ರಾಮ್ ಚರಣ್ ಜೊತೆ ಕೈ ಜೋಡಿಸಿದ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್
ಎ.ಆರ್.ರೆಹಮಾನ್ ಬಹುಶಃ ಈ ಹೆಸರು ಕೇಳದವರೇ ಇಲ್ಲವೇನೋ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಸಂಗೀತ ಮಾಂತ್ರಿಕನ ಸಂಗೀತಕ್ಕೆ ತಲೆ ತೂಗದವರಿಲ್ಲ. ಎರಡೆರಡು ಆಸ್ಕರ್ ಪ್ರಶಸ್ತಿ ಗೆದ್ದ ಖ್ಯಾತಿ ಇವರದ್ದು. ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಖ್ಯಾತಿ ಅವರಿಗೆ ಇದೆ. ಆರು ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ, ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಸಂಗೀತ ಮಾಂತ್ರಿಕನಿಗಿಂದು ಜನ್ಮದಿನದ ಸಂಭ್ರಮ.
ರೆಹಮಾನ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಹೊಸ ಪ್ರಾಜೆಕ್ಟ್ ಗಳು ಅನೌನ್ಸ್ ಮಾಡಲಾಗಿದೆ. ಅದರಂತೆ ಮ್ಯೂಸಿಕ್ ಮಾಂತ್ರಿಕ ರಾಮ್ ಚರಣ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದು ಅಧಿಕೃತವಾಗಿ ಕನ್ಫರ್ಮ್ ಆಗಿದೆ. ರೆಹಮಾನ್ ಜನ್ಮದಿನಕ್ಕೆ ಶುಭಾಶಯ ಕೋರಿ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಅವರನ್ನು ತಮ್ಮ ತಂಡಕ್ಕೆ ಸ್ವಾಗತ ಮಾಡಿಕೊಂಡಿಕೊಂಡಿದೆ.
ತ್ರಿಬಲ್ ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ರಾಮ್ ಚರಣ್ ಗೇಮ್ ಚೇಂಜರ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬು ಸಾನಾ ಕೈ ಜೋಡಿಸಿದ್ದಾರೆ. ಮೊದಲ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದಿರುವ ಬುಚ್ಚಿ ಹಾಗೂ ಚೆರ್ರಿ ಪ್ರಾಜೆಕ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಕ್ರೇಜಿ ಕಾಂಬೋದ ಪ್ರಾಜೆಕ್ಟ್ ಗೆ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಬುಚ್ಚಿ ಬಾಬು ಕಥೆ ಬರೆದು ಆಕ್ಷನ್ ಕಟ್ ಹೇಳಲಿರುವ ಈ ಸಿನಿಮಾವನ್ನು ವೃದ್ಧಿ ಸಿನಿಮಾಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಬ್ಯಾನರ್ ನಡಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ತ್ರಿಬಲ್ ಆರ್ ಸಿನಿಮಾ ನಿರ್ಮಿಸಿದ್ದ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸಲಿದೆ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಸದ್ಯ ಸಂಗೀತ ನಿರ್ದೇಶಕರನ್ನು ಪರಿಚಯಿಸಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗವನ್ನು ಪರಿಚಯಸಲಿದೆ