“ಖದೀಮ”ನ ಕಳ್ಳನ ಆಟ… ಪ್ರೀತಿಯ ಪಾಠ…(ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಖದೀಮ
ನಿರ್ದೇಶಕ : ಸಾಯಿ ಪ್ರದೀಪ್
ನಿರ್ಮಾಪಕರು : ಸಿವ ಕುಮಾರನ್ , ಯಶಸ್ವಿನಿ. ಆರ್
ಸಂಗೀತ : ಶಶಾಂಕ್ ಶೇಷಗಿರಿ
ಛಾಯಾಗ್ರಹಣ : ನಾಗಾರ್ಜುನ . ಆರ್. ಡಿ
ತಾರಾಗಣ : ಚಂದನ್, ಅನುಷಾ ಕೃಷ್ಣ , ಶೋಭರಾಜ್, ಗಿರಿಜಾ ಲೋಕೇಶ್, ಅರಸು, ಮುಖ್ಯಮಂತ್ರಿ ಚಂದ್ರು, ಯಶ್‌ಶೆಟ್ಟಿ, ಮಿಮಿಕ್ರಿ ದಯಾನಂದ್ ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಂದು ತಿರುವು ಎದುರಾಗುತ್ತದೆ. ನಾವು ಬಯಸಿದ್ದು ಒಂದಾದರೆ… ನಮಗೆ ಸಿಗುವುದೇ ಮತ್ತೊಂದು ಆಗಿರುತ್ತದೆ. ದಿಕ್ಕು ದೆಸೆ ಇಲ್ಲದ ಕಳ್ಳನ ಬದುಕಿನಲ್ಲಿ ಪ್ರೀತಿಯ ಹೂ ಅರಳಿದಾಗ ಆಗುವ ಬದಲಾವಣೆ ಸುತ್ತ ರಾಜಕೀಯದ ಸಂಚು , ಪುಂಡರ ಅಟ್ಟಹಾಸ , ವಾತ್ಸಲ್ಯದ ಮಮಕಾರ , ಸ್ನೇಹಿತರ ಸಹಕಾರ , ಜನರಿಗಾಗಿ ಗುದ್ದಾಟದ ಸುಳಿಯಲ್ಲಿ ಸಾಗುವ ಮಾರ್ಕೆಟ್ ವಾಸಿಗಳ ಬದುಕು ಭಾವನೆಯ ಕಥನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಖದೀಮ”.
ನಿತ್ಯ ವ್ಯಾಪಾರದ ವಹಿವಾಟಿನ ಪ್ರದೇಶ ಮಾರ್ಕೆಟ್. ಕೆಲವರು ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಮತ್ತೆ ಕೆಲವು ಮಂದಿ ಕದ್ದ ವಸ್ತುಗಳನ್ನ ಮಾರಾಟ ಮಾಡುವುದೇ ಬದುಕು. ಇದೇ ಸ್ಥಳದಲ್ಲಿ ಬಿಡಾರ ಮಾಡಿಕೊಂಡು , ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ರಾಜಕೀಯ ನಾಯಕರ ಬಂಟನಾಗಿ ಓಡಾಡುತ್ತಾ ಮಾರ್ಕೆಟ್ ಏರಿಯಾದಲ್ಲಿ ಸದ್ದು ಮಾಡುವವನೇ ಸೂರ್ಯ (ಚಂದನ್). ತನ್ನ ಗೆಳೆಯರೊಟ್ಟಿಗೆ ವಾಸ ಮಾಡುತ್ತಾ , ತನ್ನನ್ನ ಬೆಳೆಸಿದಂತ ತಾತ ಅಜ್ಜಿಯ ಹೋಟೆಲ್ ಈ ಗ್ಯಾಂಗ್ ಗೆ ಅಡ್ಡವಾಗಿರುತ್ತದೆ.
ಗೆಳೆಯನ ಪ್ರೀತಿಗೆ ಚುಡಾಯಿಸುವ ಸೂರ್ಯ ಆಕಸ್ಮಿಕವಾಗಿ ರಂಗ ಕಲಾವಿದೆ ಪ್ರಕೃತಿ (ಅನುಷಾ ಕೃಷ್ಣ) ನೋಟಕ್ಕೆ ಮನಸೋತು ಪ್ರೀತಿಯಲ್ಲಿ ಮುಳುಗುತ್ತಾನೆ.ಇದರ ನಡುವೆ ಪರ್ಸನಲ್ ಲೋನ್ ನೀಡಲು ಮುಂದಾಗುವ ಬ್ಯಾಂಕ್ ಹುಡುಗಿಗೆ ಡುಪ್ಲಿಕೇಟ್ ದಾಖಲಾತಿಯನ್ನು ನೀಡಿ ಹಣ ಪಡೆದು ವಂಚಿಸಿರುತ್ತಾನೆ. ಹಾಗೆಯೇ ಮಾರ್ಕೆಟ್ ಜನರ ಕಷ್ಟ ಸುಖಕ್ಕೆ ಸ್ಪಂದಿಸುವಂತಹ ವ್ಯಕ್ತಿ ಎಂದು ಭಾವಿಸಿ ಲೋಕಲ್ ಲೀಡರ್ ರೆಡ್ಡಿ (ಶೋಭ್ ರಾಜ್) ಬಂಟನಾಗಿ ಸೂರ್ಯ ಮಾರ್ಕೆಟ್ ಜನರನ್ನ ಒಗ್ಗೂಡಿಸಿ ಕಾರ್ಪೊರೇಟರ್ ಎಲೆಕ್ಷನ್ ಸಮಯಕ್ಕೆ ಮತ ಹಾಕುವಂತೆ ಪ್ರೇರೇಪಿಸುತ್ತಾನೆ.
ಇದರ ನಡುವೆ ಸೂರ್ಯ ಹಾಗೂ ಪ್ರಕೃತಿಯ ಪ್ರೀತಿ ಗಾಢವಾಗಿ ಹೋಗುತ್ತಿರುವಾಗಲೇ , ಒಮ್ಮೆ ಸೂರ್ಯ ಒಬ್ಬ ಕಳ್ಳ ಎಂಬ ವಿಷಯ ತಿಳಿದು ಕಣ್ಣೀರಾಕುತ್ತಲೇ ಅವನಿಂದ ದೂರ ಹೋಗುತ್ತಾಳೆ. ಅದಕ್ಕೂ ಒಂದು ಬಲವಾದ ಕಾರಣವಿರುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸೂರ್ಯನ ಬದುಕಿಗೆ ಒಂದು ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ.
ಸೂರ್ಯನಿಗೆ ಪ್ರೀತಿ ಸಿಗುತ್ತಾ…
ಪ್ರಕೃತಿಯ ಸಮಸ್ಯೆ ಏನು…
ರಾಜಕೀಯ ಕೈವಾಡ ಇದೆಯಾ
ಕ್ಲೈಮಾಕ್ಸ್ ಸತ್ಯ ಏನು…
ಇದೆಲ್ಲದಕ್ಕೂ ಉತ್ತರ ಈ ಚಿತ್ರವನ್ನು ಒಮ್ಮೆ ನೋಡಿ.
ಮಾರ್ಕೆಟ್ ನಲ್ಲಿ ವಾಸ ಮಾಡುವ ಜನರ ಬದುಕು , ಬವಣೆಯ, ಅನಾಥ ಹುಡುಗರ ಕಳ್ಳತನದ ಕೈಚಳಕ , ಅದರಲ್ಲೊಂದು ಪ್ರೀತಿಯ ಸಂಚಲನ , ಹೆಲ್ತ್ ಇನ್ಸೂರೆನ್ಸ್ ನೆಪದಲ್ಲಿ ವಂಚನೆ. ಹೀಗೆ ಒಂದಷ್ಟು ಅಂಶಗಳೊಂದಿಗೆ ಗಮನ ಸೆಳೆಯುವಂತೆ ಮಾಡಿದ್ದಾರೆ ಯುವ ನಿರ್ದೇಶಕ. ಚಿತ್ರಕಥೆ ಇನ್ನೆಷ್ಟು ಹಿಡಿತ ಮಾಡಬಹುದಿತ್ತು. ಬಂಡವಾಳ ಹೂಡಿರುವ ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಾಣುತ್ತದೆ. ಸಂಗೀತ ಗುನುಗುವಂತಿದ್ದು , ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಛಾಯಾಗ್ರಹರ ಕೈ ಚಳಕ ಉತ್ತಮವಾಗಿದೆ. ನಾಯಕನಾಗಿ ಅಭಿನಯಿಸಿರುವ ಚಂದನ್ ತಮ್ಮ ಪಾತ್ರಕ್ಕೆ ಜೀವ ಕೊಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾಯಕಿಯಾಗಿ ಅನುಷಾ ಕೃಷ್ಣ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಂದಿನಂತೆ ಶೋಭರಾಜ್ ಮಾತು ಗತ್ತಿನಲ್ಲಿ ಮಿಂಚಿದ್ದಾರೆ. ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು , ಗಿರಿಜಾ ಲೋಕೇಶ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ವಿತರಕ ವೆಂಕಟ್ ಸಾರಥ್ಯದಲ್ಲಿ ರಾಜ್ಯಾದ್ಯಂತ ಖದೀಮ ಚಿತ್ರ ಹೊರಬಂದಿದ್ದು , ಒಮ್ಮೆ ನೋಡುವಂತಿದೆ.