ನವರಸನ್ ನಿರ್ಮಾಣದ “ಸೂತ್ರಧಾರಿ” ಗೆ ಸೆನ್ಸಾರ್ ಗ್ರೀನ್ ಸಿಗ್ನಲ್.
ದಕ್ಷಿಣ ಭಾರತದಲ್ಲಿ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಸಾಕಷ್ಟು ಇವೆಂಟ್ ಗಳನ್ನು ನಡೆಸುತ್ತಿರುವ ಹಾಗೂ ಇತ್ತೀಚೆಗೆ “CWKL” “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಅದ್ದೂರಿಯಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ನವರಸನ್ ತಮ್ಮ ಈಗಲ್ ಮೀಡಿಯಾ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರ “ಸೂತ್ರಧಾರಿ”. ಇದು ನವರಸನ್ ಅವರ ನಿರ್ಮಾಣದ ಐದನೇ ಚಿತ್ರ. ತಮ್ಮ ಗಾಯನ ಹಾಗೂ ಸಂಗೀತ ನಿರ್ದೇಶನದ ಮೂಲಕ ಮೋಡಿ ಮಾಡಿರುವ ಚಂದನ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 9 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಟ್ರೆಂಡಿಂಗ್ ನಲ್ಲಿದೆ. “ಡ್ಯಾಶ್” ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಮೋಡಿ ಮಾಡಿರುವ “ಸೂತ್ರಧಾರಿ” ಚಿತ್ರದ ಬಿಡುಗಡೆಗೆ ಚಂದನ್ ಶೆಟ್ಟಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ “ಸೂತ್ರಧಾರಿ” ಚಿತ್ರಕ್ಕಿದೆ. ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ. ಸಂಜನಾ ಆನಂದ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ, ಪ್ರಶಾಂತ್ ನಟನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.