ಚಿತ್ರೀಕರಣ ಮುಗಿಸಿದ “chef ಚಿದಂಬರ”
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, “ರಾಘು” ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ “chef ಚಿದಂಬರ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು.
ಅಕ್ಟೋಬರ್ 10ರಂದು ಮುಕ್ತಾಯವಾಗಿದೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಆನಂದರಾಜ್, ನಮ್ಮ ಚಿತ್ರಕ್ಕೆ ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಚಿತ್ರ.
ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ತಿಳಿಸಿದರು. ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ.
ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಅನಿರುದ್ಧ್ ಜತಕರ್.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ.ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದರು ನಾಯಕಿ ರೆಚೆಲ್ ಡೇವಿಡ್.
ನಿರ್ಮಾಪಕಿ ರೂಪ ಡಿ.ಎನ್, ಛಾಯಾಗ್ರಾಹಕ ಉದಯ್ ಲೀಲಾ, ಚಿತ್ರದಲ್ಲಿ ನಟಿಸಿರುವ ಮಹಾಂತೇಶ್, ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ.
ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ “chef ಚಿದಂಬರ” ಚಿತ್ರಕ್ಕಿದೆ