ಯಕ್ಷಗಾನ ವೈಭವದಲ್ಲಿ ವಿಧಿಯ ಆಟ : ವೀರ ಚಂದ್ರಹಾಸ ಚಿತ್ರವಿಮರ್ಶೆ
ಚಿತ್ರ : ವೀರ ಚಂದ್ರಹಾಸ
ನಿರ್ದೇಶಕ : ರವಿ ಬಸ್ರೂರ್
ನಿರ್ಮಾಪಕ : ರಾಜಕುಮಾರ್ ಸಂಗೀತ : ರವಿ ಬಸ್ರೂರ್
ಛಾಯಾಗ್ರಹಣ : ಕಿರಣ್ ಕುಮಾರ್
ತಾರಾಗಣ : ಶಿವರಾಜ್ ಕುಮಾರ್ , ಶಿಥಿಲ್ ಶೆಟ್ಟಿ , ಪ್ರಸನ್ನ ಶೆಟ್ಟಿಗಾರ್, ನಾಗಶ್ರೀ , ಉದಯ್ ಕಡಬಲ್ ಹಾಗೂ ಮುಂತಾದವರು…
ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯೂ ತನ್ನ ಹಿರಿಮೆ, ಗರಿಮೆ , ಆಚಾರ- ವಿಚಾರದ ಜೊತೆಗೆ ಭದ್ರ ಬುನಾದಿಯನ್ನ ಹಾಕಿದೆ. ಸಾಮಾನ್ಯವಾಗಿ ಯಕ್ಷಗಾನ ವೇದಿಕೆಯ ಮೇಲೆ ನಡೆಯುವಂತ ಕಥಾನಕ. ವೇಷ ಭೂಷಣಗಳಿಗೆ ಹೆಚ್ಚು ಹೊತ್ತು ಕೊಡುವ ಈ ಕಲೆಯು ನೇರ ನೇರ ಜನರ ಮುಂದೆ ನಡೆಯುವ ಪ್ರಸಂಗಗಳು ಹೆಚ್ಚು. ಆದರೆ ಇಂಥದ್ದೇ ಒಂದು ಕಥಾವಸ್ತು ಯಕ್ಷಗಾನದ ಹಾದಿಯಲ್ಲಿ ವೀರ ಚಂದ್ರಹಾಸ ಮೂಲಕ ದೃಶ್ಯ ವೈಭವವನ್ನ ಕಟ್ಟಿಕೊಂಡು ರಾಜ ಮಹಾರಾಜರು , ಸಾಮಂತರ ನಡುವಿನ ಸೆಣಸಾಟದ ಸುತ್ತ ವಿಧಿಯ ಆಟ ಏನು ಎಂಬುದನ್ನು ಬೆಳ್ಳಿ ಪರದೆ ಮೇಲೆ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗಿ ಈ ವಾರ ಹೊರ ತಂದಿದ್ದಾರೆ.
ಕುಂತಲ ದೇಶದ ಸಾಮ್ರಾಜ್ಯ ತನ್ನದೇ ಆದ ವೈಶಿಷ್ಟತೆಯಲ್ಲಿ ಮೆರೆಯುತ್ತಾ ಅಕ್ಕಪಕ್ಕದ ಸಾಮಂತ ರಾಜರನ್ನ ಹಿಡಿತದಲ್ಲಿ ಇಟ್ಟುಕೊಂಡು ಕಪ್ಪ ಕಾಣಿಕೆಯನ್ನು ಪಡೆಯುತ್ತ ಸುಧೀರ್ಘವಾಗಿ ಪರಂಪರೆಯನ್ನು ಕಟ್ಟಿಕೊಂಡು ಸಾಗುತ್ತಿರುತ್ತದೆ. ಈ ಸಾಮ್ರಾಜ್ಯದ ಮಂತ್ರಿ ದುಷ್ಟಬುದ್ಧಿ (ಪ್ರಸನ್ನ ಶೆಟ್ಟಿಗಾರ್) ತನ್ನ ಕೆಟ್ಟ ನಡವಳಿಕೆಯಿಂದಲೇ ನಾನು ಹೇಳಿದ್ದೇ ಶಾಸನ, ವಿಧಿಯನ್ನೇ ಜಯಿಸಬಲ್ಲೆ ಎಂಬ ಅಹಂಕಾರದಿಂದ ಮೆರೆಯುತ್ತಾನೆ.
ಭಿಕ್ಷಾಟನೆ ಮಾಡುವ ಆಶ್ರಯವೇ ಇಲ್ಲದಂತಹ ಮಗು ಒಮ್ಮೆ ದುಷ್ಟ ಬುದ್ಧಿಯ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆ ಸಮಯಕ್ಕೆ ಬರುವ ಬ್ರಾಹ್ಮಣನೂ ಈ ಬಾಲಕ ಅಸಾಮಾನ್ಯನು ಅವನ ಎಡಗಾಲದಲ್ಲಿ ಆರು ಬೆರಳುಗಳಿದೆ. ಮುಂದೆ ಈ ಸಾಮ್ರಾಜ್ಯಕ್ಕೆ ರಾಜನಾಗುವ ಯೋಗ್ಯತೆ ಇದೆ ಎನ್ನುತ್ತಾನೆ. ರಾಜವಂಶಸ್ತನಲ್ಲದ ಈ ಮಗು ಬಗ್ಗೆ ಬ್ರಾಹ್ಮಣ ಹೇಳಿದ ಮಾತು ಒಪ್ಪದಾ ದುಷ್ಟ ಬುದ್ದಿಗೆ ಅನುಮಾನ ಕಾಡುತ್ತದೆ.
ಆ ನಿಟ್ಟಿನಲ್ಲಿ ಸೈನಿಕರನ್ನು ಕರೆದು ಮಗುವನ್ನ ಕೊಲ್ಲುವಂತೆ ಆಜ್ಞೆ ಮಾಡುತ್ತಾನೆ. ಕಾಡಿಗೆ ಕರೆದೊಯ್ಯುವ ಸೈನಿಕರು ಮಗುವಿನ ಕೊನೆಯ ಬೆರಳನ್ನ ಕತ್ತರಿಸಿ ತಂದು ಮಗುವನ್ನು ಕೊಂದೆವು ಎಂದು ಹೇಳುತ್ತಾರೆ. ವರ್ಷಗಳೇ ಉರುಳಿದ ನಂತರ ವೀರ ಸಿಂಹ ಎಂಬ ಸಾಮಂತ ರಾಜನ ಅಟ್ಟಹಾಸಕ್ಕೆ ಚಂದನವತಿ ಅರಮನೆಯ ಚಂದ್ರಹಾಸ ಈ ದುಷ್ಟ ಸಾಮಂತನನ್ನ ಎದುರಿಸಿ ಶಿಕ್ಷಿಸುತ್ತಾನೆ.
ಚಂದ್ರಹಾಸನ ಸಾಹಸ ಧೈರ್ಯವನ್ನ ಮೆಚ್ಚಿ ಸಿಂಗನಲ್ಲೂರು ಸಂಸ್ಥಾನದ ಮುತ್ತುರಾಜ ಸ್ವಾಮಿಯ ಪುತ್ರ ಶಿವಪುಟ್ಟಸ್ವಾಮಿ (ಶಿವರಾಜ್ ಕುಮಾರ್) ನಾಡು , ನುಡಿ , ಹೆಣ್ಣಿಗೆ ಅನ್ಯಾಯದ ವಿಚಾರವಾಗಿ ಯಾವುದೇ ಸಮಸ್ಯೆ ಎದುರಾದರೂ ಧೈರ್ಯವಾಗಿ ಮುಂದೆ ನುಗ್ಗಿ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ ಎನ್ನುತ್ತಾರೆ. ಅದರಂತೆ ಮುಂದೆ ಸಾಗುವ ಚಂದ್ರಹಾಸನಿಗೆ ಸಿಂಹಾಸನವನ್ನು ಏರಿ ಸಾಮ್ರಾಜ್ಯ ನಡೆಸುವ ಅಧಿಕಾರ ದೊರೆಯುತ್ತದೆ.
ಕಪ್ಪ ಕಾಣಿಕೆ ಕೊಡುವ ಸಂದರ್ಭದಲ್ಲಿ ದೂತನ ಮೂಲಕ ಚಂದ್ರಹಾಸನ ಬಗ್ಗೆ ತಿಳಿದುಕೊಳ್ಳುವ ದುಷ್ಟಬುದ್ಧಿ, ಆತನನ್ನು ಕೊಲ್ಲಲು ಸೆಂಚುರೂಪಿಸುತ್ತಾನೆ. ಆದರೆ ವಿಧಿಯ ಆಟದಂತೆ ಚಂದ್ರಹಾಸ ದುಷ್ಟಬುದ್ಧಿಯ ಮಗಳು ವಿಷಯೇ(ನಾಗಶ್ರೀ) ಳನ್ನ ಮದುವೆ ಆಗುವುದಕ್ಕೆ ಆಕೆಯ ಅಣ್ಣ ಮದನರಾಯ ಹಾಗೂ ಬ್ರಾಹ್ಮಣ ಸಾಕ್ಷಿ ಆಗುತ್ತಾರೆ. ಇದರಿಂದ ಮತ್ತಷ್ಟು ಕುಪಿತ ಗೊಳ್ಳುವ ದುಷ್ಟ ಬುದ್ದಿ ಕಾಳಿಕಾ ದೇವಿಯ ಸನ್ನಿಧಿಯಲ್ಲಿ ಮತ್ತೊಂದು ಪಿತೂರಿ ಕೆಲಸ ಮಾಡುತ್ತಾನೆ. ಆದರೆ ಮುಂದೆ ಆಗುವುದು ನಿರೀಕ್ಷೆಗೂ ಮೀರಿದ್ದು. ಈ ಕಥಾನಕದಲ್ಲಿ ಇರುವ ಅಂಶಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅಪರೂಪಕ್ಕೆ ಬರುವ ಇಂತಹ ಚಿತ್ರಗಳನ್ನು ಒಮ್ಮೆ ಎಲ್ಲರೂ ನೋಡುವುದು ಉತ್ತಮ.
ನಿರ್ದೇಶಕ ರವಿ ಬಸ್ರೂರ್ ಇಂತಹ ಒಂದು ಕಥಾನಕವನ್ನು ಬೆಳ್ಳಿ ತೆರೆಗೆ ತರುವ ಪ್ರಯತ್ನ ಮಾಡಿರುವುದೇ ಅದ್ಭುತ. ಅದರಲ್ಲೂ ಯಕ್ಷಗಾನದ ವೇಷ ಭೂಷಣದಲ್ಲಿಯೇ ಕಟ್ಟಿಕೊಟ್ಟಿರುವುದು ನೋಡುವುದಕ್ಕೆ ಅದ್ಭುತವಾಗಿದೆ. ಅಹಂ , ದುರಂಕಾರ, ದ್ವೇಷ ಎಂದು ಗೆಲ್ಲುವುದಿಲ್ಲ ನಾವೆಲ್ಲರೂ ವಿಧಿಯ ಆಟದಂತೆ ನಡೆಯಬೇಕು ಎಂಬ ಸತ್ಯದ ಅರಿವನ್ನು ಮೂಡಿಸುವ ಹಾದಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಸ್ಯ ಸನ್ನಿವೇಶಗಳ ಜೋಡಣೆಯ ಮೂಲಕ ಉತ್ತಮ ಚಿತ್ರ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಆದರೆ ಪ್ರಸ್ತುತ ಕಾಲಘಟ್ಟಕ್ಕೆ ಎಷ್ಟರ ಮಟ್ಟಕ್ಕೆ ಅದು ಜನರು ಸ್ವೀಕರಿಸುತ್ತಾರೆ ಎಂಬುದೇ ಪ್ರಶ್ನೆ. ಸಂಗೀತ ಸಂಯೋಜನೆಗೆ ಬಳಸಿರುವ ಪರಿಕರಗಳ ಸದ್ದು ಜೋರಾಗಿಯೇ ಅಬ್ಬರಿಸಿದೆ. ಹಾಡುಗಳ ಸರಣಿಯೇ ಜೋರಾಗಿದೆ. ಚಿತ್ರೀಕರಣಕ್ಕಾಗಿ ಹಾಕಿರುವ ಸೆಟ್, ಛಾಯಾಗ್ರಾಹಕರ ಕೈಚಳಕ ಸೇರಿದಂತೆ ತಾಂತ್ರಿಕ ವರ್ಗ ಪಟ್ಟಿರುವ ಶ್ರಮ ಕಾಣುತ್ತದೆ. ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಎಲ್ಲಾ ಯಕ್ಷಗಾನ ಕಲಾವಿದರ ನಟನೆ ರೋಮಾಂಚನವಾಗಿದೆ.
ವಿಶೇಷವಾಗಿ ನಟ ಶಿವರಾಜ್ ಕುಮಾರ್ ಕೂಡ ಪಾತ್ರಕ್ಕೆ ಹೊಂದಿಕೊಂಡು ಅದ್ಭುತವಾಗಿ ಜೀವಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಯಕ್ಷಗಾನ ಕಲಾವಿದರ ಶ್ರದ್ಧೆ ನಿಷ್ಠೆಗೆ ಮೆಚ್ಚುಗೆ ಸಲ್ಲಲೇ ಬೇಕು. ಇನ್ನು ವಿಶೇಷ ಎಂದರೆ ಚಂದ್ರಹಾಸ ಭಾಗ 2ಕ್ಕೂ ದಾರಿ ಮಾಡಿಕೊಟ್ಟಿದ್ದು, ಮತ್ತಷ್ಟು ಸಾಮಂತ ರಾಜರ ಆರ್ಭಟ , ಅಬ್ಬರ ಕಥಾನಕದಲ್ಲಿ ಚಂದನ್ ಶೆಟ್ಟಿ, ಪುನೀತ್, ಗರುಡರಾಮ್ ಪಾತ್ರಗಳು ಪ್ರಮುಖ ಘಟ್ಟದಲ್ಲಿ ಬರುತ್ತಿದೆ. ಇದೆ ಮೊದಲ ಬಾರಿಗೆ ಯಕ್ಷಗಾನ ಕಥೆಯೊಂದು ತೆರೆಗೆ ಬರುತ್ತಿದ್ದು , ಮುಂದುವರೆದ ಭಾಗವು ಕುತೂಹಲವನ್ನ ಮೂಡಿಸಿದ್ದು, ಪ್ರೇಕ್ಷಕರು ಬಂದು ಒಮ್ಮೆ ಈ ಕಥಾನಕವನ್ನು ನೋಡಬೇಕು.