ಇದೇ 19 ರಂದು ಆದಿವಾಸಿಗಳ ಹೋರಾಟದ ಕಥೆ “ಅಡವಿ” ಬಿಡುಗಡೆ
ಕಾಡಿನಲ್ಲಿ ವಾಸಿಸುವ ಆದಿವಾಸಿಗಳ ಹೋರಾಟದ ಬದುಕನ್ನು ತೆರೆದಿಡುವ ಚಿತ್ರ ಅಡವಿ ಇದೇ ತಿಂಗಳ ೧೯ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾಡಿನ ಜನರ ಬದುಕು ಮತ್ತು ಅವರ ಸಂಘರ್ಷದ ಕಥೆಯೊಂದಿಗೆ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಇಟ್ಟುಕೊಂಡು, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಟೈಗರ್ ನಾಗ್ ಅವರು ಚಿತ್ರಕಥೆ ಬರೆದು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಇತ್ತೀಚೆಗೆ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಹಲವಾರು ಗಣ್ಯರು ಭಾಗವಹಿಸಿ ಅಡವಿ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗ್ ಅಡವಿ ಆದಿವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸೋ ಕಥೆ. ಅವರು ಜೀವನಕ್ಕಾಗಿ ಏನೆಲ್ಲ ಪರದಾಡುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ.
ನನ್ನಂಥ ಬಡ ನಿರ್ಮಾಪಕರಿಗೆ ಮಾದರಿಯಾಗಬೇಕು, ಮುಂದೆ ಬರುವವರಿಗೆ ಅನುಕೂಲವಾಗ ಬೇಕೆಂದು ನಿರ್ಧರಿಸಿ, ಹಣದ ಬೇಡಿಕೆ ಇಟ್ಟ ಸೆನ್ಸಾರ್ ಮಂಡಳಿ ವಿರುದ್ದ ಕಾನೂನು ಹೋರಾಟ ನಡೆಸಿದೆ. ಸಿಬಿಐಗೆ ಹೋದಾಗ ಅವರು ಸಾಕ್ಷಾಧಾರ ಸಮೇತ ಸಿಕ್ಕಿಹಾಕಿಕೊಂಡರು. ಅವಶ್ಯಕತೆ ಇಲ್ಲದೆ ಅಂಬೇಡ್ಕರರನ್ನು ವೈಭವೀಕರಿಸಿದ್ದೀರಿ ಎಂಬುದು ಅವರ ಆಕ್ಷೇಪವಾಗಿತ್ತು. ನನ್ನ ಜೊತೆ ಸಾರ್ಥಕ್ ಕೋ ಪ್ರೊಡ್ಯೂಸರ್ ಆಗಿ ಕೈಜೋಡಿಸಿದ್ದಾರೆ ಎಂದು ಹೇಳಿದರು.
ನಂತರ ನಾಯಕ ನಟ ಮೋಹನ್ ಕುಮಾರ್ ಮಾತನಾಡಿ ಇದು ನನ್ನ ನಾಲ್ಕನೇ ಚಿತ್ರ. ಸಿದ್ದ ಎಂಬ ಆದಿವಾಸಿ ಜನಾಂಗದ ಅಮಾಯಕ ಯುವಕ. ತೊಂದರೆ ಕೊಟ್ಟಾಗ ಹೇಗೆ ತಿರುಗುಬಿದ್ದು ಹೋರಾಡುತ್ತಾನೆಂದು ಹೇಳಲಾಗಿದೆ ಎಂದರು. ನಾಯಕಿ ಶಿಲ್ಪಾ ಮಾತನಾಡುತ್ತ ನಾನು ಮಲ್ಲಿ ಎಂಬ ಇನ್ನೋಸೆಂಟ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರೆ, ಮತ್ತೊಬ್ಬ ನಾಯಕಿ ಅರುಂಧತಿ ಮಾತನಾಡಿ ಮಾಡೆಲಿಂಗ್ ಮಾಡಿಕೊಂಡಿದ್ದೆ. ಸಿದ್ದನನ್ನು ತನ್ನವನಾಗಿ ಮಾಡಿಕೊಳ್ಳಲು ಟ್ರೈ ಮಾಡೋ ಹುಡುಗಿಯಾಗಿ ನಟಿಸಿದ್ದೇನೆ. ಮೂರೂವರೆ ತಿಂಗಳು ಕಾಡಿನ ಜನರ ಜೊತೆ ಬೆರೆತು ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು.
ನಾಯಕನ ತಾಯಿ ಪಾತ್ರ ಮಾಡಿರುವ ರಚಿಕಾ, ವಿಲನ್ ಪಾತ್ರಧಾರಿ ಅರ್ಜುನ್ ಪಾಳೇಗಾರ, ಸಂತೋಷದೇವ್, ನಿರ್ದೇಶಕ ನಾಗೇಂದ್ರ ಮಾಗಡಿ, ಜೀವಾ, ಚಂದ್ರು ಚಿತ್ರದ ಕುರಿತಂತೆ ಮಾತನಾಡಿದರು. ಮಂಜು ಮಹಾದೇವ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಇತ್ತೀಚೆಗೆ ವಿ.ಮನೋಹರ್ ಅವರ ಸಾಹಿತ್ಯದ 2500ನೇ ಗೀತೆಯನ್ನು ಇತ್ತೀಚೆಗೆ ಪಾ.ರಂಜಿತ್ ರಿಲೀಸ್ ಮಾಡಿದ್ದರು.
ಕಾಡಿನ ಮೂಲ ನಿವಾಸಿಗಳ ಜೀವನ, ತಮ್ಮ ಸ್ವಚ್ಛಂದ ಬದುಕಿಗಾಗಿ ಅವರು ನಡೆಸುವ ಹೋರಾಟ, ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆಯುವ ಪ್ರಯತ್ನ ಕಥೆಯಲ್ಲಿದೆ. ಅಡವಿ ಚಿತ್ರವನ್ನು ಐತಿಹಾಸಿಕ ಸಿದ್ದರಬೆಟ್ಟ, ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಸುತ್ತಮುತ್ತ ಚಿತ್ರೀಕರಿಸಲಾಗಿದೆ.
ವಿಪಿನ್ ವಿ ರಾಜ್ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ ವಿಜಯಕುಮಾರ್ ಎವಿ, ಸಹ ನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮಾನಾಯಕ್, ಉಗ್ರಂ ದೇವು, ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ.ರ.ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ, ಟೈಗರ್ ನಾಗ್, ಆನಂದ್, ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.