ಮಾದರಿ ಗ್ರಾಮಕ್ಕಾಗಿ ಕುಡುಕರ ಮುಕ್ತ ಊರು…”ದಾಸರಹಳ್ಳಿ” ಚಿತ್ರವಿಮರ್ಶೆ
ಚಿತ್ರ : ದಾಸರಹಳ್ಳಿ
ನಿರ್ದೇಶನ : ಎಂ ಆರ್. ಶ್ರೀನಿವಾಸ್
ನಿರ್ಮಾಪಕ :ಪಿ. ಉಮೇಶ್
ಸಂಗೀತ : ತ್ಯಾಗರಾಜ್
ಛಾಯಾಗ್ರಹಣ : ನಾರಾಯಣ್ , ಬಾಲು.
ತಾರಾಗಣ : ಧರ್ಮ ಕೀರ್ತಿರಾಜ್, ನೇಹಾ , ಎಂ ಎಸ್ ಉಮೇಶ್ , ಬಿರಾದರ್, ಬೆಂಗಳೂರು ನಾಗೇಶ್, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ವಿಕ್ಟರಿ ವಾಸು ಪದ್ಮಾವಸಂತಿ , ರೇಖಾ ದಾಸ್, ಥ್ರಿಲ್ಲರ್ ಮಂಜು ಹಾಗೂ ಮುಂತಾದವರು…
ದೇಶ , ರಾಜ್ಯ , ನಾವು , ನಮ್ಮದು , ನಮ್ಮವರು , ನಮ್ಮ ಊರು ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು , ನೆಮ್ಮದಿ ಸುಖ ಶಾಂತಿಯಿಂದ ಬದುಕಬೇಕೆಂಬುದು ಆಸೆ ಪಡುವುದು ಸರ್ವೇಸಾಮಾನ್ಯ. ಅಂತದ್ದೇ ಒಬ್ಬ ಹುಡುಗ ತನ್ನ ಊರು ಮಾದರಿ ಗ್ರಾಮವಾಗಬೇಕು , ಕುಡುಕ ಮುಕ್ತ ಊರಾಗಬೇಕು, ಮಹಿಳೆಯರು ನೆಮ್ಮದಿಯಿಂದ, ಮಕ್ಕಳು ವಿದ್ಯಾವಂತರಾಗಿ ಬೆಳೆಯಬೇಕೆಂಬ ಮಹದಾಸೆ ಇಟ್ಕೊಂಡು ವಿದೇಶಕ್ಕೆ ಹೋಗಿ ಹಣವನ್ನು ಸಂಪಾದಿಸಿ ತನ್ನ ಊರಿನ ಸ್ಥಿತಿಗತಿಯನ್ನು ಬದಲಿಸಲು ಮುಂದಾಗುವನ್ನ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದಾಸರಹಳ್ಳಿ”.
ವಿದ್ಯಾವಂತ ಹುಡುಗ ತೇಜಸ್ (ಧರ್ಮ ಕೀರ್ತಿರಾಜ್) ತನ್ನ ಊರನ್ನ ಮಾದರಿ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿ, ವಿದೇಶಕ್ಕೆ ಹೋಗಲು ಸಿದ್ಧನಾಗುತ್ತಾನೆ. ಇವನಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಗೆಳೆಯ ಕುಮಾರ್. ತನ್ನ ಅಣ್ಣನ ವಿರೋಧದ ನಡುವೆಯೂ ತೇಜಸ್ ನನ್ನ ಪ್ರೀತಿಸುವ ಮಯೂರಿ (ನೇಹಾ) , ಪ್ರಿಯಕರನ ನಿರ್ಧಾರಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತಾಳೆ.
ಇನ್ನು ಗ್ರಾಮದಲ್ಲಿರುವ ಗಂಡಸರ ಗುಂಪು ಕುಡಿತ, ಕಾರ್ಡ್ಸ್ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದು , ಇದನ್ನ ಸರಿಪಡಿಸಲು ಹೆಂಡತಿಯರು , ಮಕ್ಕಳು ಹರಸಹಾಸವನ್ನೇ ಪಟ್ಟರು ಏನು ಮಾಡಲಾಗದಂತ ಸ್ಥಿತಿಯ ನಡುವೆ ಗ್ರಾಮದ ಗಾಂಧಿ ವಾದಿಯ ಹಿರಿಯ ವ್ಯಕ್ತಿಗಳನ್ನು ಭೇಟಿ ಮಾಡಿ ಕುಡಿತದ ಗಂಡರನ್ನು ಕಾಪಾಡುವಂತೆ ಮನವಿ ಮಾಡುತ್ತಾರೆ.
ಇದಕ್ಕೆ ಪೂರಕವಾಗಿ ಹಿರಿಯ ವ್ಯಕ್ತಿಗಳು ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಮನವಿಯನ್ನ ಸಲ್ಲಿಸುತ್ತಾರೆ. ಇದರ ನಡುವೆ ಒಂದಷ್ಟು ಸಮಸ್ಯೆಗಳು ಎದುರಾಗಿ , ಬಾರ್ ಲೈಸೆನ್ಸ್ ವ್ಯಕ್ತಿಗಳ ಹಗ್ಗ ಜಗ್ಗಾಟದ ನಡುವೆ , ಕುಡಿತಕ್ಕೆ ಸಿಲುಕಿದವರ ಪಾಡು ಹೀಗೆ ಒಂದಷ್ಟು ಘಟನೆಗಳು ದಾಸರಹಳ್ಳಿ ಜನತೆಗಳ ತೊಂದರೆಗೆ ಕಾರಣವಾಗುತ್ತದೆ.ಮುಂದೆ ಈ ಸಮಸ್ಯೆಗೆ ಪರಿಹಾರ ಸಿಗುತ್ತಾ… ಗಾಂಧಿವಾದಿಗಳ ಮಾತು ಫಲಿಸುತ್ತಾ… ಮಾದರಿ ಗ್ರಾಮ ಆಗುತ್ತಾ… ಇದಕ್ಕೆ ಉತ್ತರ ಚಿತ್ರ ನೋಡಬೇಕು.
ಜನರಲ್ಲಿ ಜಾಗೃತಿ ಮಾಡುವಂತಹ ಚಿತ್ರವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನಿರ್ಮಾಪಕರು ಮುಂದಾಗಿರುವುದು ತಿಳಿಯುತ್ತದೆ. ಒಂದು ಊರು ಚೆನ್ನಾಗಿ ಇರಬೇಕೆಂದರೆ ಗ್ರಾಮಸ್ಥರ ಜವಾಬ್ದಾರಿ ಹೆಚ್ಚೇ ಇರುತ್ತೆ. ಜನರ ಮನಸ್ಥಿತಿ, ಆಚಾರ ವಿಚಾರ , ಅಗತ್ಯ ಸೌಲಭ್ಯ ಹೀಗೆ ಒಂದಷ್ಟು ವಿಚಾರಗಳ ನಡುವೆ ಮಾದರಿ ಗ್ರಾಮ , ಕುಡಿತ ಮುಕ್ತ ಊರು , ಮಕ್ಕಳ ಭವಿಷ್ಯ ಹೀಗೆ ಒಂದಷ್ಟು ಅಂಶಗಳು ಗಮನ ಸೆಳೆಯುವಂತೆ ಮಾಡಿದ್ದಾರೆ ನಿರ್ದೇಶಕರು.
ಕಥೆಯನ್ನು ಚಿತ್ರರೂಪಕವಾಗಿ ಹೇಳುವುದರಲ್ಲಿ ಎಡವಿದ್ದಾರೆ. ಸಾಲು ಸಾಲಾಗಿ ಬರುವ ಪಾತ್ರಗಳು ವರದಿ ಒಪ್ಪಿಸುವಂತೆ ಬಂದು ಹೋಗಿದೆ. ಇನ್ನು ಹೆಚ್ಚು ಪೂರ್ವ ತಯಾರಿ ಮಾಡಿಕೊಂಡು ಬರಬೇಕಿತ್ತು ಅನಿಸುತ್ತದೆ. ಸಂಗೀತ , ಛಾಯಾಗ್ರಹಣ , ಸಂಕಲನ ಕೆಲಸ ತಕ್ಕಮಟ್ಟಕ್ಕೆ ನಡೆದಿದೆ.
ಈ ಚಿತ್ರದಲ್ಲಿ ನಟ ಧರ್ಮ ಕೀರ್ತಿರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಕೊಡುವ ಪ್ರಯತ್ನ ಪಟ್ಟಿದ್ದಾರೆ. ನಾಯಕಿ ನೇಹಾ ಕೂಡ ಆಗಾಗ ಬಂದು ಹೋಗಿದ್ದಷ್ಟೇ ವಿಶೇಷ. ಇನ್ನು ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೆ ಅಭಿನಯಿಸಿದ್ದು, ಕೆಲವು ಪಾತ್ರಗಳು ಗಮನ ಸೆಳೆದಿದ್ದು , ಇನ್ನುಳಿದ ಪಾತ್ರಗಳು ಸಿಕ್ಕ ಡೈಲಾಗನ್ನು ಒಪ್ಪಿಸಿ ಹೋದಂತಿದೆ. ಮಿಮಿಕ್ರಿ ಗೋಪಿ ಹಾಗೂ ಮಜಾ ಟಾಕೀಸ್ ಪವನ್ ರಾಜಕೀಯ ಜುಗಲ್ ಬಂದಿ ಹಗ್ಗ ಜಗ್ಗಾಟದಂತಿದೆ. ಇನ್ನು ಆಕ್ಷನ್ ದೃಶ್ಯಗಳಲ್ಲಿ ಥ್ರಿಲ್ಲರ್ ಮಂಜು , ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಜನರಲ್ಲಿ ಜಾಗೃತಿ ನೀಡುವುದರ ಜೊತೆಗೆ ಗಮನ ಸೆಳೆಯುವ ಉದ್ದೇಶದಿಂದ ಮಾಡಿರುವ ಚಿತ್ರ ಇದಾಗಿದೆ.