Cini NewsSandalwoodTV SerialUncategorized

ಐತಿಹಾಸಿಕ ಮೈಲಿಗಲ್ಲು ಕನ್ನಡದ ಮೊದಲ ಕೃತಕ ಬುದ್ಧಿಮತ್ತೆ (AI) ಸಿನಿಮಾ ‘ಲವ್ ಯು’ ತೆರೆಗೆ ಸಿದ್ಧ.

ಜಗತ್ತಿನಲ್ಲಿ ಈಗ ಎಲ್ಲಿ ನೋಡಿದರೂ ಕೃತಕ ಬುದ್ಧಿಮತ್ತೆ (ಎ. ಐ)ಯದ್ದೇ ಮಾತು. ನಿಧಾನವಾಗಿ ಒಂದೊಂದೇ ಕ್ಷೇತ್ರವನ್ನು ಆವರಿಸಿಕೊಂಡು ಬರುತ್ತಿರುವ ಕೃತಕ ಬುದ್ಧಿಮತ್ತೆ (ಎ. ಐ) ಕೆಲ ಸಮಯದ ಹಿಂದೆಯೇ ಚಿತ್ರರಂಗವನ್ನೂ ಸ್ಪರ್ಶಿಸಿದೆ. ಈಗಾಗಲೇ ಸಿನಿಮಾಗಳ ಹಲವು ವಿಭಾಗಗಳಲ್ಲಿ, ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎ. ಐ ಬಳಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಒಂದು ಚಿತ್ರತಂಡ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕವೇ ತಯಾರಾದ ‘ಲವ್ ಯು’ ಎಂಬ ಹೆಸರಿನ ಮೊದಲ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.

‘ಲವ್ ಯು’ ಎಂಬ ಹೆಸರಿನ ಈ ಸಿನಿಮಾವನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಬಳಸಿ ನಿರ್ಮಿಸಲಾಗಿದೆ. ಈಗಾಗಲೇ ಜಗತ್ತಿನ ಅನೇಕ ಚಿತ್ರರಂಗಗಳಲ್ಲಿ, ಸಿನಿಮಾಗಳ ವಿವಿಧ ವಿಭಾಗಗಳಲ್ಲಿ ಎ. ಐ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಾದರೂ, ಸಂಪೂರ್ಣವಾಗಿ ಎ. ಐ ಮೂಲಕವೇ ಇಡೀ ಸಿನಿಮಾವನ್ನು ನಿರ್ಮಿಸುವ ಸಾಹಸ ಎಲ್ಲಿಯೂ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸಂಪೂರ್ಣ ಎ. ಐ (AI) ತಂತ್ರಜ್ಞಾನವನ್ನೇ ಬಳಸಿಕೊಂಡು ‘ಲವ್ ಯು’ ಸಿನಿಮಾವನ್ನು ತಯಾರಿಸಲಾಗಿದೆ.

‘ಈ ಸಿನಿಮಾದ ನಿರ್ದೇಶಕರು, ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎ. ಐ (AI) ತಂತ್ರಜ್ಞಾನವೇ ಮಾಡಿರುವುದು ಇದರ ಮೊದಲ ವಿಶೇಷತೆ. ಇದು ವಿಶ್ವದಲ್ಲಿಯೇ ಸಂಪೂರ್ಣ ಎ. ಐ (AI) ನಿರ್ಮಿತ ಮೊದಲ ಸಿನಿಮಾ’ ಎನ್ನುತ್ತಾರೆ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿರುವ ಎಸ್. ನರಸಿಂಹ ಮೂರ್ತಿ.

‘ನಮ್ಮ ‘ಲವ್ ಯು’ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎ. ಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೂತನ್ ಎಂಬ ಎ. ಐ (AI) ಇಂಜಿನಿಯರ್ ತಮ್ಮ ತಾಂತ್ರಿಕ ನಾಯಕತ್ವ ಮತ್ತು ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನಿಮಾ ಸೃಜನಶೀಲವಾಗಿ ಮೂಡಿಬಂದಿದೆ’ ಎಂಬುದು ‘ಲವ್ ಯು’ ಎ. ಐ (AI) ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ ಮಾತು.

ಅಂದಹಾಗೆ, 95 ನಿಮಿಷಗಳ ‘ಲವ್ ಯು’ ಎ. ಐ (AI) ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ. ಅವೆಲ್ಲವೂ (AI) ಮೂಲಕ ಸಂಯೋಜಿಸಲ್ಪಟ್ಟು, ಮುದ್ರಣಗೊಂಡಿವೆ. ಈಗಾಗಲೇ ‘ಲವ್ ಯು’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಸಿನಿಮಾವನ್ನು ಇತ್ತೀಚೆಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ‘ಲವ್ ಯು’ ಎ. ಐ (AI) ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. ಈ ಮೂಲಕ ಸಂಪೂರ್ಣ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕ ತಯಾರಾದ ‘ಲವ್ ಯು’ ಸಿನಿಮಾ ಥಿಯೇಟರಿನಲ್ಲಿ ಬಿಡುಗಡೆಯಾಗಲು ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ತಮ್ಮ ಇಂಥದ್ದೊಂದು ಸಿನಿಮಾ ಯೋಜನೆಯ ಬಗ್ಗೆ ಮಾತನಾಡಿರುವ ‘ಲವ್ ಯು’ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ, ‘ಇದು ಕೇವಲ ಸಿನಿಮಾ ಅಲ್ಲ, ಇದೊಂದು ಕ್ರಾಂತಿ. ಕಥೆ ಹೇಳುವಿಕೆ ಮತ್ತು ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ನಮ್ಮ ಚಿತ್ರರಂಗ ಉಳಿದ ಚಿತ್ರರಂಗಗಳನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನಮಗಿದೆ. ಇಂಥದ್ದೊಂದು ಕೆಲಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಸದ್ಯ ಸೆನ್ಸಾರ್ ನಿಂದ ಪಾಸ್ ಆಗಿರುವ ಕೃತಕ ಬುದ್ಧಿಮತ್ತೆ (AI) ಸಿನಿಮಾ ‘ಲವ್ ಯು’ ವನ್ನು ಇದೇ ಮೇ ಅಥವಾ ಜೂನ್ ವೇಳೆಗೆ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಒಟ್ಟಾರೆ ಜಗತ್ತಿನ ಮೊದಲ ಸಂಪೂರ್ಣ ಎ. ಐ ನಿರ್ಮಿತ ಸಿನಿಮಾ ಎಂಬ ಹೆಗ್ಗಳಿಕೆ ಹೆೊತ್ತಿರುವ ‘ಲವ್ ಯು’ ತೆರೆಮೇಲೆ ಹೇಗಿರಲಿದೆ ಎಂಬುದು ಸಿನಿಮಾ ಥಿಯೇಟರಿಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

error: Content is protected !!