ಹೆಣ್ಣುಮಗಳೊಬ್ಬಳ ಬದುಕು-ಬವಣೆ ಹಿಂದಿನ ದೇಶಪ್ರೇಮದ ಕಥೆ
ಚಿತ್ರ : ಶಾನುಭೋಗರ ಮಗಳು
ನಿರ್ದೇಶಕ : ಕೂಡ್ಲು ರಾಮಕೃಷ್ಣ
ನಿರ್ಮಾಪಕ : ಸಿ.ಎಂ. ನಾರಾಯಣ್
ಸಂಗೀತ : ರಮೇಶ್ ಕೃಷ್ಣ
ಛಾಯಾಗ್ರಹಣ : ಜೈ ಆನಂದ್
ತಾರಾಗಣ : ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ , ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ ಹಾಗೂ ಮುಂತಾದವರು…
ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆಯಲ್ಲಿ ಸಿಲುಕಿ , ನಲುಗಿದ ಅದೆಷ್ಟೋ ಜೀವಗಳ ಪಯಣವೇ ರೋಚಕ. ಒಂದಲ್ಲ ಒಂದು ರೀತಿಯಲ್ಲಿ ನಮ್ಮವರು ಬ್ರಿಟಿಷರನ್ನ ಸದೆಬಡಿಯಲು ಜನರಲ್ಲಿ ಜಾಗೃತಿ ಮೂಡಿಸುತ್ತಾ , ಯುವಕರನ್ನ ಒಗ್ಗೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು.
ಇಂತದ್ದೇ ಒಂದು ಹೋರಾಟದ ಕಥೆಯೊಳಗೆ ಹೆಣ್ಣು ಮಗಳೊಬ್ಬಳ ಬದುಕಿನ ಪಯಣ , ಜೀವನದ ತಳಮಳ , ನೋವು ನಲಿವಿನ ಸುತ್ತ ದೇಶಪ್ರೇಮ ಮೆರೆಯುವ ಕಥನಕವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಶಾನುಭೋಗರ ಮಗಳು”. ಅಗ್ರಹಾರ ಬಿದಿಯ ಮುದ್ದಾದ ಹೆಣ್ಣು ಮಗಳು ಶರಾವತಿ (ರಾಗಿಣಿ ಪ್ರಜ್ವಲ್).
ತನ್ನ ಬದುಕು , ತನ್ನ ಕುಟುಂಬ ಎನ್ನುತ್ತಾ ಗಂಡನಿಗೆ ಪ್ರೀತಿಯ ಹೆಂಡತಿ , ಅತ್ತೆ , ಮಾವನಿಗೆ ಮುದ್ದಾದ ಸೊಸೆ , ತಂದೆ , ತಾಯಿಗೆ ಪ್ರೀತಿಯ ಮಗಳಾಗಿ ಸಂತೋಷದ ಜೀವನ ನಡೆಸುವ ಶರಾವತಿ. ಇನ್ನು ಆಕೆಯ ತಮ್ಮ , ಬಾಮೈದ ಹಾಗೂ ಆತನ ಸ್ನೇಹಿತರು ಬ್ರಿಟಿಷರ ದೌರ್ಜನ್ಯ , ದೇವಸ್ಥಾನದ ಒಡವೆ , ಹಣವನ್ನ ಅಪಹರಿಸಿ ತಮ್ಮೂರಿಗೆ ಸಾಗಿಸುವ ವಿಚಾರದ ವಿರುದ್ಧ ಸಿಡಿದೆದ್ದು ನಿಲ್ಲುತ್ತಾರೆ. ಮಹಾರಾಜರು , ದಿವಾನರಿಗೂ ಕೂಡ ಈ ವಿಚಾರ ಬಗ್ಗೆ ತಿಳಿದಿರುತ್ತದೆ.
ಇನ್ನು ಈ ಯುವಕರ ಬೆಂಬಲಕ್ಕೆ ಸುಲ್ತಾನ( ಕಿಶೋರ್ ಕುಮಾರ್ )ರ ಸಹಕಾರವು ಇರುತ್ತದೆ. ಇದರ ನಡುವೆ ಶರಾವತಿಯ ಬದುಕಿನಲ್ಲಿ ಸಂಭ್ರಮದ ಕ್ಷಣ ಆರಂಭಗೊಳ್ಳುತ್ತಿದ್ದಂತೆ , ಆಕೆಯ ಅಂದ , ಚಂದಕ್ಕೆ ಸುಲ್ತಾನ ಮನ ಸೋಲುತ್ತಾನೆ. ಇನ್ನು ಬ್ರಿಟಿಷರ ಕೋಪಕ್ಕೆ ಗುರಿಯಾದ ಶರಾವತಿ ಸೋದರನ್ನ ಹಿಡಿಯಲು ಒಂದು ತಂಡ ರಾತ್ರಿ ಹಗಲೆನ್ನದೇ ಗಸ್ತು ತಿರುಗುತ್ತಾ ಇರುತ್ತದೆ.
ಮನೆಯವರ ವಿರುದ್ಧದ ನಡುವೆ ಹೋರಾಟಗಾರರಿಗೆ ಗರ್ಭಿಣಿಯಾಗಿರುವ ಶರಾವತಿ ಬೆಂಬಲ ನೀಡುತ್ತಾಳೆ. ಯಾರಿಗೂ ತಿಳಿದೆ ಹಾಗೆ ಶರಾವತಿ ಕಣ್ಮರೆಯಾಗುತ್ತಾಳೆ. ಮುಂದೆ ಆಕೆಯ ಬದುಕಲ್ಲಿ ಎದುರಾಗುವ ರೋಚಕ ಘಟನೆಗಳು , ದುರಂತ ಅನುಭವಗಳು, ಬದುಕಿನ ಮತ್ತೊಂದು ಹಾದಿಯನ್ನ ತೋರಿಸುತ್ತಾ ಸಾಗುತ್ತದೆ. ಅದು ಏನು… ಶರಾವತಿ ಹಾದಿ ಯಾವುದು… ಕಣ್ಮರೆ ಮಾಡಿಸಿದ್ದು ಯಾರು… ಆಕೆಯ ನಿಲುವು ಏನು… ಹೀಗೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.
ಸರಿಸುಮಾರು 30ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಂತ ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಬರೆದ “ಶಾನು ಭೋಗರ ಮಗಳು” ಕಾದಂಬರಿಗೆ ಚಿತ್ರ ರೂಪಕವನ್ನ ನೀಡಿದ್ದಾರೆ ನಿರ್ದೇಶಕ ಕೂಡ್ಲು ರಾಮಕೃಷ್ಣ. ಒಂದು ಕಾಲ್ಪನಿಕ ಕಥಾನಕ ಮೂಲಕ ಒಂದಷ್ಟು ಸುಷ್ಮ ವಿಚಾರಗಳನ್ನು ಹೇಳಿರುವ ರೀತಿ ಗಮನ ಸೆಳೆಯುವಂತಿದೆ. ಬ್ರಿಟಿಷರ ದಬ್ಬಾಳಿಕೆ , ಜನಸಾಮಾನ್ಯರ ಪರದಾಟ , ಸ್ವತಂತ್ರಕ್ಕಾಗಿ ಯುವ ಹೋರಾಟಗಾರರ ಕಿಚ್ಚು , ಸಂಬಂಧಗಳ ಮೌಲ್ಯ , ಸ್ನೇಹ , ಪ್ರೀತಿ , ಮಮಕಾರ , ತ್ಯಾಗ ಹೀಗೆ ಒಂದಷ್ಟು ವಿಚಾರ ಎಲ್ಲರೂ ಗಮನಿಸುವ ರೀತಿಯಲ್ಲಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು. ಇಂಥ ಸಂದೇಶ ಪೂರ್ವ , ಕಳಕಳಿಯ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಆಲೋಚನೆ ಮೆಚ್ಚುವಂತದ್ದು , ಇನ್ನು ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ. ಅದೇ ರೀತಿ ಆಯಾ ಕಾಲಘಟ್ಟದ ಸೊಬಗನ್ನ ಸೆರೆ ಹಿಡಿಯುವುದರಲ್ಲಿ ಕ್ಯಾಮೆರಾ ಕೈಚಳಕ ಯಶಸ್ವಿಯಾಗಿದೆ. ಸಂಕಲನ ಸೇರಿದಂತೆ ತಾಂತ್ರಿಕ ವರ್ಗ ಬಹಳಷ್ಟು ಶ್ರಮ ಪಟ್ಟಿದೆ.
ಈ ಚಿತ್ರದ ಕೇಂದ್ರ ಬಿಂದು ಶರಾವತಿ ಪಾತ್ರಧಾರಿ ರಾಗಿಣಿ ಪ್ರಜ್ವಲ್ ಬಹಳ ಮುದ್ದಾಗಿ ತೆರೆಯ ಮೇಲೆ ಕಾಣುವುದರ ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ನೋವು ನಲಿವಿನ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು , ಡಬ್ಬಿಂಗ್ ಸಂದರ್ಭದಲ್ಲಿ ಪಾತ್ರಕ್ಕೆ ಇನ್ನಷ್ಟು ಜೀವ ನೀಡಬಹುದಿತ್ತು.
ಇನ್ನು ಶರಾವತಿಯ ಗಂಡನ ಪಾತ್ರಧಾರಿ ನಿರಂಜನ್ ಶೆಟ್ಟಿ , ಮಾವನಾಗಿ ರಮೇಶ್ ಭಟ್ , ಅತ್ತೆಯಾಗಿ ಸುಧಾ ಬೆಳವಾಡಿ ಸೇರಿದಂತೆ ತಂದೆ , ತಾಯಿ, ಸೋದರರು ಸೇರಿದಂತೆ ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವಾಗಿ ಈ ಚಿತ್ರದ ಸುಲ್ತಾನ್ ಪಾತ್ರಧಾರಿ ಕಿಶೋರ್ ಕುಮಾರ್ ನಟನೆ ಅದ್ಭುತವಾಗಿದೆ. ಚಿತ್ರದ ಪ್ರಮುಖ ತಿರುವಿಗೆ ಸೂತ್ರಧಾರಿಯಾಗಿ ರಾರಾಜಿಸಿದ್ದಾರೆ. ಒಟ್ಟಿನಲ್ಲಿ ಹೆಣ್ಣು ಮಗಳೊಬ್ಬಳ ಬದುಕು ಬವಣೆ , ಆತ್ಮಸ್ಥೈರ್ಯ , ಸಹಾಯ , ಪ್ರೀತಿ , ದೃಢ ನಿಲುವಿನ ಜೊತೆ ದೇಶಅಭಿಮಾನ ಸಾರುವಂತಹ ಈ ಚಿತ್ರವು ಈಗಿನ ಕಾಲಘಟ್ಟಕ್ಕೆ ಎಷ್ಟು ಸೂಕ್ತವೋ ಪ್ರೇಕ್ಷಕರನ್ನ ಸೆಳೆಯುವುದಕ್ಕೆ ಅನಿಸಿದ್ದರೂ , ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.