ನ.10ಕ್ಕೆ “ದಿ ವೆಕೆಂಟ್ ಹೌಸ್” ಚಿತ್ರ ಬಿಡುಗಡೆ
ಸ್ಯಾಂಡಲ್‌ವುಡ್‌ನಲ್ಲಿ ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ಈ ಬ್ಯೂಟಿ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಕ್ಯಾಪ್ ತೊಟ್ಟಿರುವ ಅವರು, ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಪ್ರಯತ್ನವೀಗ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ನ.10ರಂದು ‘ದಿ ವೆಕೆಂಟ್ ಹೌಸ್’ ಚಿತ್ರ ಬಿಡುಗಡೆಯಾಗಲಿದೆ.
‘ದಿ ವೆಕೆಂಟ್ ಹೌಸ್’ ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದ್ದರೆ, ವಿಜಯ್ ರಾಜ್ ಸಂಕಲನವಿದೆ. ‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧರಿತ ಸಿನಿಮಾ ಮಾಡಲಾಗಿದೆ.
ಅಂದ್ಹಾಗೆ ಎಸ್ತರ್ ನರೋನ್ಹಾ ಮಂಗಳೂರಿನವರಾದರು. ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಕನ್ನಡ ಸಿನಿಮಾ ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಎಸ್ತರ್ ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ್ ಸಿನಿಮಾದ ಸಿಲ್ಕು ಮಿಲ್ಕು ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿರುವ ಎಸ್ತಾರ್ ಗ್ಲಾಮರ್ ನಂಬರ್ ಗೆ ಪ್ರೇಕ್ಷಕರ ಚಪ್ಪಾಳೆ ತಟ್ಟಿದ್ದಾರೆ. ರಾಜ್ಯಾದ್ಯಂತ ರಿಲೀಸ್ ಆಗಿರುವ ಇನಾಮ್ದಾರ್ ಚಿತ್ರಕ್ಕೆ ಮೆಚ್ಚುಗೆ ಸಿಕ್ತಿದೆ. ನರೋನ್ಹಾ ಕುಣಿದು ಕುಪ್ಪಳಿಸಿರುವ ಸಿಲ್ಕು ಸಖತ್ ಹಿಟ್ ಆಗಿದೆ. ಈ ಖುಷಿ ಬೆನ್ನಲ್ಲೆ ಎಸ್ತರ್ ಚೊಚ್ಚಲ ಕನಸು ದಿ ವೆಕೆಂಟ್ ಹೌಸ್ ತೆರೆಗೆ ಬರ್ತಿದೆ.