಾಯ ಪಡೆಯುತ್ತಾಳೆ. ಆದರೆ ಪ್ರಿಯಕರ ಕೈಕೊಟ್ಟ ವಿಧಿ ಇಲ್ಲದೆ ತಾಯಿಯ ಮಾತಿಗೆ ಕಟ್ಟು ಬಿದ್ದು ವಿದೇಶಕ್ಕೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.

ಇತ್ತ ಚಂದು ತಂದೆ ಮನೆಯ ಜವಾಬ್ದಾರಿ ಜೊತೆಗೆ ಬ್ಯಾಂಕ್ ಸಾಲದ ಒತ್ತಡದ ನಡುವೆ ಕಂಗಾಲಾಗಿ , ಆರೋಗ್ಯ ಹದಗೆಟ್ಟಿರುತ್ತದೆ. ಸಮಸ್ಯೆ ನಿಭಾಯಿಸಲು ಚಂದು ಕೆಲಸಕ್ಕೆ ಸೇರುತ್ತಾನೆ. ಸಂಸ್ಥೆಯ ಮ್ಯಾನೇಜರ್ ಸ್ಪರ್ಶ (ಆರೋಹಿ ನೈನಾ) ಚಂದುವಿನ ನಡೆ , ನುಡಿ , ವ್ಯಕ್ತಿತ್ವಕ್ಕೆ ಇಷ್ಟಪಟ್ಟು , ಅವನ ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸುತ್ತಾಳೆ. ತನ್ನ ಬದುಕಿನ ನೋವಿನ ಕಥೆ ಹೇಳುತ್ತ ಪ್ರೀತಿಯ ನಿವೇದನೆ ಮಾಡಿಕೊಳ್ಳುತ್ತಾಳೆ.

ಮತ್ತೊಂದೆಡೆ ಮಗನ ಸಂಕಟ ನೋಡಿ ಅನು ತಾಯಿಯ ಜೊತೆ ಮಾತನಾಡಿ ತನ್ನ ಮಗನಿಗೆ ಮಗಳನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ. ಈ ಎಲ್ಲಾ ವಿಚಾರವನ್ನು ಗಮನಿಸುವ ಚಂದು ಗೆಳೆಯ ನೇರ ನೇರ ಮಾತನಾಡುವುದು ಸೂಕ್ತ ಎನ್ನುತ್ತಾನೆ. ಆದರೆ ವಿಧಿಯ ಆಟವೇ ವಿಚಿತ್ರ ಎನ್ನುವಂತೆ ಪ್ರೀತಿಸಿದಾಗ ಸಿಗದ ಪ್ರೀತಿ… ಬೇಡ ಎಂದಾಗ ಬರುವ ಪ್ರೀತಿ… ನಡುವೆ ಚಂದು ಬದುಕು ಏನಾಗುತ್ತೆ , ನಿಜವಾದ ಪ್ರೀತಿ ಸಿಗುವುದು ಯಾರಿಗೆ… ಫ್ಲಾಶ್ ಬ್ಯಾಕ್ ಕಥೆ ಏನು… ಕ್ಲೈಮಾಕ್ಸ್ ಹೇಳುವ ಭಾವ ತೀರದ ಯಾನ ಏನು… ಇದೆಲ್ಲದಕ್ಕೂ ಉತ್ತರ ನೀವು ಈ ಚಿತ್ರ ನೋಡಬೇಕು.

ಒಂದು ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಕಾಲಘಟ್ಟದ ಯಾನವನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕದ್ವಯರು ಯಶಸ್ವಿಯಾಗಿದ್ದಾರೆ. ವರ್ಷಗಳೇ ಉರುಳಿದರು ನೆನಪುಗಳು ಸದಾ ಜೀವಂತ, ಪ್ರೀತಿಸುವ ಹೃದಯಗಳ ಮನಸ್ಥಿತಿ , ಆಲೋಚನೆ ನಿರೀಕ್ಷೆಗೂ ಮೀರಿದ್ದು ಎಂಬ ಸೂಕ್ಷ್ಮತೆಯನ್ನು ಭಾವನೆಗಳ ಮೂಲಕ ಮನ ಮುಟ್ಟುವ ಹಾಗೆ ತೆರೆದಿಟ್ಟಿದ್ದಾರೆ.

ಚಿತ್ರಕಥೆಯ ಓಟ ನಿಧಾನಗತಿ ಅನಿಸಿದರೂ , ಸೂಕ್ಷ್ಮ ವಿಚಾರ ಸೆಳೆಯುತ್ತದೆ. ಸಂಗೀತ ಸಂದರ್ಭಕ್ಕೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಸಂಭಾಷಣೆ ಕೂಡ ಅರ್ಥಪೂರ್ಣವಾಗಿದೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿಬಂದಿದೆ.

ಇನ್ನು ನಾಯಕನಾಗಿ ಅಭಿನಯಿಸಿರುವ ತೇಜಸ್ ಕಿರಣ್ ಪಾತ್ರಕ್ಕೆ ಜೀವ ತುಂಬಿ ತನ್ನ ಪ್ರತಿಭೆಯನ್ನ ಹೊರ ಹಾಕುವುದರ ಜೊತೆ ನೈಜ್ಯತೆಗೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನು ನಟಿಯರಾದ ಆರೋಹಿ ನೈನಾ ಹಾಗೂ ಅನುಷಾ ಕೃಷ್ಣ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.

ನಾಯಕನ ಗೆಳೆಯನ ಪಾತ್ರಧಾರಿ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಹಿಂದೆಂದೂ ನೋಡಿರದಂತಹ ವಿಶೇಷ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ಅಭಿನಯಿಸಿದ್ದು, ತಮ್ಮ ಸೌಮ್ಯ ನಡುವಳಿಕೆಯ ಮೂಲಕ ಮನ ಸೆಳೆಯುವ ಪಾತ್ರವನ್ನು ನಿರ್ವಹಿಸಿದ್ದಾರೆ. ಅದೇ ರೀತಿ ಹಿರಿಯ ಕಲಾವಿದೆ ವಿದ್ಯಾಮೂರ್ತಿ ಕೂಡ ಬಹಳ ಸೊಗಸಾಗಿ ಪಾತ್ರದಲ್ಲಿ ಜೀವಿಸಿದ್ದಾರೆ.

ನಟಿ ಚಂದನ ಅನಂತ ಕೃಷ್ಣ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದು , ಒಂದು ಸೂಕ್ಷ್ಮ ವೇದನೆಯ , ಪ್ರೀತಿಯ ಸೆಳೆತದ , ಭಾವನಾತ್ಮಕ ಚಿತ್ರವಾಗಿ ಬಂದಿರುವ ಈ ಭಾವ ತೀರ ಯಾನ ಚಿತ್ರವನ್ನು ಕುಟುಂಬ ಸಮೇತ ಕುಳಿತು ನೋಡುವಂತಿದೆ.

error: Content is protected !!