ವಿಭಿನ್ನ ಪ್ರಯತ್ನದ “ಗ್ರೀನ್” ಚಿತ್ರದ ಟೀಸರ್ ಬಿಡುಗಡೆ.
ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ನೋಡಗರ ಬೆಂಬಲ ಮೊದಲಿನಿಂದಲೂ ಸಿಗುತ್ತಿದೆ. ಅಂತಹ ವಿಭಿನ್ನ ಪ್ರಯೋಗಾತ್ಮಕ ಎನ್ನಬಹುದಾದ “ಗ್ರೀನ್” ಚಿತ್ರ ಕನ್ನಡದಲ್ಲಿ ನಿರ್ಮಾಣವಾಗಿದೆ.
ರಾಜ್ ವಿಜಯ್ ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ಹಾಗೂ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ.ವಿಕ್ಕಿ ಮುಂತಾದವರು ಪ್ರಮುಖಪಾತ್ರದಲ್ಲಿ ನಟಿಸಿರುವ “ಗ್ರೀನ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಟೀಸರ್ ನೋಡಿದಾಗ “ಗ್ರೀನ್” ಒಂದು ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುವ ಚಿತ್ರ ಎನ್ನುವುದು ತಿಳಿಯುತ್ತದೆ ಹಾಗೂ ಚಿತ್ರ ನೋಡುವ ಕಾತುರವನ್ನು ಹೆಚ್ಚಿಸುತ್ತದೆ. ಟೀಸರ್ ಬಿಡುಗಡೆಯ ನಂತರ “ಗ್ರೀನ್ ” ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು.
ಚಿಕ್ಕ ವಯಸ್ಸಿನಿಂದಲೂ ದೇವರ ಬಳಿ ಪ್ರಾರ್ಥಿಸುವಾಗ ಚಿತ್ರ ನಿರ್ದೇಶಕ ಆಗಬೇಕೆಂದು ಕೇಳಿಕೊಳ್ಳುತ್ತಿದ್ದವನು ನಾನು ಎಂದು ಮಾತನಾಡಿದ ನಿರ್ದೇಶಕ & ನಿರ್ಮಾಪಕ ರಾಜ್ ವಿಜಯ್, ಕನ್ನಡದ ಕೆಲವು ನಿರ್ದೇಶಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. “ಗ್ರೀನ್” ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಸೈಕಾಲಜಿ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವೂ ಹೌದು. ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ “ಗ್ರೀನ್”.
ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಊಟಿ ಬಳಿಯಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ಕೊರೆವ ಚಳಿಯಲ್ಲಿ ಬೆಳಗ್ಗಿನ ಜಾವದವರೆಗೂ ಅಲ್ಲಿ ಚಿತ್ರೀಕರಣ ಮಾಡಿದ್ದು ವಿಶೇಷ ಅನುಭವವೇ ಸರಿ. ಇನ್ನೂ ಈಗಾಗಲೇ ಪ್ರತಿಷ್ಟಿತ ಕಾನ್ಸ್ ಚಿತ್ರೋತ್ಸವ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಗ್ರೀನ್” ಪ್ರದರ್ಶನವಾಗಿದೆ. ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿದೇಶಿಗರು ಮೆಚ್ಚಿಕೊಂಡಿರುವ ನಮ್ಮ ಚಿತ್ರವನ್ನು ಸ್ವದೇಶಿಗರು, ಅದರಲ್ಲೂ ಕನ್ನಡಿಗರು ಮೆಚ್ಚಿಕೊಳ್ಳುವ ಭರವಸೆ ಇದೆ. ಈ ಚಿತ್ರದ ಕನಸನ್ನು ನಾನು ಕಂಡೆನಾದರೂ ಇದು ನನಸಾಗಲೂ ಚಿತ್ರತಂಡದ ಸಹಕಾರ ಅಪಾರವಾಗಿದೆ. ರವಿ ಫಿಲಂಸ್ ನ ಮನೋಜ್ ಅವರು ಸದ್ಯದಲ್ಲೇ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ.
ನನಗೆ ನಿರ್ದೇಶಕರು ಸುಮಾರು ಎರಡೂವರೆ ಗಂಟೆಗಳ ಕಾಲ ಕಥೆ ಹೇಳಿದರು. ಕನ್ನಡದಲ್ಲಿ ತೀರ ಅಪರೂಪದ ಕಥೆ ಹಾಗೂ ನಾನು ಕೂಡ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಗೋಪಾಲಕೃಷ್ಣ ದೇಶಪಾಂಡೆ ತಿಳಿಸಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ. ವೀಲ್ ಚೇರ್ ಮೇಲೆ ಕುಳಿತು ನಟಿಸಿದ ಅನುಭವ ವಿಶೇಷವಾಗಿತ್ತು ಎಂದು ಆರ್ ಜಿ ವಿಕ್ಕಿ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಶಿವ ಮಂಜು, ವಿಶ್ವನಾಥ್, ಡಿಂಪಿ ಪಾದ್ಯ, ಛಾಯಾಗ್ರಾಹಕ ಮಧುಸೂದನ್ ಹಾಗೂ ಸಂಗೀತ ನಿರ್ದೇಶಕ ಶಕ್ತಿ ಸ್ಯಾಕ್ ಮುಂತಾದವರು “ಗ್ರೀನ್” ಕುರಿತು ಮಾತನಾಡಿದರು. ಮುರುಡಯ್ಯ, ರಾಮಚಂದ್ರ, ಗಿರೀಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.