ಮೂಢನಂಬಿಕೆಯ ಪರಮಾವಧಿ ‘ಆಡೇ ನಮ್ God’ (ಚಿತ್ರವಿಮರ್ಶೆ -ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ಆಡೇ ನಮ್ God
ನಿರ್ದೇಶಕ : ಪಿ.ಎಚ್. ವಿಶ್ವನಾಥ್
ನಿರ್ಮಾಪಕ : ಪ್ರೊ.ಬಿ. ಬಸವರಾಜ್, ರೇಣುಕಾ ಬಸವರಾಜ್
ಸಂಗೀತ : ಸ್ವಾಮಿನಾಥನ್
ಛಾಯಾಗ್ರಹಣ : ಪಿ.ಕೆ.ಎಚ್ ದಾಸ್
ಸಂಕಲನ : ಬಿ.ಎಸ್. ಕೆಂಪರಾಜು
ತಾರಾಗಣ: ನಟರಾಜ್ ಭಟ್ , ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ , ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ್ ಹಾಗೂ ಮುಂತಾದವರು…
ಬದುಕು ಎಲ್ಲರಿಗೂ ಪಾಠ ಕಲಿಸುತ್ತದೆ. ಎಲ್ಲಿಯವರೆಗೂ ನಂಬುವವರು ಇರುತ್ತಾರೋ… ಅಲ್ಲಿಯವರೆಗೂ ನಂಬಿಸುವವರು ಇದ್ದೇ ಇರುತ್ತಾರೆ… ಹಗಲಲ್ಲಿ ಕಂಡ ಕಂಡ ಬಾವಿಗೆ ಇರಲಲ್ಲಿ ಬಿದ್ದಂತೆ. ಈ ಚಿತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುವ ಹುಡುಗರು, ಆಕಸ್ಮಿಕವಾಗಿ ಸಿಗುವ ಆಡು , ನಂಬುವ ಭಕ್ತರು , ನಂಬಿಸುವ ಕಿಲಾಡಿಗಳ ಸುತ್ತ ಸಾಗುವ ಕಥಾಂದರವಾಗಿ ಒಂದು ಸಂದೇಶದ ಜೊತೆಗೆ ಜಾಗೃತಿಯ ಮೂಡಿಸುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಂತಹ ಚಿತ್ರ “ಆಡೇ ನಮ್ God”.
ನೆಮ್ಮದಿಯ ಬದುಕು ನಡೆಸಲು ಹರಸಾಹಸ ಪಡುವ ನಾಲ್ವರು ಗೆಳೆಯರಾದ ದಾಮೋದರ್(ನಟರಾಜ್ ಭಟ್) ತಿಪ್ಪೇಶಿ(ಅನೂಪ್ ಶೂನ್ಯ) ಶಿವಲಿಂಗು ( ಮಂಜುನಾಥ್ ಜಂಬೇ ) ತುಕಾರಾಂ ಬ್ರೋ (ಅಜಿತ್ ಬೋಪ್ಪನಲ್ಲಿ). ದೇವರ ಮೊರೆ ಹೋದರೆ ದಾರಿ ಸಿಗುತ್ತೆ ಎಂಬ ನಂಬಿಕೆಯೊಂದಿಗೆ ತಮ್ಮ ಬಳಿ ಇರುವ ಲಗೇಜ್ ವ್ಯಾನ್ನೊಂದಿಗೆ ಮುಕ್ಕೋಟೇಶ್ವರನ ದರ್ಶನ ಪಡೆಯುತ್ತಾರೆ.
ಗೆಳೆಯರು ಹಿಂತಿರುಗುವಾಗ ಮೈಸೂರಿಗೆ ಬಾಡಿಗೆ ಒಂದು ದೊರೆಯುತ್ತದೆ. ಅಚಾನಕ್ಕಾಗಿ ಆ ವಾಹನದಲ್ಲಿ ಆಡು ಮರಿ ಇರುತ್ತದೆ. ಗೆಳೆಯರು ಅದನ್ನ ದೂರ ಸಾಗಿಸಲು ಹಲವು ಬಾರಿ ಪ್ರಯತ್ನ ಮಾಡುತ್ತಾರೆ. ಆದರೆ ಆಡು ಮರಿ ಅವರ ಬಳಿ ಉಳಿಯುವ ಸ್ಥಿತಿ ಎದುರಾಗಿ ಆ ಆಡು ಮರಿ ಅವರ ಬದುಕಿಗೆ ಗಾಡ್ ಆಗಿ ದಾರಿ ಮಾಡಿಕೊಡುತ್ತದೆ.
ಆ ಮರಿಯನ್ನೇ ದೇವರ ಸ್ವರೂಪಿ, ನೆನೆಸಿದ್ದು ಕೈ ಕೊಡುತ್ತೆ ಎನ್ನುತ್ತಾ ಜನರನ್ನು ನಂಬಿಸುತ್ತಾ ದೊಡ್ಡ ಭಕ್ತ ಗಣವನ್ನು ಸೃಷ್ಟಿಸುತ್ತಾರೆ. ಆದರೆ ಒಬ್ಬ ಗೆಳೆಯ ತಿಪ್ಪೇಶಿ ಮಾತ್ರ ದುಡಿದು ಬದುಕಬೇಕು ಮೋಸ, ವಂಚನೆ ಹಣ ಉಳಿಯುವುದಿಲ್ಲ ಎನ್ನುತ್ತಾ ಹೋಟೆಲ್ ವ್ಯಾಪಾರ ಮಾಡುತ್ತ ಗೆಳೆಯರೊಟ್ಟಿಗೆ ಇರುತ್ತಾನೆ. ಇದರ ನಡುವೆ ವಾಸ್ತು ಗುರೂಜಿ (ಬಿ .ಸುರೇಶ್) ಕೂಡ ಮಾತನ್ನು ನಂಬುತ್ತಾನೆ.
ಅವನ ಬದುಕಿನಲ್ಲಿ ಆದ ಏರುಪೇರಿಗೆ ದಾರಿ ಮಾಡಿಕೊಳ್ಳಲು ಮುಂದಾಗುತ್ತಾನೆ. ಈ ಆಡು ಸ್ವಾಮಿಯ ಭಕ್ತರು ಹೆಚ್ಚಾಗಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಗೆಳೆಯರು ವಾಸವಿದ್ದ ಸ್ಥಳ ಕಲ್ಯಾಣಿಯ ಸಮೀಪವೇ ಆಡು ಸ್ವಾಮಿಯ ದೇವಸ್ಥಾನ ಮಾಡುತ್ತಾರೆ. ಮುಂದೆ ಆಡು ಸ್ವಾಮಿ ಕ್ಷೇತ್ರವಾಗಿ ರೂಪಗೊಳ್ಳುತ್ತಿದ್ದಂತೆ ಸುಂದರಿ ಒಬ್ಬಳು ನನಗೆ ಆಡು ಸ್ವಾಮಿಯ ಅನುಗ್ರಹವಾಗಿದೆ ನಾನು ಭಕ್ತೆ ಎನ್ನುತ್ತಾ ಮಾತೆ (ಸಾರಿಕಾ ರಾವ್) ಯಾಗಿ ಅಲ್ಲೇ ಉಳಿಯುತ್ತಾಳೆ. ಮುಂದೆ ಹಲವಾರು ಅಡೆತಡೆಗಳು ಎದುರಾಗಿ ಆಡು ಕ್ಷೇತ್ರದ ಸ್ಥಳ , ಗೆಳೆಯರ ಪರಿಸ್ಥಿತಿ , ಕಾಣದ ಕೈಗಳ ಮೋಸ ಹೀಗೆ ಹಲವು ವಿಚಾರಗಳು ಬೇರೆಯದೆ ದಾರಿಯನ್ನ ತೋರಿಸುತ್ತಾ ಸಾಗುತ್ತದೆ.
ಗೆಳೆಯ ಎದುರಿಸುವ ಸಮಸ್ಯೆ ಏನು…
ಆಡು ಮರಿ ಏನಾಗುತ್ತೆ…
ಯಾರ ಕೈವಾಡ ಇದಕ್ಕೆ ಕಾರಣ…
ಕ್ಲೈಮ್ಯಾಕ್ಸ್ ಸಂದೇಶ ಏನು…
ಇದೆಲ್ಲ ತಿಳಿಯಬೇಕಾದರೆ ಒಮ್ಮೆ ನೀವು ಆಡೇ ನಮ್ God ಚಿತ್ರ ನೋಡಲೇಬೇಕು.
ಬಹಳ ವರ್ಷಗಳ ನಂತರ ಒಂದೊಳ್ಳೆ ಸಂದೇಶದೊಂದಿಗೆ ಹಾಸ್ಯಮಯವಾಗಿ ಕಥೆ ಹೆಣೆದು ಬೆಳ್ಳಿ ಪರೆದ ಮೇಲೆ ತಂದಿದ್ದಾರೆ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್. ಎಲ್ಲಿಯವರೆಗೂ ನಂಬುವರು ಇರುತ್ತಾರೋ ಅಲ್ಲಿಯವರೆಗೂ ನಂಬಿಸುವವರು ಇದ್ದೇ ಇರುತ್ತಾರೆ ಎಂಬ ವಿಚಾರದೊಂದಿಗೆ ದುಡಿಮೆಯ ಬದುಕು, ಶ್ರಮವೇ ಜೀವನ , ಮಠ, ಸ್ವಾಮೀಜಿಗಳು, ಅಧಿಕಾರಿಗಳು, ರಾಜಕೀಯ ನಾಯಕರು ಸಮಾಜವನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ
ಜನಸಾಮಾನ್ಯರು ಹೇಗೆ ಎಚ್ಚರಿಕೆಯಿಂದ ಬದುಕಬೇಕು ಎಂಬುದನ್ನು ತೆರೆದಿಟ್ಟಿದ್ದಾರೆ. ಆದರೆ ಚಿತ್ರಕಥೆಯ ಓಟ ಇನ್ನಷ್ಟು ಬಿಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು. ಇಂತಹ ಚಿತ್ರವನ್ನು ನಿರ್ಮಿಸಿರುವ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಸಾಹಸ ಮೆಚ್ಚುವಂಥದ್ದು, ಅದೇ ರೀತಿ ಸಂಗೀತ , ಛಾಯಾಗ್ರಹಣ, ಹಾಗೂ ಸಂಕಲನ ಕೆಲಸವೂ ಕೂಡ ಉತ್ತಮವಾಗಿ ಮೂಡಿ ಬಂದಿದೆ.
ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ , ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಎಲ್ಲರಿಗೂ ಒಂದು ಸಂದೇಶದ ಜೊತೆಗೆ ಜಾಗೃತಿ ಮೂಡಿಸುವಂತಹ ಈ “ಆಡೇ ನಮ್ God” ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ