ಪ್ರೀತಿ , ನಂಬಿಕೆಯೇ ಅಮರ.. ‘ಅಮರ ಪ್ರೇಮಿ ಅರುಣ್’ ಚಿತ್ರವಿಮರ್ಶೆ (ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ: ಅಮರ ಪ್ರೇಮಿ ಅರುಣ್
ನಿರ್ದೇಶಕ : ಪ್ರವೀಣ್ ಕುಮಾರ್. ಜಿ
ನಿರ್ಮಾಣ : ಒಲವು ಸಿನಿಮಾ
ಸಂಗೀತ : ಕಿರಣ್ ರವೀಂದ್ರನಾಥ್
ಛಾಯಾಗ್ರಹಣ : ಪ್ರವೀಣ್
ತಾರಾಗಣ : ಹರಿಶರ್ವಾ , ದೀಪಿಕಾ ಆರಾಧ್ಯ , ಧರ್ಮಣ್ಣ ಕಡೂರು, ಕೃತಿಭಟ್, ರಂಜಿತಾ , ಮಹೇಶ್ ಬಂಗ್, ಮಂಜಮ್ಮ ಜೋಗತಿ, ಬಲ ರಾಜವಾಡಿ ಹಾಗೂ ಮುಂತಾದವರು…
ಪ್ರೀತಿ ಅನ್ನೋ ಪದವೇ ಒಂದು ರೀತಿಯ ಚೈತನ್ಯ , ನಂಬಿಕೆ ಎನ್ನಬಹುದು. ಇಷ್ಟಪಡುವ ವಸ್ತುಗಳ ಪ್ರೀತಿ , ಕುಟುಂಬದ ಪ್ರೀತಿ , ಪ್ರೇಮಿಗಳ ಪ್ರೀತಿ. ಈ ಈ ರೀತಿ ಪ್ರೀತಿ ಅನ್ನೋದು ಎಲ್ಲಿ , ಯಾವಾಗ , ಹೇಗೆ ಶುರುವಾಗುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟ.
ಆದರೆ ಇಲ್ಲೊಬ್ಬ ಯುವಕ ತನ್ನ ಬಾಲ್ಯದ ಗೆಳತಿಯಿಂದ ದೂರವಾಗಿ ಆಕೆಯ ನೆನಪಿನಲ್ಲಿಯೇ ಬೆಳೆದು ಮತ್ತೆ ಹುಡುಕುವ ಹಾದಿಯಲ್ಲಿ ಎದುರಾಗುವ ಏರುಪೇರುಗಳನ್ನ ದಾಟಿ ಮುಂದೆ ಸಾಗುವವನ ಪ್ರೇಮಿಯ ಬದುಕಿನಲ್ಲಿ ಸಿಗುವ ಉತ್ತರ ಏನು ಎಂಬುದನ್ನು ಈ ವಾರ ತೆರೆಯ ಮೇಲೆ ತೋರಿಸಲು ಬಂದಿರುವಂತಹ ಚಿತ್ರವೇ “ಅಮರ ಪ್ರೇಮಿ ಅರುಣ್”.
ತಂದೆ , ತಾಯಿ , ಅಜ್ಜಿಯೊಂದಿಗೆ ಜೀವನ ನಡೆಸುವ ಅರುಣ್ (ಹರಿಷರ್ವಾ) ಮೆಡಿಕಲ್ ರೆಪ್ರೆಸೆಂಟೇಟಿವ್ ಕೆಲಸ. ಶಾಲಾ ದಿನಗಳಲ್ಲಿ ಕಾವ್ಯ ಳನ್ನ ಇಷ್ಟಪಟ್ಟ ಅರುಣ್ ತದನಂತರ ಊರು ಬಿಟ್ಟ ಕಾರಣ ಆಕೆಯ ಸಂಪರ್ಕ ಕಳೆದುಕೊಳ್ಳುತ್ತದೆ. ಮನೆಯವರು ಮಗನ ಮದುವೆ ಮಾಡಲು ಬಹಳಷ್ಟು ಹುಡುಗಿಯರ ಫೋಟೋ ತೋರಿಸಿದರು ಯಾವುದೇ ಹುಡುಗಿ ಒಪ್ಪದ ಅರುಣ್.
ಇನ್ನು ಈತನ ಗೆಳೆಯ ಸೀನಾ (ಧರ್ಮಣ್ಣ) ಅಂಗಡಿ ವ್ಯಾಪಾರದ ನಡುವೆಯೇ ಹುಡುಗಿಯನ್ನ ಪಟಾಯಿಸುವ ಕೆಲಸ. ಇವರಿಬ್ಬರ ಗೆಳೆತನದ ಒಗ್ಗಟ್ಟೇ ಗುಟ್ಟು , ಪ್ರೇಮಿಗಳನ್ನು ಒಂದು ಮಾಡುವುದೇ ಇವರಿಬ್ಬರ ಕಾಯಕ. ಸೀನನ ಪ್ರೀತಿಗೆ ಸಹಾಯ ಮಾಡಲು ಹೋದವನಿಗೆ ತನ್ನ ಬಾಲ್ಯದ ಗೆಳತಿ ಕಾವ್ಯ (ದೀಪಿಕಾ ಆರಾಧ್ಯ) ಇರುವ ಸ್ಥಳ ತಿಳಿಯುತ್ತದೆ.
ಆಕೆಯನ್ನು ಹುಡುಕುತ್ತಾ ಅವರ ಮನೆಗೆ ಹೋಗುವ ಅರುಣ್ ಹಾಗೂ ಸೀನನಿಗೆ ಕಾವ್ಯ ತಾನು ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗಿದ್ದಾಳೆ ಎಂಬ ವಿಷಯ ತಿಳಿಯುತ್ತದೆ. ಇದರಿಂದ ಕಂಗಾಲಾಗುವ ಅರುಣ್ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಎಸ್ಕೇಪ್ ಗೆ ಯಾರು ಕಾರಣ…
ಕಾವ್ಯಳ ಪ್ರೇಮಿ ಯಾರು…
ಅರುಣ್ ಗೆ ಪ್ರೀತಿ ಸಿಗುತ್ತಾ… ಇಲ್ವಾ…
ಕ್ಲೈಮ್ಯಾಕ್ಸ್ ಒಂದಾಗೋದು ಯಾರು…
ಈ ಎಲ್ಲಾ ಉತ್ತರಕ್ಕಾಗಿ ಒಮ್ಮೆ ಈ ಅಮರ ಪ್ರೇಮಿ ಅರುಣ್ ಚಿತ್ರ ನೋಡಬೇಕು.
ನಿರ್ದೇಶಕ ಪ್ರವೀಣ್ ಕುಮಾರ್. ಜಿ. ಒಂದು ನಿಷ್ಕಲ್ಮಶ ಪ್ರೀತಿಯ ಕಥಾನಕವನ್ನು ನೇರವಾಗಿ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಬಳ್ಳಾರಿ ಭಾಗದ ಪ್ರೇಮ ಕಥಾಹಂದರವಾಗಿದ್ದು, ಅಲ್ಲಿನ ಸೊಗಡು , ಭಾಷೆ ನಡೆ-ನುಡಿ ಸೊಬಗಣ್ಣ ಅಚ್ಚುಕಟ್ಟಾಗಿ ಹೇಳಿದ್ದು,
ಪ್ರೀತಿಸುವ ಹೃದಯಗಳಿಗೆ ನಂಬಿಕೆಯೇ ಶಕ್ತಿ ಎನ್ನುವಂತೆ ನೈಜ್ಯಕೆ ಹತ್ತಿರವಾಗಿ ಗೆಳೆಯರ ಸಹಕಾರ , ಕುಟುಂಬದ ತಳಮಳದ ಜೊತೆ ಬೆಸೆದಿದ್ದಾರೆ. ಚಿತ್ರಕಥೆಯ ಓಟ ನಿಧಾನ ಗತಿಯಾಗಿದ್ದು , ಒಂದಷ್ಟು ಟ್ರಿಮ್ ಮಾಡಬೇಕಿತ್ತು ಅನಿಸುತ್ತದೆ. ಆದರೆ ಪ್ರೀತಿಸಿದವರ ಹೃದಯ ಮುಟ್ಟುವಂತಿದೆ. ಇಂತಹ ಚಿತ್ರಗಳಿಗೆ ಹಾಡುಗಳು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ಛಾಯಾಗ್ರಾಹಕರ ಕೈಚಳಕ ಸೊಗಸಾಗಿದೆ.
ಹಾಗೆಯೇ ಸಂಭಾಷಣೆ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಂತಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಹರಿಶರ್ವಾ ಬಹಳ ಸೊಗಸಾಗಿ ತನ್ನ ಪಾತ್ರದಲ್ಲಿ ಜೀವಿಸಿದ್ದಾರೆ. ಒಬ್ಬ ಪ್ರೇಮಿಯಾಗಿ ಪರದಾಡುತ್ತಾ , ಮನೆಯವರ ಕಾಟವನ್ನು ಎದುರಿಸುತ್ತ ನೈಜಕ್ಕೆ ಹೆಚ್ಚು ಒತ್ತುಕೊಟ್ಟು ನಟಿಸಿದ್ದು , ಒಬ್ಬ ಉತ್ತಮ ಪ್ರತಿಭೆ ಸಿಕ್ಕಂತಾಗಿದೆ. ಅದೇ ರೀತಿ ನಾಯಕಿಯಾಗಿ ದೀಪಿಕಾ ಆರಾಧ್ಯ ಕೂಡ ಲೀಲಾಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದು, ತನ್ನ ಮಾತಿನ ವರ್ಚಸಲ್ಲೇ ಸೆಳೆಯುತ್ತಾ , ಮುದ್ದು ಮುದ್ದಾಗಿ ತೆರೆಯ ಮೇಲೆ ಕಾಣುತ್ತಾರೆ.
ಗೆಳೆಯನಾಗಿ ಅಭಿನಯಿಸಿರುವ ಧರ್ಮಣ್ಣ ಚಟಪಟ ಮಾತಿನಲ್ಲಿ , ಹಾಸ್ಯದ ನಡುವೆ ತನ್ನ ಪ್ರೀತಿಯ ದಾರಿ ಕಂಡುಕೊಳ್ಳುವ ಜೊತೆ ತನ್ನ ಗೆಳತಿಯೊಂದಿಗೆ ಹಾಡಿ ಕುಣಿದಿದ್ದಾರೆ. ಇನ್ನು ನಾಯಕಿಯರಾದ ಅರ್ಚನಾ ಕೊಟ್ಟಿಗೆ , ಕೃತಿ ಭಟ್ ಪಾತ್ರಗಳು ಕೂಡ ಗಮನ ಸೆಳೆದಿದ್ದು , ಜೋಗತ್ತಿ ಮಠ . ಬಿ .ಮಂಜಮ್ಮ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಒಂದು ಪ್ರಾಮಾಣಿಕ ಪ್ರೀತಿಯ ಸೆಳೆತದ ಸುತ್ತ ನಡೆಯುವ ಕೌಟುಂಬಿಕ ಹಾಗೂ ಹಾಸ್ಯ ಸನ್ನಿವೇಶಗಳ ಕಥಾನಕವಾಗಿ ಹೊರಬಂದಿರುವ ಈ ಅಮರ ಪ್ರೇಮಿ ಅರುಣ್ ಚಿತ್ರವನ್ನು ಒಮ್ಮೆ ನೋಡುವಂತಿದೆ.