ನಿಷ್ಕಲ್ಮಶ ಪ್ರೀತಿಯಲ್ಲಿ ವಿಧಿಯ ಆಟ ‘1990s’ (ಚಿತ್ರವಿಮರ್ಶೆ- ರೇಟಿಂಗ್ : 3.5 / 5)
ರೇಟಿಂಗ್ : 3.5 / 5
ಚಿತ್ರ : 1990s
ನಿರ್ದೇಶಕ : ನಂದಕುಮಾರ್
ನಿರ್ಮಾಣ : ಮನಸ್ಸು ಮಲ್ಲಿಗೆ ಕಂಬೈನ್ಸ್
ಸಂಗೀತ : ಮಹಾರಾಜ
ಛಾಯಾಗ್ರಹಣ : ಹಾಲೇಶ್
ತಾರಾಗಣ : ಅರುಣ್ , ರಾಣಿ ವರದ್ , ಶಿವಾನಂದ. ಬಿ ., ಸ್ವಪ್ನ ಶೆಟ್ಟಿಗಾರ್ , ದೇವ್ ಹಾಗೂ ಮುಂತಾದವರು…
ಪ್ರೀತಿ ಅಜರಾಮರ… ಎಲ್ಲಾ ಕಾಲಕ್ಕೂ ನಿಷ್ಕಲ್ಮಶವಾದ ಪ್ರೀತಿ ಎಂದೆಂದಿಗೂ ಜೀವಂತ. ಪ್ರೀತಿಗಿರುವ ಶಕ್ತಿಯೇ ಅಂತದ್ದು , ಮೊದಲ ನೋಟ , ಆಕರ್ಷಣೆ , ಮನದ ತಳಮಳ , ಭಯ , ಆತಂಕದ ನಡುವೆ ಪ್ರೀತಿಯ ಸೆಳೆತವು ಪ್ರೇಮಿಗಳನ್ನ ಕಟ್ಟಿ ಹಾಕುವುದಂತು ಸತ್ಯ. ಅಂತದ್ದೇ ಒಂದು ನಿರ್ಮಲ ಮನಸ್ಸಿನ ಪ್ರೇಮ ಕಥಾನಕದ ಮೂಲಕ 90ರ ಕಾಲಘಟ್ಟದ ಪ್ರೇಮಿಗಳ ತವಕ , ತಳಮಳ , ಕಣ್ಸನ್ನೆಯ ನೋಟ , ಆತಂಕದ ನಡುವೆ ನೋವು- ನಲಿವಿನ ಸುತ್ತ ಕುಟುಂಬಗಳ ಪರದಾಟಕ್ಕೆ ಸಿಗುವ ವಿಧಿಯ ಉತ್ತರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “1990s”.
ಬಾಲ್ಯದಿಂದಲೇ ಯಾರ ಮಾತಿಗೂ ಜಗ್ಗದೆ ತನ್ನಿಷ್ಟದಂತೆ ಬೆಳೆಯುವ ಯುವಕ ಮುನಿ (ಅರುಣ್). ತನ್ನೂರಿನ ಆತ್ಮೀಯ ಗೆಳೆಯರ ಟೈಗರ್ ಆಗಿ ಯಾವುದೇ ವಿಚಾರವಾಗಲಿ ಎದೆ ಕೊಟ್ಟಿ ಧೈರ್ಯದಿಂದ ಮುಂದೆ ನಿಲ್ಲುತ್ತಾನೆ. ಮೇಷ್ಟ್ರು ಮಗನಾಗಿದ್ದರೂ ವಿದ್ಯೆಯಲ್ಲಿ ನೈವೇದ್ಯ. ಇದರ ನಡುವೆ ಶಾಸ್ತ್ರೀಯ ಮಗಳು ಪ್ರತಿಭಾ ( ರಾಣಿ ವರದ್) ವಿದ್ಯಾವಂತೆ , ಮೃದು ಸ್ವಭಾವದ ಹುಡುಗಿ.
ಬಾಲ್ಯದ ತುಂಟಾಟ , ಹಠ , ಮೊಂಡತನದ ಟೈಗರ್ (ಪಾಪು) ನಡುವಳಿಕೆ ಪ್ರತಿಭಾಗೆ ಗೊತ್ತಿದ್ದರೂ ದೂರ ಇರುತ್ತಾಳೆ. ಆದರೆ ಟೈಗರ್ ಗೆ ಆಕೆಯ ನೋಟ , ನಡುವಳಿಕೆಗೆ ಮನಸೋತು ಇಷ್ಟಪಡುತ್ತಾನೆ. ಪ್ರತಿಭಾ ಮುಂದೆ ಹೇಳಲು ಚಡಪಡಿಸುತ್ತಾನೆ. ಒಂದಷ್ಟು ಸಂದರ್ಭಗಳು ಎದುರಾದರೂ ಗೆಳೆಯರ ಸಹಕಾರವಿದ್ದರೂ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳಲಾಗದೆ ಕಂಗಾಲಾಗುತ್ತಾನೆ.
ಮೌನವಾಗಿ ಎಲ್ಲವನ್ನ ಗಮನಿಸುವ ಪ್ರತಿಭಾ ಜಾತಿ ಹಾಗೂ ಅಂತಸ್ಥನ ಬದಿಗಿಟ್ಟು ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ. ಈ ವಿಚಾರ ಎರಡು ಕುಟುಂಬಗಳಲ್ಲಿ ಆತಂಕ ಸೃಷ್ಟಿ ಮಾಡುತ್ತದೆ. ಇದರ ನಡೆಯುವ ಎಲ್ಲದಕ್ಕೂ ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ ಒಂದು ವಿಷಕಾರಿ ಸಂದರ್ಭ ಎದುರಾಗಿ ವಿಧಿಯ ಆಟ ಎಂತದು ಎಂಬುದನ್ನು ತೆರೆದಿಟ್ಟಿದ್ದೆ. ಅದು ಏನು… ಹೇಗೆ… ಯಾಕೆ … ಎಂದು ನೀವು ಚಿತ್ರ ನೋಡಿದಾಗ ತಿಳಿಯುತ್ತದೆ.
90ರ ಕಾಲಘಟ್ಟದ ಪ್ರೇಮಿಗಳ ಪ್ರೀತಿ , ಆಕರ್ಷಣೆ , ಕಲರವದ ಜೊತೆಗೆ ಬದುಕಿನಲ್ಲಿ ವಿಧಿಯ ಆಟ ತೋರುವ ದಾರಿಯನ್ನ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಕಥೆ ಪ್ರಸ್ತುತಕ್ಕೆ ಎಷ್ಟು ಸೂಕ್ತ ಎಂಬುದರ ಜೊತೆಗೆ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬೇಕಿತ್ತು. ಚಿತ್ರದ ಓಟ ನಿಧಾನಗತಿ ಆಗಿದ್ದು , ಕೆಲವೊಂದು ಸನ್ನಿವೇಶಗಳು ಮನಸನ್ನ ಸೆಳೆಯುತ್ತದೆ. ನಿರ್ಮಾಣದ ಖರ್ಚು ತೆರೆಯ ಮೇಲೆ ಕಾಣುತ್ತದೆ.
ಇನ್ನು ಸಂಗೀತ ಕಥೆಗೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿಬಂದಿದೆ. ಅದೇ ರೀತಿ ಛಾಯಾಗ್ರಾಹಕರ ಕೈಚಳಕ ಸೊಗಸಾಗಿದೆ. ತಾಂತ್ರಿಕವಾಗಿ ಇನ್ನು ಹೆಚ್ಚು ಗಮನ ಕೊಡಬಹುದಿತ್ತು. ಇನ್ನು ನಾಯಕನಾಗಿ ಅಭಿನಯಿಸಿರುವ ಅರುಣ್ ತಮ್ಮ ಪ್ರತಿಭೆಯನ್ನು ಹೊರಹಾಕಲು ಬಹಳಷ್ಟು ಶ್ರಮಪಟ್ಟಿದ್ದಾರೆ.
ನಾಯಕಿಯಾಗಿ ಕಾಣಿಸಿಕೊಂಡಿರುವ ರಾಣಿ ವರದ್ ತೆರೆಯ ಮೇಲೆ ಹಳ್ಳಿ ಸೊಗಡಿನ ಕಥೆಗೆ ಮುದ್ದಾಗಿ ಕಾಣುತ್ತಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಬರುವ ತಂದೆ , ತಾಯಿ ಹಾಗೂ ಸ್ನೇಹಿತರ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದೆ. ಒಟ್ಟಾರೆ ಪ್ರೇಮಿಗಳು ಹಾಗೂ ಪ್ರೀತಿಸುವ ಹೃದಯಗಳಿಗೆ ಇಷ್ಟವಾಗುವ ಈ ಚಿತ್ರವನ್ನು ತಾಳ್ಮೆ ಇದ್ದವರು ಒಮ್ಮೆ ನೋಡಬಹುದು.