ಸುಖ ದುಃಖದ ನಡುವೆ ವಾಸ್ತವತೆಯ ಬೆಳಕು… ಫೈರ್ ಫ್ಲೈ ಚಿತ್ರವಿಮರ್ಶೆ (ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ಫೈರ್ ಫ್ಲೈ
ನಿರ್ದೇಶಕ : ವಂಶಿ ಕೃಷ್ಣ
ನಿರ್ಮಾಪಕಿ : ನಿವೇದಿತಾ ಶಿವರಾಜ್‌ಕುಮಾರ್
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಅಭಿಲಾಷ್
ತಾರಾಗಣ : ವಂಶಿ ಕೃಷ್ಣ , ಸುಧಾರಾಣಿ, ಅಚ್ಯುತ್ ಕುಮಾರ್, ರಚನಾ ಇಂದರ್, ಶಿವರಾಜ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ , ಆನಂದ್ ನೀನಾಸಂ ಹಾಗೂ ಮುಂತಾದವರು…
ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗಿದ್ದರೆ ಬದುಕೇ ಸೊಗಸು. ಒಮ್ಮೆ ಬಾಳಲ್ಲಿ ಏರುಪೇರಾದರೆ ಮುಂದೆ ಎದುರಾಗುವ ಸುಖ ದುಃಖದ ಸಂಕಷ್ಟಗಳೇ ದೊಡ್ಡ ಸರಮಾಲೆಯಂತೆ ಕಾಣುತ್ತದೆ. ಅಂತದ್ದೇ ಒಬ್ಬ ಹುಡುಗನ ಬದುಕಲ್ಲಿ ಎದುರಾಗುವ ದುರಂತ ಘಟನೆ ಏನೆಲ್ಲಾ ಎಡವಟನ್ನ ಮಾಡುತ್ತದೆ.
ಸಂಬಂಧಿಕರು , ಸ್ನೇಹಿತರು ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎಂಬುವುದರ ಜೊತೆಗೆ ಬದುಕಿನಲ್ಲಿ ಯಾವುದರ ಬಗ್ಗೆ ಗಮನ ಹರಿಸಬೇಕು , ಮಿಂಚುಹುಳದಂತೆ ಹೇಗೆ ಬೆಳಕಿನ ದಾರಿ ಕಂಡು ಕೊಳ್ಳಬೇಕು ಎಂದು ಹೇಳಲು ಈ ವಾರ ಪರದೆಯ ಮೇಲೆ ಬಂದಿರುವಂತಹ ಚಿತ್ರ “ಫೈರ್ ಫ್ಲೈ”. ನಾಲ್ಕು ವರ್ಷಗಳ ನಂತರ ವಿದೇಶದಿಂದ ಬರುವ ವಿಕಿ (ವಂಶಿಕೃಷ್ಣ). ತಂದೆ ತಾಯಿ (ಅಚ್ಚುತ್ ಕುಮಾರ್ , ಸುಧಾರಾಣಿ)ಯ ಮುದ್ದಿನ ಮಗ.
ತನ್ನ ದೊಡ್ಡಪ್ಪನ ಮಗನ ಮದುವೆಗೆ ಕಾರ್ ನಲ್ಲಿ ಹೋಗುವಾಗ ಆಕ್ಸಿಡೆಂಟ್ ನಲ್ಲಿ ಅಪ್ಪ ಅಮ್ಮ ನನ್ನ ಕಳೆದುಕೊಳ್ಳುವ ವಿಕ್ಕಿ. ಕೋಮ ಸ್ಥಿತಿಯಿಂದ ಸುಧಾರಿಸಿ ಮನೆಗೆ ಬರುವ ವಿಕ್ಕಿಯ ಸಂಬಂಧಿಕರು , ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ. ಆದರೆ ದಿನ ಕಳೆದಂತೆ ಅವನ ಮನಸ್ಥಿತಿ , ಆಲೋಚನೆ ಒಂದಷ್ಟು ಗೊಂದಲದ ಗೂಡಾಗುತ್ತದೆ.
ಇದಕ್ಕೆ ಪೂರಕವಾಗಿ ಸಂಬಂಧಿಕರ ವರ್ತನೆ ಕೂಡ ಬೇಸರವನ್ನ ತರುತ್ತದೆ. ಒಂಟಿಯಾದರೂ ತನ್ನ ಮನೆಯಲ್ಲಿ ವಾಸ ಮಾಡಬೇಕೆಂದು ನಿರ್ಧರಿಸುವ ವಿಕ್ಕಿಗೆ ಮನಪರಿವರ್ತನೆಯ ಹಾದಿಯಲ್ಲಿ ಒಂದಷ್ಟು ಕಹಿ ಸತ್ಯದ ಜೊತೆಗೆ ಬೆಳಕಿನ ಅರಿವು ತೆರೆದುಕೊಳ್ಳುತ್ತಾ ಹೋಗುತ್ತದೆ. ಒಮ್ಮೆ ನೇಹಾ (ರಚನಾ ಇಂದರ್) ಪರಿಚಯವಾಗಿ ಸ್ನೇಹದ ಮಾತುಕತೆಯ ಮೂಲಕ ಪ್ರೀತಿಸಲು ನಿರ್ಧರಿಸುತ್ತಾನೆ.
ಆದರೆ ಎಲ್ಲದಕ್ಕೂ ಸಮಯ , ಸಂದರ್ಭ ಓದಬೇಕು ಎನ್ನುವಂತಾಗುತ್ತದೆ. ಇನ್ನು ತಂದೆಯ ಜಮೀನಿಗೆ ಬರುವ ವಿಕ್ಕಿಗೆ ಬದುಕಿನ ಇನ್ನೊಂದು ರೂಪ ತಿಳಿಯುತ್ತದೆ. ಹೀಗೆ ಒಂದಕ್ಕೊಂದು ಕೊಂಡಿಯಂತೆ ಸಾಗುವ ಈ ಕಥಾನಕದಲ್ಲಿ ಹೇಳಿರುವ ಬೆಳಕು ಯಾವುದು ಎಂಬುದನ್ನ ಈ ಚಿತ್ರ ನೋಡಿದಾಗ ತಿಳಿಯುತ್ತದೆ.
ದೊಡ್ಮನೆ ಕುಟುಂಬದ ಮೊಮ್ಮಗಳು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿ ಹೊರ ಬಂದಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು , ಈಗಿನ ಜನರ ಮನಸ್ಥಿತಿ , ಸಂಬಂಧ , ಬದುಕು , ಅಸ್ತಿತ್ವದ ಬಗ್ಗೆ ಬೆಳಕನ್ನು ಚೆಲ್ಲಿದ್ದು, ಗಮನ ಸೆಳೆಯುತ್ತದೆ. ಈ ಸಂಸ್ಥೆಯಿಂದ ಇನ್ನು ನಿರೀಕ್ಷೆಯ ಚಿತ್ರ ಬೇಕಿತ್ತು ಅನಿಸುತ್ತದೆ.
ಪ್ರತಿಯೊಬ್ಬರ ಕುಟುಂಬದಲ್ಲಿ ಎದುರಾಗುವಂತ ಒಂದಷ್ಟು ಘಟನೆಗಳು ಕಾಣಸಿಗುವ ಈ ಫೈರ್ ಫ್ಲೈ ಚಿತ್ರವನ್ನು ಎಲ್ಲರಿಗೂ ಮುಟ್ಟಿಸುವ ಪ್ರಯತ್ನದ ಫಲವಾಗಿ ನಿರ್ದೇಶಕರು ಶ್ರಮ ಪಟ್ಟಿದ್ದಾರೆ. ಕಥೆಯಲ್ಲಿ ಹೊಸತನವಿಲ್ಲದಿದ್ದರೂ ಚಿತ್ರಕಥೆ ಶೈಲಿ ವಿಭಿನ್ನವಾಗಿದ್ದು, ಚಿತ್ರದ ಓಟ ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಮೊದಲ ಭಾಗಕ್ಕಿಂತ ದ್ವಿತೀಯ ಭಾಗದ ಫ್ರೀ ಕ್ಲೈಮ್ಯಾಕ್ಸ್ ಗಮನ ಸೆಳೆಯುತ್ತದೆ. ಛಾಯಾಗ್ರಾಹಕರ ಕೆಲಸ ಉತ್ತಮವಾಗಿದೆ.
ಸಂಗೀತ ತಕ್ಕಮಟ್ಟಿಗಿದೆ. ಸಂಕಲನ ಗಮನ ಸೆಳೆಯುತ್ತದೆ. ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ಕಾಣುತ್ತದೆ. ನಿರ್ದೇಶನದ ಜೊತೆಗೆ ನಟನಾಗಿ ಅಭಿನಯಿಸಿರುವ ವಂಶಿ ಕೃಷ್ಣ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಪಾತ್ರವನ್ನ ಸಮರ್ಥವಾಗಿ ನಿರ್ವಹಿಸಿ , ಭಾವನೆಗಳನ್ನ ವ್ಯಕ್ತಪಡಿಸುವ ಮೂಲಕ ಜೀವ ನೀಡಿದ್ದಾರೆ.
ನಟಿ ರಚನಾ ಇಂದರ್ ಮಿಂಚುಹುಳದಂತೆ ಬಂದು ಮಾಯವಾಗುತ್ತಾರೆ. ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವರಾಜ್ ಕುಮಾರ್ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿ ಬಂದು ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಶೀತಲ್ ಶೆಟ್ಟಿಯ ಪಾತ್ರ ಗಮನ ಸೆಳೆಯುತ್ತದೆ.
ತಂದೆ ತಾಯಿಯಾಗಿ ಅಚ್ಚುತ್ ಕುಮಾರ್ , ಸುಧಾರಾಣಿ , ದೊಡ್ಡಪ್ಪ , ದೊಡ್ಡಮ್ಮರಾಗಿ ಆನಂದ್ ನೀನಾಸಂ , ಚಿತ್ಕಲ ಬಿರಾದಾರ್ , ಜಮೀನು ಕಾಯುವ ಪಾತ್ರದಲ್ಲಿ ಮೂಗು ಸುರೇಶ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಚಿತ್ರವಾಗಿ ಫೈರ್ ಫ್ಲೈ ಹೊರ ಬಂದಿದೆ.