ಗರಡಿಯಲ್ಲಿ ಕುಸ್ತಿ , ಮಸ್ತಿಯ ಅಬ್ಬರ (ಚಿತ್ರ ವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಗರಡಿ
ನಿರ್ದೇಶಕ : ಯೋಗರಾಜ್ ಭಟ್
ನಿರ್ಮಾಪಕಿ : ವನಜಾ ಪಾಟೀಲ್
ಸಂಗೀತ : ವಿ. ಹರಿಕೃಷ್ಣ
ಛಾಯಾಗ್ರಹಕ : ನಿರಂಜನ್ ಬಾಬು
ತಾರಾಗಣ : ದರ್ಶನ್, ಸೂರ್ಯ , ಸೋನಾಲ್ ಮಂತೆರೋ , ಬಿ.ಸಿ. ಪಾಟೀಲ್, ರವಿಶಂಕರ್ , ಧರ್ಮಣ್ಣ , ಸುಜಯ್ ಬೇಲೂರು, ಚೆಲುವರಾಜ್, ಬಲ ರಾಜವಾಡಿ, ರಾಘವೇಂದ್ರ , ತೇಜಸ್ವಿನಿ ಪ್ರಕಾಶ್, ನಾಯನ, ನಿಶ್ವಿಕಾ ನಾಯ್ಡು ಹಾಗೂ ಮುಂತಾದವರು…
ಕಾಲಾನುಕಾಲಕ್ಕೂ ಸಾಗಿ ಬಂದ ಗರಡಿಯ ಗತ್ತು ಹಾಗೂ ತಾಕತ್ತು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗರಡಿ ಮನೆಯಲ್ಲಿ ಪಟ್ಟುಗಳನ್ನ ಕರಗತ ಮಾಡಿಕೊಳ್ಳುವುದೇ ಒಂದು ತಪಸ್ಸು. ಅಖಾಡದಲ್ಲಿ ಸ್ಪರ್ಧಿಸುವ ಪೈಲ್ವಾನ್ಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸಿ ಕೋರಪೇಟ್ ಪಟ್ಟಕ್ಕೆ ಏರುವುದೇ ಒಂದು ದೊಡ್ಡ ಸಾಧನೆ.
ಅಂತಹದ್ದೇ ಒಂದು ಎಳೆಯೊಂದಿಗೆ ಗರಡಿ ಮನೆಯ ಸುತ್ತ ನಡೆಯುವ ಕುಸ್ತಿಪಟುಗಳ ಕಸರತ್ತು , ಪಿತೂರಿ , ಮೋಸದ ತಂತ್ರ , ನವಿರಾದ ಪ್ರೀತಿ , ಗುರು ಶಿಷ್ಯರ ಬಾಂಧವ್ಯ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬಿಸಿದುಕೊಂಡು ಕುತೂಹಲಕಾರಿಯಾಗಿ ಸಾಗುವ ಕಥಾವಸ್ತುವನ್ನು ಒಳಗೊಂಡಿರುವಂತಹ ಗರಡಿ ಚಿತ್ರ ಈ ವಾರ ತೆರೆಯ ಮೇಲೆ ಬಂದಿದೆ.
ರಟೆಹಳ್ಳಿಯ ಗರಡಿ ಮನೆಯ ಕೋರಪೇಟ್ ರಂಗಪ್ಪ ತನ್ನ ಶಿಷ್ಯಂದಿರಿಗೆ ಪೈಲ್ವಾನ್ ತರಬೇತಿ ನೀಡುವುದೇ ಕಾಯಕ. ತನ್ನ ಜೀವದ ಗೆಳೆಯ ಬಂಡೆ ಸೀನ ಸಾವಿನ ನಂತರ ಅವರ ಇಬ್ಬರ ಮಕ್ಕಳನ್ನ ತನ್ನ ಗರಡಿ ಮನೆಯಲ್ಲಿ ಸಾಕುತ್ತಾನೆ. ಹಿರಿಯ ಮಗ ಶಂಕರ ಪೈಲ್ವಾನ್ ನಾಗಿ ತರಬೇತಿ ಪಡೆದು ಫೈನಲ್ ಅಖಾಡದಲ್ಲಿ ಪ್ರಶಸ್ತಿ ತರುವ ಸಮಯಕ್ಕೆ ಒಂದು ಎಡವಟ್ಟು ಮಾಡಿಕೊಂಡು ಪೊಲೀಸ್ ಕಸ್ಟಡಿಗೆ ಸೇರಬೇಕಾಗುತ್ತದೆ.
ಉಸ್ತಾದ್ ರಂಗಪ್ಪ ( ಬಿ.ಸಿ. ಪಾಟೀಲ್) ತಂದೆಯಂತೆ ಮಕ್ಕಳು ಕ್ರಿಮಿನಲ್ ಹಾದಿ ಹಿಡಿಯುತ್ತಾರೆ ಎಂಬ ಆಲೋಚನೆಯಿಂದ ಕಿರಿಯ ಮಗ ಸೂರಿ (ಸೂರ್ಯ) ನನ್ನ ಪೈಲ್ವಾನ್ ತರಬೇತಿ ನೀಡಿದೆ ಗರಡಿ ಮನೆಯಲ್ಲಿ ಕಸರತ್ತು ಮಾಡುವ ಕುಸ್ತಿಪಟುಗಳಿಗೆ ಸೇವೆ ಮಾಡುವ ಕೆಲಸಕ್ಕೆ ನೇಮಿಸುತ್ತಾನೆ. ರಂಗಪ್ಪ ಹೇಳಿದಂತೆ ನಡೆದುಕೊಳ್ಳುತ್ತಾನೆ. ಆದರೆ ಗುರು ರಂಗಪ್ಪನನ್ನು ದ್ರೋಣಾಚಾರ್ಯರಂತೆ ಪೂಜಿಸಿ ಏಕಲವ್ಯನಾಗಿ ಅವರ ಕಣ್ಣಿಗೆ ಕಾಣದೆ ಕುಸ್ತಿಯ ಪಟ್ಟುಗಳನ್ನು ಕಟ್ಮಾಸ್ತಾಗಿ ತರಬೇತಿ ಪಡೆದು ಕೊಳ್ಳುತ್ತಿರುತ್ತಾನೆ.
ಇವನಿಗೆ ರಂಗಪ್ಪಣ್ಣನ ಬಂಟ ಆತ್ಮೀಯ ಗೆಳೆಯ ಬೌವ್ವ(ಧರ್ಮಣ್ಣ) ಸಹಕಾರವು ಇರುತಿದೆ. ಇದರ ನಡುವೆ ರಾಣೆ ಕುಟುಂಬದ ಊರಿನ ಮುಖಂಡ ಶಿವಪ್ಪ ( ರವಿಶಂಕರ್) ತನ್ನ ಎರಡು ಮಕ್ಕಳನ್ನ ರಂಗಪ್ಪನ ಗರಡಿಗೆ ಕಳಿಸಿ ಪೈಲ್ವಾನ್ನಾಗಿಸಿ ಕೊರಪೇಟ್ ಪ್ರಶಸ್ತಿ ಪಡೆಯಲು ತರಬೇತಿ ನೀಡುವಂತೆ ಸೂಚಿಸುತ್ತಾನೆ. ಆದರೆ ಹಿರಿಯ ಮಗ ಗಜೇಂದ್ರನ ವರ್ತನೆ ಸರಿ ಇಲ್ಲದ ಕಾರಣ ಕಿರಿಯ ಮಗ ಪ್ರಮೋದ್ ರಾಣೆ (ಸುಜಯ್ ಬೇಲೂರು) ಗೆ ಕುಸ್ತಿಯ ಪಟ್ಟುಗಳನ್ನು ಹೇಳಿಕೊಡುತ್ತಾರೆ.
ಇದರ ನಡುವೆ ಅದೇ ಊರಿನ ಸುಂದರ ಬೆಡಗಿ ಪಪ್ಪಿ ಸುಕನ್ಯ ಕಾಬ್ಬಲಿ (ಸೋನಾಲ್) ತನ್ನ ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಸೆಲ್ಫಿ ಲೈವ್ ಮಾಡುವ ಮೂಲಕ ಫೇಮಸ್ ಆಗುವ ಮಹಾದಾಸೆಯನ್ನು ಹೊಂದಿರುತ್ತಾಳೆ. ಅವಳಿಗೆ ಜೀವದ ಗೆಳತಿ (ನಯನ) ಸಾತ್ ನೀಡುತ್ತಾಳೆ. ಅಚಾನಕ್ಕಾಗಿ ಸೂರಿ ಒಮ್ಮೆ ಕಾಬ್ಬಲಿ ಭೇಟಿಯಾಗುತ್ತಾನೆ. ಬಾಲ್ಯದ ಗೆಳೆತನ ಅವನ ಪ್ರೀತಿಗೆ ದಾರಿ ಮಾಡಿಕೊಡುತ್ತದೆ. ಇತ್ತ ಪ್ರಮೋದ್ ರಾಣೆಯ ಕಸರತ್ತು ಕುಸ್ತಿ ಸ್ಪರ್ಧೆಗೆ ಭರ್ಜರಿ ತಯಾರು ನಡಿತಿರುತ್ತದೆ.
ಸೆಲ್ಫಿ ಸುಕನ್ಯಾ ಕೂಡ ಪ್ರಮೋದ್ ಕಸರತ್ತಿನ ಲೈವ್ ಪ್ರಮೋಷನ್ ಕೂಡ ಮಾಡುತ್ತಿರುತ್ತಾಳೆ. ಇತ್ತ ಪ್ರಮೋದ್ ಕಣ್ಣು ಸುಕನ್ಯಾ ಮೇಲೆ ಬಿದ್ದಿರುತ್ತದೆ. ಮತ್ತೊಂದೆಡೆ ಸೂರಿಗೂ ಕೂಡ ಕುಸ್ತಿ ಆಡಿ ಕಪ್ ಗೆಲ್ಲುವ ಮಹದಾಸೆ ಹೊಂದಿರುತ್ತಾರೆ. ಕುಸ್ತಿಪಟುಗಳ ಅಖಾಡದಲ್ಲಿ ಸೂರಿ ಹಾಗೂ ಪ್ರಮೋದ್ ಎದುರಾಳಿಯಾಗಿ ತಮ್ಮ ತಮ್ಮ ಶಕ್ತಿ ಸಾಮರ್ಥ್ಯ ತೋರಿಸುತ್ತಾರೆ. ಆದರೆ ಪ್ರಮೋದ್ ಕುಸ್ತಿಯಲ್ಲಿ ಗೆದ್ದು ಕೋರಪೇಟ್ ಬಿರುದು ಪಡೆದು ಕಪ್ಪನ್ನು ಕೂಡ ಗೆಲ್ಲುತ್ತಾನೆ. ಮುಂದೆ ರೋಚಕ ತಿರುವು ಎದುರಾಗಿ ಕೊಲೆ ಒಂದು ನಡೆಯುತ್ತದೆ.
ಕೊಲೆಯಾದವರು ಯಾರು…
ನಡೆದ ಸತ್ಯ ಏನು…
ಪ್ರೇಯಸಿಗೆ ಪ್ರೀತಿ ಸಿಗುತ್ತಾ…
ಕ್ಲೈಮಾಕ್ಸ್ ನಲ್ಲಿ ಬರುವವರು ಯಾರು…
ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಗರಡಿ ಚಿತ್ರದ ದರ್ಶನವನ್ನು ಮಾಡಬೇಕು.
ಒಂದು ದೇಸಿಯ ಗರಡಿ ಮನೆಯ ಗತ್ತು, ಗಮ್ಮತ್ತನ್ನು ಪ್ರೇಕ್ಷಕರಿಗೆ ತೋರಿಸುವ ನಿಟ್ಟಿನಲ್ಲಿ ಧೈರ್ಯ ಮಾಡಿ ನಿರ್ಮಿಸಿರುವ ನಿರ್ಮಾಪಕರಾದ ವನಜಾ ಪಾಟೀಲ್ ಹಾಗೂ ಸೃಷ್ಟಿ ಪಾಟೀಲ್ ಸಾಹಸವನ್ನು ಮೆಚ್ಚಲೇಬೇಕು. ಇನ್ನು ನಿರ್ದೇಶಕ ಯೋಗರಾಜ್ ಭಟ್ ಗರಡಿ ಮನೆಯ ಅಂಗಳದಲ್ಲಿರುವ ವಿಚಾರ , ಅವರ ಶಿಸ್ತು , ಪ್ರಾಮಾಣಿಕತೆ ಬಗ್ಗೆ ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತೋರಿಸುವುದರ ಜೊತೆಗೆ ಅದರ ಹಿಂದೆ ನಡೆಯುವ ಕುತಂತ್ರ ಬುದ್ಧಿಯ ಅನಾವರಣವನ್ನು ಕೂಡ ತೆರೆದಿಟ್ಟಿದ್ದಾರೆ.
ಇದರೊಟ್ಟಿಗೆ ಗರಡಿಯ ಮೂಲದ ಬಗ್ಗೆ ಒಂದಷ್ಟು ಹೇಳಬಹುದಿತ್ತು. ಇನ್ನು ಆಯ್ಕೆ ಮಾಡಿರುವ ಪಾತ್ರಗಳಲ್ಲಿ ಕೊಂಚ ಜರಡಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಇನ್ನು ಚಿತ್ರದ ಓಟ ವೇಗ ಮಾಡಬಹುದಿತ್ತು. ಇನ್ನು ಕುಸ್ತಿ ಪಟುಗಳ ಕಸರತ್ತು , ಅಖಾಡದಲ್ಲಿ ನಡೆಯುವ ಪಟ್ಟುಗಳು ಗಮನ ಸೆಳೆಯುತ್ತದೆ. ಇನ್ನು ವಿ. ಹರಿಕೃಷ್ಣ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿಬಂದಿದೆ.
ಅದೇ ರೀತಿ ಛಾಯಾಗ್ರಹಕ ನಿರಂಜನ್ ಬಾಬು ರವರ ಕ್ಯಾಮೆರಾ ಕೈಚಳಕ ಕೂಡ ಸೊಗಸಾಗಿದೆ. ನಾಯಕನಾಗಿ ಅಭಿನಯಿಸಿರುವ ಸೂರ್ಯ ಈ ಚಿತ್ರಕ್ಕಾಗಿ ಶ್ರಮ ಪಟ್ಟಿರುವುದು ಕಾಣುತ್ತದೆ. ಮಾತಿನ ವರಸೆ , ಪಟ್ಟುಗಳನ್ನು ಹಾಕಿರುವ ಪರಿ ಜೊತೆಗೆ ಪ್ರೇಮಿಯಾಗಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ನಟಿ ಸೋನಾಲ್ ಕೂಡ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಹಿರಿಯ ನಟ ಬಿ.ಸಿ. ಪಾಟೀಲ್ ಗರಡಿ ಮನೆಯ ಉಸ್ತಾದ್ ಕೋರಪೇಟ್ ರಂಗಪ್ಪನಾಗಿ ಗತ್ತಿನಲ್ಲಿ ಅಭಿನಯಿಸಿದ್ದಾರೆ.
ಯುವ ಪ್ರತಿಭೆ ಸುಜಯ್ ಕೂಡ ಬಹಳಷ್ಟು ತಯಾರಿ ಮಾಡಿಕೊಂಡು ಅಖಾಡಕ್ಕೆ ಬದ್ಧಂತಿದ್ದಾರೆ. ಎಂದಿನಂತೆ ಖಳನಟ ರವಿಶಂಕರ್ ತಮ್ಮ ಕಣ್ಣಿನ ನೋಟದಲ್ಲೇ ಅದ್ಭುತ ನಟನೆಯನ್ನು ನೀಡಿದ್ದಾರೆ. ನಾಯಕನ ಗೆಳೆಯನಾಗಿ ಅಭಿನಯಿಸಿರುವ ಧರ್ಮಣ್ಣ ಕೂಡ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಇನ್ನು ಪ್ರಮುಖ ಸಂದರ್ಭದಲ್ಲಿ ಎಂಟ್ರಿ ಕೊಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಡೀ ಚಿತ್ರದ ಓಟಕ್ಕೆ ಮತ್ತಷ್ಟು ಪುಷ್ಟಿಯನ್ನು ಕೊಟ್ಟಿದ್ದಾರೆ.
ಕಣ್ಣನ್ನು ತಂಪಾಗಿಸಲು ಕಾಣಿಸಿಕೊಳ್ಳುವ ನಿಶ್ವಿಕಾ ನಾಯ್ಡು ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಈ ಗರಡಿ ಚಿತ್ರವನ್ನು ಕುಟುಂಬ ಸಮೇತ ಎಲ್ಲರೂ ಬಂದು ನೋಡುವಂತಿದೆ